ADVERTISEMENT

‘ಮುಡಾ’ ಪ್ರಕರಣ ಸಿಬಿಐಗೆ ವಹಿಸಲಿ: ಕೇಂದ್ರ ಸಚಿವ ಜೋಶಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 15:54 IST
Last Updated 4 ಆಗಸ್ಟ್ 2024, 15:54 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ಮುಡಾ, ವಾಲ್ಮಿಕಿ ಅಭಿವೃದ್ಧಿ ನಿಗಮ ಮಂಡಳಿಯ ಭ್ರಷ್ಟಾಚಾರದ ಹಣ ಕಾಂಗ್ರೆಸ್‌ ಹೈಕಮಾಂಡ್‌ಗೂ ತಲುಪಿರುವ ಅನುಮಾನವಿದೆ. ಇದು ಸುಳ್ಳು ಎನ್ನುವುದನ್ನು ಸಾಬೀತು ಪಡಿಸಲು ತಕ್ಷಣ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಮುಡಾ ಹಗರಣದಲ್ಲಿ ಸಾಕ್ಷ್ಯಾಧಾರ ಸಮೇತ ಸಿಕ್ಕಿಬಿದ್ದಿದ್ದಾರೆ. ಬೇರೆಯವರ ಹೆಸರಿಗೆ ನೋಂದಣಿಯಾದ ಜಾಗವನ್ನು, ಸಿಎಂ ಪತ್ನಿ ಅವರ ತಮ್ಮ ಖರೀದಿಸುತ್ತಾರೆ. ನಂತರ ಅದನ್ನು ಸಿಎಂ ಪತ್ನಿಗೆ ನೀಡುತ್ತಾರೆ. ಅವರ ಪತ್ನಿ ಹೆಸರಲ್ಲಿದ್ದ ಜಾಗ ಡಿ ನೋಟಿಫಿಕೇಷನ್‌ ಆಗುತ್ತದೆ. ಕೃಷಿ ಭೂಮಿಯಾಗಿರದ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಾರೆ. ನಂತರ ತನಗೆ 14 ನಿವೇಶನ ಬೇಕು, ಇಲ್ಲದಿದ್ದರೆ ₹62 ಕೋಟಿ ನೀಡಬೇಕು ಎಂದು ಬೇಡಿಕೆ ಇಡುತ್ತಾರೆ. ಲಜ್ಜೆಗೆಟ್ಟ ಮುಖ್ಯಮಂತ್ರಿ ಇವರಾಗಿದ್ದಾರೆ’ ಎಂದು ಕಿಡಿಕಾರಿದರು.

‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ರಾಜ್ಯಪಾಲರು ಕಾನೂನು ತಜ್ಞರ ಸಲಹೆ ಪಡೆದು ಸಂವಿಧಾನಬದ್ಧವಾಗಿ ಮುಖ್ಯಮಂತ್ರಿ ಅವರಿಗೆ ನೋಟಿಸ್‌ ನೀಡಿ, ಸ್ಪಷ್ಟನೆ ಕೇಳಿದ್ದಾರೆ. ಆದರೆ, ಸರ್ಕಾರವು ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಲು ಆಯೋಗ ರಚನೆ ಮಾಡಿರುವುದು ತಪ್ಪಿಸಿಕೊಳ್ಳಲು ರಹದಾರಿ. ಇದರಲ್ಲಿಯೇ ನಾಲ್ಕು ವರ್ಷ ಕಳೆಯುವ ಉದ್ದೇಶ. ಇದೊಂದು ಗೇಮ್‌ಪ್ಲಾನ್‌ ಇದ್ದಂತೆ’ ಎಂದು ಟೀಕಿಸಿದರು.  

