
ಹುಬ್ಬಳ್ಳಿ: ‘ಒಂದು ಭಾರತ, ಶ್ರೇಷ್ಠ ಭಾರತ’ ಎಂಬ ಪರಿಕಲ್ಪನೆಯ 21ನೇ ಶತಮಾನದ ಅಭಿವೃದ್ಧಿಯ ಶ್ರೇಷ್ಠ ಭಾರತ ನಿರ್ಮಾಣದಲ್ಲಿ ಯುವಸಮೂಹದ ಪಾತ್ರ ಮಹತ್ವದ್ದಾಗಿದೆ. ಎಲ್ಲರೂ ರಾಷ್ಟ್ರೀಯ ಏಕತೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜ್ ಆವರಣದಿಂದ ತೋಳಕೆರೆಯವರೆಗೆ ಶನಿವಾರ ಹಮ್ಮಿಕೊಂಡಿದ್ದ ‘ಸರ್ದಾರ್@150 ಏಕತಾ ಪಾದಯಾತ್ರೆ’ಗೆ ಚಾಲನೆ ನೀಡಿ ಅವರು, ಮಾತನಾಡಿದರು.
‘ಏಕೀಕರಣ ಭಾರತ ನಿರ್ಮಾಣದಲ್ಲಿ ಮಹತ್ವವಾದ ಪಾತ್ರ ವಹಿಸಿದ, ಉಕ್ಕಿನ ಮನುಷ್ಯ ಎಂದೇ ಹೆಸರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ಈ ಏಕತಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಯುವಕರು ಸರ್ದಾರ್ ಪಟೇಲರ ದೇಶಾಭಿಮಾನ, ಧೈರ್ಯ ಹಾಗೂ ಸಾಹಸ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು‘ ಎಂದು ಸಲಹೆ ನೀಡಿದರು.
‘ಅಂದು ಭಾರತವು 560ಕ್ಕೂ ಹೆಚ್ಚು ರಾಜಾಡಳಿತ ಸಂಸ್ಥಾನಗಳಿಂದ ಹಂಚಿಹೋಗಿತ್ತು. ಅವುಗಳನ್ನು ಭಾರತದ ಒಕ್ಕೂಟದೊಳಗೆ ಸೇರ್ಪಡೆಗೊಳಿಸುವಲ್ಲಿ ಸರ್ದಾರ್ ಪಟೇಲರ ಧೈರ್ಯ ಮೆಚ್ಚುವಂತದ್ದು. ಈ ಬಗ್ಗೆ ಇತಿಹಾಸದಲ್ಲಿ ದಾಖಲಾಗಿದೆ. ಇದನ್ನು ಎಲ್ಲರೂ ಅಧ್ಯಯನ ಮಾಡಬೇಕು’ ಎಂದರು.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಅಶೋಕ ಶೆಟ್ಟರ್ ಅವರು, ‘ಒಂದೇ ಭಾರತದ ಪರಿಕಲ್ಪನೆ ಹಾಗೂ ಸಮಗ್ರ ಭಾರತದ ರೂಪರೇಷೆಯನ್ನು ನೀಡಿದವರು ಸರ್ದಾರ್ ವಲ್ಲಭಭಾಯಿ ಪಟೇಲರು. ವಿಭಿನ್ನ ಸಂಸ್ಕೃತಿ, ಭಾಷೆ, ಧರ್ಮಗಳನ್ನು ಒಳಗೊಂಡ ಅಖಂಡ ಭಾರತ ನಿರ್ಮಾಣದಲ್ಲಿ ಸರ್ದಾರ್ ಪಟೇಲರ ಪಾತ್ರ ಮಹತ್ವದ್ದಾಗಿದೆ’ ಎಂದರು.
ಇದೇ ವೇಳೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥವಾಗಿ ಬಿವಿಬಿ ಕ್ಯಾಂಪಸ್ ಆವರಣದಲ್ಲಿ ಸಸಿ ನೆಟ್ಟು, ನೀರುಣಿಸಲಾಯಿತು.
