ADVERTISEMENT

ಹುಬ್ಬಳ್ಳಿ | ಗಣೇಶ ಹಬ್ಬ: ಪಾಲಿಕೆಯಿಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 8:14 IST
Last Updated 5 ಆಗಸ್ಟ್ 2025, 8:14 IST
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಗಣೇಶ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮೇಯರ್‌ ಜ್ಯೋತಿ ಪಾಟೀಲ ಮಾತನಾಡಿದರು
ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಗಣೇಶ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮೇಯರ್‌ ಜ್ಯೋತಿ ಪಾಟೀಲ ಮಾತನಾಡಿದರು ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಜಲಮೂಲ ರಕ್ಷಣೆ ನಮ್ಮ ಆದ್ಯತೆಯಾಗಿದ್ದು, ಯಾವುದೇ ಕಾರಣಕ್ಕೂ ಪಿಒಪಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಗಣೇಶಮೂರ್ತಿ ಖರೀದಿಸುವವರು ಮೂರ್ತಿ ತಯಾರಕರಿಂದ ಕಡ್ಡಾಯವಾಗಿ ರಶೀದಿ ಪಡೆಯಬೇಕು’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದರು.

ಇಲ್ಲಿನ ಸವಾಯಿ ಗಂಧರ್ವ ಸಭಾಭವನದಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸೋಮವಾರ ಕರೆದಿದ್ದ ಗಣೇಶೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು‌.

‘ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡುವ ಸಮಿತಿಗಳು ಸಹ ಮೂರ್ತಿ ಖರೀದಿಸಿರುವ ಕುರಿತು ರಶೀದಿ ಪಡೆಯಲೇಬೇಕು. ಒಂದು ವೇಳೆ ಪಿಒಪಿ ಮೂರ್ತಿಯಾಗಿದ್ದರೆ, ಯಾರು ತಯಾರಿಸಿದ್ದು ಎನ್ನುವುದನ್ನು ಸುಲಭವಾಗಿ ಕಂಡು ಹಿಡಿಯಬಹುದು’ ಎಂದರು.

ADVERTISEMENT

‘ಜಿಲ್ಲಾಡಳಿತವು ಸಹ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪಿಒಪಿ ಮೂರ್ತಿಗಳನ್ನು ಬಳಸಬಾರದು ಎಂಬ ಸುಪ್ರೀಂಕೋರ್ಟ್‌ ಆದೇಶ ಪಾಲನೆ ಮಾಡುವುದು ಎಲ್ಲರ ಕರ್ತವ್ಯ’ ಎಂದು ಹೇಳಿದರು.

‘ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಅನುಮತಿ ನೀಡಲು ಏಕಗವಾಕ್ಷಿ ಪದ್ಧತಿ ಜಾರಿಗೆ ತಂದಿದ್ದು, ಮಂಗಳವಾರದಿಂದಲೇ ಅದು ಆರಂಭವಾಗಲಿದೆ. ಪ್ರತಿ ವರ್ಷ ಹಬ್ಬಕ್ಕೆ ಒಂದು ವಾರ ಇರುವಾಗ ಏಕಗವಾಕ್ಷಿಯಡಿ ಅನುಮತಿ ನೀಡಲಾಗುತ್ತಿತ್ತು. ಕೊನೆ ಗಳಿಗೆಯಲ್ಲಿ ಗೊಂದಲಗಳು ಉಂಟಾಗಬಾರದು ಎಂದು ಪ್ರಸ್ತುತ ವರ್ಷ ಮೂರು ವಾರ ಮೊದಲೇ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಅರ್ಜಿ ಪರಿಶೀಲನೆ ನಡೆಸಿ, ತ್ವರಿತವಾಗಿ ಅನುಮತಿ ನೀಡಲಿದ್ದಾರೆ’ ಎಂದು ತಿಳಿಸಿದರು. 

‘ಮೂರ್ತಿಗಳ ವಿಸರ್ಜನೆಗೆ ಬಾವಿಗಳನ್ನು ಶುಚಿಗೊಳಿಸುವುದು, ಮೆರವಣಿಗೆ ಸಾಗುವ ಮಾರ್ಗದಲ್ಲಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೇಯರ್‌, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆಗಳು ನಡೆದಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಎಲ್ಲವೂ ಪೂರ್ಣಗೊಳ್ಳಲಿದೆ’ ಎಂದು ವಿವರಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಗದೀಶ ಮಾತನಾಡಿ, ‘ಪಿಒಪಿ ಮೂರ್ತಿಗಳನ್ನು ನಿಷೇಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಕಾನೂನಿನಿಂದ ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ, ಸಾರ್ವನಿಕರು ಸಹ ಜಾಗೃತರಾಗಬೇಕು’ ಎಂದರು.