ADVERTISEMENT

ಜಾತಿ ಹೆಸರಿನಲ್ಲಿ ರಕ್ಷಣೆ ಸರಿಯಲ್ಲ:

‘ಯಾವುದೇ ಪ್ರಕರಣಗಳಲ್ಲಿ ಜಾತಿ ತರುವ ಪ್ರಶ್ನೆಯೇ ಇಲ್ಲ. ಅದರಿಂದ ಸಂರಕ್ಷಣೆ ಪಡೆಯುವುದು ಹೇಡಿತನ. ಭ್ರಷ್ಟಾಚಾರಕ್ಕೆ ಯಾವುದೇ ಜಾತಿ ಇಲ್ಲ. ಎಲ್ಲರಿಗೂ ಕಾನೂನು ಅನ್ವಯಿಸುತ್ತದೆ. ಭ್ರಷ್ಟಾಚಾರ ಹಗರಣಗಳು ನಡೆಯದಿದ್ದರೆ ಯಾರೂ ಪ್ರಶ್ನಿಸುತ್ತಿರಲಿಲ್ಲ. ಏನೂ ಆಗಿಲ್ಲವಾದರೆ ನ್ಯಾಯಾಂಗ ತನಿಖೆಗೆ ಯಾಕೆ ನೀಡಿದ್ದೀರಿ’ ಎಂದು ಪ್ರಶ್ನಿಸಿದರು. 

‘ರಾಜ್ಯ ಸರ್ಕಾರ ಕೇವಲ ಒಂದೂವರೆ ವರ್ಷ ಪೂರೈಸುವ ಮೊದಲೇ ಹಲವು ಭ್ರಷ್ಟಾಚಾರ ಪ್ರಕರಣಗಳು ಹೊರಬರುತ್ತಿವೆ. ಇಂತಹ ಭ್ರಷ್ಟಾಚಾರ ಪ್ರಕರಣವು ಮುಖ್ಯಮಂತ್ರಿ ಅವರ ಮೇಲೆ ಬಂದಿರುವುದು ರಾಜ್ಯದ ದುರ್ದೈವ‘ ಎಂದರು. 

ಪಿಎಸ್‌ಐ ಸಾವು ಸಂಶಯ: 

‘ಯಾದಗಿರಿಯಲ್ಲಿ ದಲಿತ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಹಣ ನೀಡದಿದ್ದರೆ ವರ್ಗಾಹಿಸುತ್ತೇವೆ ಎಂದು ಕಾಂಗ್ರೆಸ್‌ ಶಾಸಕ ಹಾಗೂ ಅವರ ಪುತ್ರ ಒತ್ತಡ ಹಾಕಿದ್ದಾರೆ. ಇದರಿಂದ ಮನನೊಂದು ಆ ಪೊಲೀಸ್‌ ಅಧಿಕಾರಿ ಅಚಾನಕ್ಕಾಗಿ ಸಾವನ್ನಪ್ಪುತ್ತಾರೆ. ಅವರ ಸಾವಿನಿಂದ ಅನೇಕ ಸಂಶಯಗಳು ಹುಟ್ಟಿಕೊಂಡಿವೆ‘ ಎಂದರು.

ಪೊಲೀಸ್‌ ಠಾಣೆಗಳು ಹರಾಜು: 

‘ರಾಜ್ಯ ಸರ್ಕಾರ ಪೊಲೀಸ್ ಠಾಣೆಗಳನ್ನು ಹರಾಜಿಗಿಟ್ಟಿದೆ. ಮೊದಲು ಹರಾಜು ಕೂಗಬೇಕಿತ್ತು. ಇವಾಗ ಆನ್‌ಲೈನ್‌ ಮೂಲಕ ನಡೆಯುತ್ತಿದೆ. ಉತ್ತಮ ಹಣ ನೀಡಿದವರಿಗೆ ಸಂಬಂಧಿಸಿದ ಠಾಣೆಗಳಿಗೆ ಪೊಲೀಸ್‌ ಅಧಿಕಾರಿಯ ವರ್ಗಾವಣೆಯಾಗುತ್ತದೆ. ನಂತರ ಆ ಅಧಿಕಾರಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡಲು ಆರಂಭಿಸುತ್ತಾನೆ. ಇದು ಅಧಿಕಾರಿಗಳ ತಪ್ಪಲ್ಲ. ಸರ್ಕಾರದ ತಪ್ಪು‘ ಎಂದು ಜೋಶಿ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.