ಜಿಲ್ಲಾಡಳಿತ, ಮೇರಾ ಯುವ ಭಾರತ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಹಾಗೂ ಹು–ಧಾ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ವಿಕಸಿತ ಭಾರತ ಪಾದಯಾತ್ರೆಯ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಸ್ವಯಂ ಸೇವಕರು, ಯುವಕರು ಸೇರಿದಂತೆ ಸಾವಿರಕ್ಕೂ ಅಧಿಕ ಜನರು ಈ ಜಿಲ್ಲಾ ಮಟ್ಟದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ವಿಶ್ವವಿದ್ಯಾಲಯದ ಎನ್ಎಸ್‌ಎಸ್ ಕೋಶದ ಕಾರ್ಯಕ್ರಮ ಸಂಯೋಜನಾಧಿಕಾರಿ ಎಂ.ಬಿ.ದಳಪತಿ ಅವರು, ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಹು–ಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಗೌತಮ ರೆಡ್ಡಿ, ಬೀರೇಶ ಹಾಗೂ ಪ್ರಮುಖರು ಹಾಜರಿದ್ದರು.
ಏಕತಾ ಪಾದಯಾತ್ರೆಯಲ್ಲಿ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗಿ ‘ಆನಂದಮಠ’ ಕೃತಿ ಓದಲು ಸಲಹೆ
ಭಾರತ ಭೂಮಿ ಮಾತ್ರವಲ್ಲ; ಇದೊಂದು ಮಾತೃಭೂಮಿ. ವಿವಿಧ ಧರ್ಮ ಜಾತಿ ವಿಶಿಷ್ಟ ಸಂಸ್ಕೃತಿ ಭಾಷೆಗಳನ್ನು ಒಳಗೊಂಡ ಸಮಗ್ರ ರಾಷ್ಟ. ನಾವೇಲ್ಲರೂ ಭಾರತೀಯರು ಎಂಬ ಭಾವನೆ ಬೆಳೆಸಿಕೊಳ್ಳಬೇಕುಪ್ರಲ್ಹಾದ ಜೋಶಿ ಕೇಂದ್ರ ಸಚಿವ
‘ವಂದೇ ಮಾತರಂ’ ಕವಿತೆ ರಚನೆಗೂ 150 ವರ್ಷ’
‘ಪಶ್ಚಿಮ ಬಂಗಾಳದ ಕವಿ ಬಂಕಿಮ್ ಚಂದ್ರ ಚಟರ್ಜಿ ಅವರು ರಚಿಸಿದ ‘ವಂದೇ ಮಾತರಂ’ ಕವಿತೆ ರಚನೆಯಾಗಿ 150 ವರ್ಷಗಳಾಗಿವೆ. ಬ್ರಿಟಿಷ್ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿ ಉಂಟು ಮಾಡಿದ ಕವಿತೆಯಿದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ‘ದೇಶದಾದ್ಯಂತ ಸಂಚಲನ ಮೂಡಿಸಿದ ಈ ಗೀತೆಯೂ ಅಂದು ಬ್ರಿಟಿಷರ ನಿದ್ದೆಯನ್ನೂ ಕಸಿದುಕೊಂಡಿತ್ತು. ಇಂತಹ ದೇಶಾಭಿಮಾನವನ್ನು ಮೂಡಿಸಿದ ಕವಿತೆಯು ಬಂಕಿಮ್ ಚಂದ್ರ ಚಟರ್ಜಿ ಅವರ ಕಾದಂಬರಿ ‘ಆನಂದಮಠ’ದಲ್ಲಿ ಪ್ರಕಟವಾಗಿದೆ. ಈ ಕೃತಿಯನ್ನು ಸಹ ಎಲ್ಲರೂ ಓದಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.