ಹುಬ್ಬಳ್ಳಿ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಮಾತನಾಡಿ, ‘ಹಬ್ಬದ ಸಂದರ್ಭ ಅನ್ನದಾಸೋಹ ನಡೆಯುತ್ತದೆ. ಆ ವೇಳೆ ಗಣೇಶ ಪೆಂಡಾಲ್‌ಗಳ ಬಳಿ ಭಕ್ತರಿಗೆ ಬರಲು ಅನುಕೂಲವಾಗುವಂತೆ ಜೀರೊ ಟ್ರಾಫಿಕ್ ಮಾಡಬೇಕು. ಮೂರ್ತಿ ವಿಸರ್ಜನಾ ಮೆರವಣಿಗೆ ಸಾಗುವ ಮಾರ್ಗ ಸಂಪೂರ್ಣ ಹಾಳಾಗಿದ್ದು ಸರಿಪಡಿಸಬೇಕು. ವಿದ್ಯುತ್ ಪೂರೈಕೆ ಸಮಸ್ಯೆಯಾಗದಂತೆ ಹಾಗೂ ರಾತ್ರಿ 12ರವರೆಗೂ ಧ್ವನಿವರ್ಧಕ ಬಳಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ಉಪಮೇಯರ್ ಸಂತೋಷ ಚವ್ಹಾಣ, ಇನ್‌ಸ್ಪೆಕ್ಟರ್‌ ಎಂ.ಎಸ್‌. ಹೂಗಾರ,  ಶಾಂತರಾಜ ಪೋಳ, ಅಲ್ತಾಫ್ ಕಿತ್ತೂರು, ಇಮ್ರಾನ್‌ ಯಲಿಗಾರ, ಶಿವಾನಂದ ಮುತ್ತಣ್ಣವರ, ಪಾಲಿಕೆ ಅಧೀಕ್ಷಕ ಎಂಜಿನಿಯರ್‌ ವಿಜಯಕುಮಾರ್‌ ಇದ್ದರು.

ಪಿಒಪಿ ಮೂರ್ತಿ ನಿಯಂತ್ರಿಸಲು ಪ್ರತಿ ವಲಯಮಟ್ಟದಲ್ಲಿ ರಚಿಸಲಾದ ಟಾಸ್ಕ್‌ಫೋರ್ಸ್‌ ತಂಡ ನಿರಂತರ ಕಾರ್ಯಾಚರಣೆ ನಡೆಸಲಿದೆ. ಗಡಿ ಪ್ರದೇಶದಲ್ಲೂ ಚೆಕ್‌ಪೋಸ್ಟ್‌ ನಿರ್ಮಿಸಿ ಪರಿಶೀಲಿಸಲಾಗುತ್ತಿದೆ
ರುದ್ರೇಶ ಘಾಳಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ
ಧ್ವನಿವರ್ಧಕ ಬಳಕೆಯ ಸಮಯ ವಿಸ್ತರಿಸುವಂತೆ ಸಾರ್ವಜನಿಕರಿಂದ ಸಾಕಷ್ಟು ಮನವಿಗಳು ಬಂದಿವೆ. ಪಾಲಿಕೆ ಅಧಿಕಾರಿಗಳ ಹಾಗೂ ಪೊಲೀಸ್‌ ಇಲಾಖೆ ಜೊತೆ ಚರ್ಚಿಸಲಾಗುವುದು
ಜ್ಯೋತಿ ಪಾಟೀಲ ಮೇಯರ್‌ ಹು–ಧಾ ಮಹಾನಗರ ಪಾಲಿಕೆ

‘ಧ್ವನಿವರ್ಧಕ ಬಳಕೆ ಸಮಯ ವಿಸ್ತರಿಸಿ’:

ಸಾರ್ವಜನಿಕರೊಂದಿಗೆ ನಡೆದ ಸಂವಾದದಲ್ಲಿ ಬಹುತೇಕರು ಧ್ವನಿವರ್ಧಕ ಬಳಕೆಯ ಸಮಯ ವಿಸ್ತರಿಸುವಂತೆ ಆಗ್ರಹಿಸಿದರು.  ಮದ್ಯ ಸೇವನೆ ಸಂಪೂರ್ಣ ನಿಷೇಧವಾಗಬೇಕು ದಾಜೀಬಾನ್‌ಪೇಟೆ ಮುಖ್ಯ ರಸ್ತೆಯಿಂದ ವಿಸರ್ಜನಾ ಮೆರವಣಿಗೆ ನಡೆಸುವ ಬದಲು ಕೊಪ್ಪಿಕರ್‌ ರಸ್ತೆ ಮುಖಾಂತರ ನಡೆಸಿದರೆ ಜಾಗದ ಸಮಸ್ಯೆ ಎದುರಾಗುವುದಿಲ್ಲ ಎನ್ನುವ ಸಲಹೆಯನ್ನೂ ನೀಡಿದರು.

ಇದೇ ವೇಳೆ ಸಾರ್ವಜನಿಕರೊಬ್ಬರು ‘ಪಿಒಪಿ ಗಣೇಶಮೂರ್ತಿ ನಿಷೇಧ ಎಂದು ಹೇಳುತ್ತೀರಿ. ಬೃಹತ್‌ ಮೂರ್ತಿಗಳನ್ನು ಪಿಒಪಿಯಲ್ಲೇ ಸಿದ್ಧಪಡಿಸಿರುತ್ತಾರೆ. ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಮೂರ್ತಿಗಳ ಬೇಡಿಕೆಯಿದೆ. ಅಷ್ಟೊಂದು ಪ್ರಮಾಣದಲ್ಲಿ ಮಣ್ಣಿನ ಮೂರ್ತಿ ತಯಾರಿಸಲು ಸಾಧ್ಯವಿಲ್ಲ. ಇದಕ್ಕೇನು ಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸಿದರು. ‘ಮಣ್ಣಿನಲ್ಲೇ ಗಣೇಶ ಮೂರ್ತಿಗಳನ್ನು ತಯಾರಿಸುವಂತೆ ಕಲಾವಿದರಿಗೆ ಮನವಿ ಮಾಡಲಾಗಿದೆ’ ಎಂದು ಆಯುಕ್ತ ರುದ್ರೇಶ ಘಾಳಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.