
ಧಾರವಾಡ: ನಗರದ ಮುರುಘಾಮಠದ ಮುರುಘೇಂದ್ರ ಶಿವಯೋಗಿಯವರ 96ನೇ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಮಧ್ಯಾಹ್ನ 4 ಗಂಟೆಗೆ ಮುರುಘೇಂದ್ರ ಶಿವಯೋಗಿಯವರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು. ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರು ‘ಹರ ಹರ ಮಹಾದೇವ’ ಎಂದು ಜಯಘೋಷ ಮೊಳಗಿಸಿದರು. ‘ಜೈ ಮುರುಘೇಶ’, ‘ಜೈ ಅಥಣೇಶ’, ‘ಭಾರತ ದೇಶ’, ‘ಜೈ ಬಸವೇಶ’ ಎಂಬ ಭಕ್ತರ ಘೋಷಗಳ ನಡುವೆ ಸಾಗಿದ ರಥಕ್ಕೆ ಉತ್ತತ್ತಿ, ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಲಾಯಿತು.
ಮಠದಿಂದ ಹೊರಟ ರಥವು ಸವದತ್ತಿ ಮುಖ್ಯ ರಸ್ತೆಯಲ್ಲಿ ಸಾಗಿ ಹಾವೇರಿಪೇಟ ಡಿಪೋ ವೃತ್ತದವರೆಗೆ ತಲುಪಿ ಮಠಕ್ಕೆ ಮರಳಿ ಸಂಪನ್ನಗೊಂಡಿತು. ಡೊಳ್ಳು ಕುಣಿತ, ಪುರವಂತರ ಕುಣಿತ, ಭಜನಾ ಮೇಳ, ಜಾಂಜ್ ಮೇಳದ ತಂಡಗಳು ಮೆರುಗು ನೀಡಿದವು. ಅಮ್ಮಿನಬಾವಿ, ಹೆಬ್ಬಳ್ಳಿ, ಶಿವಳ್ಳಿ, ಮುಮ್ಮಿಗಟ್ಟಿ, ಬೇಲೂರ, ಕೋಟೂರ, ನಿಗದಿ, ಕರಡಿಗುಡ್ಡ, ಸುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದರು.
ಮಠದ ಹೊರ ಭಾಗದಲ್ಲಿ ಆಟಿಕೆ ಅಂಗಡಿಗಳು, ತಿಂಡಿ, ತಿನಿಸುಗಳ ಅಂಗಡಿಗಳಲ್ಲಿ ಮಾರಾಟ ಭರಾಟೆ ಜೋರಾಗಿತ್ತು. ಚಿಣ್ಣರು ಮೋಜಿನ ಆಟದ ಮೇಳದಲ್ಲಿ ಆಟವಾಡಿ ಸಂಭ್ರಮಿಸಿದರು. ರಥೋತ್ಸವ ಅಂಗವಾಗಿ ಸವದತ್ತಿ ರಸ್ತೆಯಲ್ಲಿ ಸ್ವಲ್ಪಹೊತ್ತು ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
- ಗದ್ದುಗೆ ದರ್ಶನ
ಜಾತ್ರಾಮಹೋತ್ಸವ ಪ್ರಯುಕ್ತ ಬೆಳಿಗ್ಗೆ ಮುರುಘೇಂದ್ರ ಸ್ವಾಮೀಜಿ ಶಿವಯೋಗಿ ಸ್ವಾಮೀಜಿ ಮಹಾಂತ ಸ್ವಾಮೀಜಿ ಅವರ ಕರ್ತೃ ಗದ್ದುಗೆಯನ್ನು ವಿಶೇಷ ಅಲಂಕಾರಗೊಳಿಸಿ ಪೂಜೆ ಸಲ್ಲಿಸಲಾಯಿತು. ಭಕ್ತರು ದರ್ಶನ ಪಡೆದು ದಾಸೋಹದಲ್ಲಿ ಮಾದ್ಲಿ ಹಾಲು ಬದನೆಕಾಯಿ ಪಲ್ಲೆ ಅನ್ನ ಸಾಂಬಾರು ಸವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.