ಧಾರವಾಡ: ಪಂಡಿತ ಪಂಚಾಕ್ಷರ ಗವಾಯಿ ಹಾಗೂ ಪಂಡಿತ ಪುಟ್ಟರಾಜ ಗವಾಯಿ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ನಾವೀಕಾ ರಂಗಭೂಮಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪಂಡಿತ ಪಂಚಾಕ್ಷರ ಗವಾಯಿಗಳ 15ನೇ ಪುಣ್ಯ ಸ್ಮರಣೆ ಅಂಗವಾಗಿ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಈಚೆಗೆ ನಡೆದ ಪಂಡಿತ ಪಂಚಾಕ್ಷರ ಗವಾಯಿಗಳ ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಂಚಾಕ್ಷರ ಗವಾಯಿಗಳು ಬಹುದೊಡ್ಡ ಶಿಷ್ಯ ಪರಂಪರೆ ಬೆಳೆಸಿದ್ದು ಜಗತ್ತಿನಾದ್ಯಂತ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ ಪ್ರತ್ಯೇಕಿಸಲು ಕಾರಣವಾದರು ಎಂದರು.
‘ಸಕಲ ವಾದ್ಯಗಳ ಪರಿಣಿತರಾದ ಪುಟ್ಟರಾಜ ಗವಾಯಿ ಅವರು 140ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ, ಸಂಸ್ಕೃತ ಹಾಗೂ ಹಿಂದಿ ಭಾಷೆಗಳಲ್ಲಿ `ಬಸವ ಪುರಾಣ’ ಬರೆದು ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದರು.
ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಮೃತ್ಯುಂಜಯ ಶೆಟ್ಟರ, ಚಂದ್ರಮೌಳಿ ನಾಯ್ಕರ, ಶಂಕರ ಹಲಗತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ದಾಕ್ಷಾಯಣಿ ಹಿರೇಮಠ, ಪದ್ಮಾವತಿ ದೇವಶಿಖಾಮಣಿ, ಆರತಿ ದೇವಶಿಖಾಮಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.