ADVERTISEMENT

ನಾರಾಯಣಗುರುಗಳ ಹೋರಾಟದಿಂದ ಸಮಾಜ ತಲೆ ಎತ್ತಿದೆ

ಈಡಿಗ ಭವನ ಉದ್ಘಾಟನಾ ಸಮಾರಂಭದಲ್ಲಿ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 13:08 IST
Last Updated 9 ಅಕ್ಟೋಬರ್ 2021, 13:08 IST
ಧಾರವಾಡದ ಸತ್ತೂರಿನಲ್ಲಿರುವ ಆರ್ಯ ಈಡಿಗ ಭವನವನ್ನು ಜಗದೀಶ ಶೆಟ್ಟರ್ ಉದ್ಘಾಟಿಸಿದರು. ಬಸವರಾಜ ಹೊರಟ್ಟಿ, ಡಾ. ಎಂ.ತಿಮ್ಮೇಗೌಡ ಇದ್ದಾರೆ.
ಧಾರವಾಡದ ಸತ್ತೂರಿನಲ್ಲಿರುವ ಆರ್ಯ ಈಡಿಗ ಭವನವನ್ನು ಜಗದೀಶ ಶೆಟ್ಟರ್ ಉದ್ಘಾಟಿಸಿದರು. ಬಸವರಾಜ ಹೊರಟ್ಟಿ, ಡಾ. ಎಂ.ತಿಮ್ಮೇಗೌಡ ಇದ್ದಾರೆ.   

ಧಾರವಾಡ: ‘ಬ್ರಹ್ಮಶ್ರೀ ನಾರಾಯಣಗುರುಗಳು ಅಂದು ದೇವಾಲಯ ಪ್ರವೇಶಕ್ಕಾಗಿ ಹೋರಾಟ ಮಾಡದಿದ್ದರೆ ಇಂದು ಈಡಿಗ ಸಮುದಾಯದ ಜನರು ಇಸ್ಲಾಂ, ಇಲ್ಲವೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಬೇಕಾಗಿತ್ತು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟರು.

ಇಲ್ಲಿನ ಸತ್ತೂರಿನಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘ ಹಾಗೂ ಧಾರವಾಡ ಜಿಲ್ಲಾ ಆರ್ಯ ಈಡಿಗ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಈಡಿಗ ಭವನ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಅಂದುಸಾಮಾಜಿಕ ಹೋರಾಟ ಮಾಡಿದ್ದರ ಫಲವಾಗಿ ಈಡಿಗ ಸಮುದಾಯದ ಜನ ಇಂದು ಸಮಾಜದಲ್ಲಿ ತಲೆ ಎತ್ತಿ ಬದುಕುತ್ತಿದ್ದಾರೆ.ಸಮುದಾಯ ರಾಜಕೀಯವಾಗಿ ಪ್ರಬಲವಾಗಿದ್ದರೆ ಸಮಾಜದ ಕೆಲಸಗಳಿಗೆ ಹಣ ದೊರೆಯುತ್ತದೆ. ಈ ಕೆಲಸಗಳಿಗಾಗಿ ನಾವು ಒಗ್ಗಟ್ಟಿನಿಂದ, ಧೈರ್ಯದಿಂದ ಮುನ್ನುಗ್ಗಬೇಕು. ಸಮಾಜದಲ್ಲಿ ಎಲ್ಲ ಸಮುದಾಯದವರಿಗೆ ಸಮಾನವಾದ ಅವಕಾಶಗಳಿವೆ. ಅದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

ADVERTISEMENT

‘ನಮ್ಮ ಸಮಾಜ ಜನಸಂಖ್ಯೆಯಲ್ಲಿ ಚಿಕ್ಕದು. ಆದರೆ, ದೇಶದ ಅತ್ಯಂತ ಶ್ರೀಮಂತ ಮಹಿಳೆ ರಶ್ಮಿ ನಾಡರ ಅವರಂತವರೂ ಇದ್ದಾರೆ. ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸಮಾಜ ಇನ್ನಷ್ಟು ಬೆಳವಣಿಗೆ ಕಾಣಬೇಕಿದೆ. ಸಮುದಾಯದ ವತಿಯಿಂದ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವ ಉದ್ದೇಶವಿದೆ’ ಎಂದು ಹರಿಪ್ರಸಾದ್ ಹೇಳಿದರು.

ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ‘ತಮ್ಮ ಕೆಲಸದಲ್ಲಿ ಶ್ರಮವಹಿಸಿ ಕೆಲಸ ಮಾಡುವವರು ಈಡಿಗ ಸಮಾಜದವರು.ಸಾಮಾಜಿಕ ಸಮಾನತೆಗಾಗಿ, ವ್ಯವಸ್ಥೆಯಲ್ಲಿ ಬದಲಾವಣೆ ತರಲು ನಾರಾಯಣ ಗುರುಗಳು ಶ್ರಮಿಸಿದ್ದಾರೆ‌. ನಾರಾಯಣಗುರುಗಳ ಮಾರ್ಗದರ್ಶನ ಹಾಗೂ ಆದರ್ಶದಂತೆ ಸಮಾಜದವರು ನಡೆಯುತ್ತಿದ್ದಾರೆ. ಎಲ್ಲರೂ ಸೇರಿ ಶ್ರಮವಹಿಸಿದಾಗ ಸಮಾಜದ ಅಭಿವೃದ್ಧಿಯಾಗುತ್ತದೆ’ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಈಡಿಗ ಸಮಾಜದ ಎಲ್ಲರೂ ಸೇರಿ ಈ ಕಟ್ಟಡ ನಿರ್ಮಾಣದ ಮೂಲಕ ಸಮಾಜದ ಮಕ್ಕಳ ವಿದ್ಯಾಭ್ಯಾಸದ ಮುನ್ನುಡಿಗೆ ಕಾರಣಿಕರ್ತರಾಗಿದ್ದಾರೆ. ವಿಖ್ಯಾತಾನಂದ ಸ್ವಾಮೀಜಿ ಅವರ ಪರಿಶ್ರಮದಿಂದಾಗಿ ಸಮಾಜದ ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಊಟದ ವ್ಯವಸ್ಥೆ ಕಲ್ಪಿಸುವ ಉದ್ದೇಶ ಇದರಿಂದ ಈಡೇರಲಿದೆ. ಇದಕ್ಕೆ ಸರ್ಕಾರದ ಸೌಲಭ್ಯ ಕೊಡಿಸಲು ಬದ್ಧ’ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ₹5ಲಕ್ಷ ಅನುದಾನ ನೀಡಿದರು.

ಕಲ್ಯಾಣ ಕರ್ನಾಟಕ ಮಾನವ ಅಭಿವೃದ್ಧಿ ಕೃಷಿ ಕಲ್ಯಾಣ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ಸಂಪತ್ತು ನಮ್ಮ ಬಳಿ ಇರುತ್ತದೆ. ಅದರ ಸದುಪಯೋಗವಾಗುವುದಿಲ್ಲ. ಅದೇ ರೀತಿ ಹತ್ತು ವರ್ಷಗಳ ಹಿಂದೆ ದೊರೆತ ಈ ಜಾಗಕ್ಕೆ ಈಗ ಒಂದು ರೂಪ ಬಂದಿದೆ. ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಈಗಲೇ ಸಹಾಯ ಮಾಡಿ ಮುಂದೆ ಅವರು ಸಮಾಜಕ್ಕೆ ಸಹಾಯ ಹಸ್ತ ನೀಡುವಂತೆ ಮಾಡಬೇಕು’ ಎಂದರು.

ಬೆಂಗಳೂರು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಪ್ರದೇಶ ಈಡಿಗ ಸಂಘದ ಅಧ್ಯಕ್ಷ ಡಾ. ಎಂ. ತಿಮ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು. ವೀರಭದ್ರಪ್ಪ ಹಾಲಹರವಿ, ಜೆ.ಪಿ. ಸುಧಾಕರ್, ಅಶೋಕ ಖಾಟವೆ, ಡಾ. ಚಂದ್ರಶೇಖರ ಢವಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.