ADVERTISEMENT

ಸೌಹಾರ್ದ ಮೊಹರಂ: ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 6:51 IST
Last Updated 6 ಜುಲೈ 2025, 6:51 IST
<div class="paragraphs"><p>ಮೊಹರಂ ಪ್ರಯುಕ್ತ ಹುಬ್ಬಳ್ಳಿಯ ಬೊಮ್ಮಾಪುರ ಓಣಿಯಲ್ಲಿ ಯುವಕರು ಹುಲಿವೇಷದಲ್ಲಿ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು</p><p></p></div>

ಮೊಹರಂ ಪ್ರಯುಕ್ತ ಹುಬ್ಬಳ್ಳಿಯ ಬೊಮ್ಮಾಪುರ ಓಣಿಯಲ್ಲಿ ಯುವಕರು ಹುಲಿವೇಷದಲ್ಲಿ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು

   

   ಪ್ರಜಾವಾಣಿ ಚಿತ್ರ: ಗುರು ಹಬೀಬ

ADVERTISEMENT

ಹುಬ್ಬಳ್ಳಿ: ಜಾತಿ, ಧರ್ಮಗಳನ್ನು ಮೀರಿ ಸೌಹಾರ್ದ ಸಂಬಂಧವನ್ನು ಬೆಸೆಯುವ ಮೊಹರಂ ಆಚರಣೆಗೆ ಎಲ್ಲೆಡೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಆಚರಣೆಗೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. 

ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಮೊಹರಂ ಆಚರಿಸಲಾಗುವುದು. 

ಮುಸ್ಲಿಮರು ಅಲ್ಲದೇ ಹಿಂದೂಗಳು ಜೊತೆಗೂಡಿ ಆಚರಿಸುವ ಮೊಹರಂ ಹಬ್ಬವು ಎಲ್ಲರೊಡನೆ ಬಾಂಧವ್ಯ ಮೂಡಿಸುತ್ತದೆ. ಒಂದೆಡೆ ಮಕ್ಕಳು, ಯುವಜನರು ಹುಲಿವೇಷ ಹಾಕಿಕೊಂಡು ಓಡಾಡಿದರೆ, ಇನ್ನೊಂದೆಡೆ ಮಸೀದಿ ಮತ್ತು ದರ್ಗಾಗಳಲ್ಲಿ ವಾರದ ಮುಂಚೆಯೇ ವಿವಿಧ ಧಾರ್ಮಿಕ ಕಾರ್ಯಗಳು ಆರಂಭಗೊಳ್ಳುತ್ತವೆ.

ಹಿಂದೂಗಳು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸುತ್ತಾರೆ. ಅಲಾಯಿ ದೇವರುಗಳನ್ನು ಹೊತ್ತು ಸಾಗುತ್ತಾರೆ. ಕೊಬ್ಬರಿ– ಕಾರೀಕು ಹರಕೆ ತೀರಿಸುವುದು ಈ ಆಚರಣೆಯ ವಿಶೇಷ. ಇಷ್ಟಾರ್ಥ ಈಡೇರಿಸಲು ಕೋರಿ ಪ್ರಾರ್ಥಿಸುತ್ತಾರೆ. ತಮ್ಮ ಕೈಯಲ್ಲಿ ಸಾಧ್ಯವಾದುದ್ದನ್ನು ಕೊಡುವುದಾಗಿ ಹರಕೆ ಹೊತ್ತುತ್ತಾರೆ.

ಮೊಹರಂ ಪ್ರಯುಕ್ತ ಮಾರುಕಟ್ಟೆಗಳಲ್ಲೂ ವ್ಯಾಪಕ ಜನಜಂಗುಳಿ ಏರ್ಪಡುತ್ತದೆ. ಮಕ್ಕಳು, ಯುವಜನರು ಅಲ್ಲದೇ ಹೆಣ್ಣುಮಕ್ಕಳು ಇಷ್ಟಪಡುವಂತಹ ಉಡುಪುಗಳು ಮಾರುಕಟ್ಟೆಯಲ್ಲಿ ಪ್ರದರ್ಶಿಸಲಾಗುತ್ತದೆ. ಕಡಿಮೆ ದರದಲ್ಲಿ ಅವು ಮಾರಾಟವಾಗುತ್ತವೆ. 

ಹಬ್ಬದ ಆಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ತಡೆಯಲು ಬಹುತೇಕ ಕಡೆ ಪೊಲೀಸರು ನಿಗಾ ವಹಿಸಿದ್ದಾರೆ. ಕೆಲ ಸೂಕ್ಷ್ಮ ಪ್ರದೇಶಗಳ ಸುತ್ತಮುತ್ತ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಿ, ಕಟ್ಟೆಚ್ಚರ ವಹಿಸಲಾಗಿದೆ.

‘ಮೊಹರಂ ಅಂಗವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲವು ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೊಹರಂ ಪಂಜಾ ಮೆರವಣಿಗೆ ಸಂದರ್ಭ ಅಹಿತಕರ ಘಟನೆಗಳು ನಡೆಯಬಾರದು ಎಂದು ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಶಾಂತಿ ಕದಡುವ ಕೆಲಸಕ್ಕೆ ಯಾರಾದರೂ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

ಹುಬ್ಬಳ್ಳಿ–ಧಾರವಾಡ ಮದ್ಯ ಮಾರಾಟ ನಿಷೇಧ
ಮೊಹರಂ  ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಜುಲೈ 6ರಂದು ಬೆಳಿಗ್ಗೆ 6 ರಿಂದ ಜುಲೈ 7ರ ಬೆಳಿಗ್ಗೆ 6ರವರೆಗೆ ಮದ್ಯ ಮಾರಾಟ ಮತ್ತು ಸಾಗಣೆ ನಿಷೇಧಿಸಲಾಗಿದೆ. ಮದ್ಯದ ಅಂಗಡಿ, ಬಾರ್‌ಗಳನ್ನು ಮುಚ್ಚಬೇಕು. ಆದೇಶ ಮೀರಿ ನಡೆದುಕೊಂಡರೆ ಪರವಾನಗಿ ರದ್ದು ಪಡಿಸಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಎನ್.ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.