ನವಲಗುಂದ: ಹೆಸರು ಬೆಳೆದಿರುವ ರೈತರ ಜಮೀನುಗಳಿಗೆ ಸಹಾಯಕ ಕೃಷಿ ನಿರ್ದೇಶಕ ತಿಪ್ಪೆಸ್ವಾಮಿ ವಿ., ಬೆಳವಟಗಿ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ರಫಿ ಮತ್ತು ಅಧಿಕಾರಿಗಳು ಈಚೆಗೆ ಭೇಟಿ ನೀಡಿ ಪರಿಶೀಲಿಸಿದರು.
ಬೆಳೆಗೆ ಹಳದಿ ಹಾಗೂ ಬೂದು ರೋಗ ಬಂದಿದ್ದರಿಂದ ರೈತರು ಆತಂಕಗೊಂಡಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಜುಲೈ 28ರಂದು ‘ಹೆಸರು ಬೆಳೆಗೆ ಹಳದಿ ರೋಗ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.
ರಫಿ ಮಾತನಾಡಿ, ‘ನಿರಂತರವಾಗಿ ಮಳೆಯಾಗುತ್ತಿದ್ದು, ಜಮೀನಿನಲ್ಲಿ ನಿಂತ ನೀರನ್ನು ಬಸಿಗಾಲುವೆ ಮೂಲಕ ಹೊರ ಹಾಕಬೇಕು. ತಗ್ಗು ಪ್ರದೇಶಗಳಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದು, ಬೆಳೆ ಪುನಶ್ಚೇತನಕ್ಕೆ 13:0:45 ಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರೆಸಿ ಸಿಂಪಡಣೆ ಮಾಡಬೇಕು’ ಎಂದು ಸಲಹೆ ನೀಡಿದರು.
ಹೆಸರು ಮತ್ತು ಉದ್ದು ಬೆಳೆಗಳಲ್ಲಿ ಎಲೆ ಚುಕ್ಕೆ ರೋಗ ನಿರ್ವಹಣೆಗೆ ರಾಸಾಯನಿಕ ಸಿಂಪಡಿಸಬೇಕು. ಹೆಸರು ಮತ್ತು ಉದ್ದಿನ ಬೆಳೆಗಳಲ್ಲಿ ನಂಜುರೋಗ ಕಂಡುಬಂದಲ್ಲಿ ಪ್ರಾರಂಭದ ಹಂತದಲ್ಲಿಯೇ ಸಸಿಗಳನ್ನು ಗುರುತಿಸಿ ಕಿತ್ತು ಮಣ್ಣಿನಲ್ಲಿ ಹೂಳಬೇಕು ಎಂದರು.
ಈ ವೇಳೆ ಕೃಷಿ ಇಲಾಖೆ ಅಧಿಕಾರಿ ಎಂ.ಕೆ.ಕಳ್ಳಿಮನಿ, ರೈತರಾದ ನಾಗಪ್ಪ ಹಳ್ಳದ, ಶಿವಾನಂದ ಹಳ್ಳದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.