
ನವಲಗುಂದ: ಗೋವಿನಜೋಳ ಬೆಳೆಗೆ ಕ್ವಿಂಟಲ್‌ಗೆ ₹3 ಸಾವಿರ ಬೆಂಬಲ ಬೆಲೆ ಘೋಷಿಸಬೇಕು. ಹೆಸರು ಕಾಳನ್ನು ಮೂರು ವರ್ಗಗಳನ್ನಾಗಿ ವಿಂಗಡಿಸಿ ಖರೀದಿಸಬೇಕೆಂದು ಆಗ್ರಹಿಸಿ ರೈತ ಸೇನಾ ಕರ್ನಾಟಕ ಆರಂಭಿಸಿದ ಉಪವಾಸ ಸತ್ಯಾಗ್ರಹ ಮೂರನೆ ದಿನಕ್ಕೆ ಕಾಲಿಟ್ಟಿದ್ದು, ಉಪವಾಸ ನಿರತ ರೈತ ಸೇನಾ ಕರ್ನಾಟಕದ ಅಧ್ಯಕ್ಷ ಶಂಕರಪ್ಪ ಅಂಬಲಿ ಆರೋಗ್ಯದಲ್ಲಿ ಭಾನುವಾರ ವ್ಯತ್ಯಾಸ ಕಂಡುಬಂದಿತು.
ಈ ಕುರಿತು ಮಾತನಾಡಿದ ಶಂಕರಪ್ಪ ಅಂಬಲಿ ಅವರು, ’ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ’ ಎಂದು ಆರೋಪಿಸಿದರು.
‘ಸಣ್ಣ ಹಿಡುವಳಿದಾರ ರೈತರು ಈಗಾಗಲೇ ತಮ್ಮ ಕುಟುಂಬದ ಸಮಸ್ಯೆ ನಿವಾರಣೆಗೆ ಅನಿವಾರ್ಯವಾಗಿ ಕ್ವಿಂಟಲ್‌ಗೆ ಕೇವಲ ₹1500ಕ್ಕೆ ಗೋವಿನಜೋಳವನ್ನು ಮಾರಾಟ ಮಾಡುವಂತಹ ಸ್ಥಿತಿ ಇದೆ. ಸರ್ಕಾರ ಕೂಡಲೇ ಗೋವಿನಜೋಳ ಖರೀದಿಗೆ ಮುಂದಾಗಬೇಕು’ ಎಂದು ಆಗ್ರಹಿಸಿದರು.
ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಉಪವಾಸ ಸತ್ಯಾಗ್ರಹ ನಿಲ್ಲಿಸಲು ಮನವಿ ಮಾಡಿದರು. ಆದರೆ, ಹೋರಾಟಗಾರರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಭರವಸೆ ನೀಡುವವರೆಗೂ ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಶಂಕರಪ್ಪ ಅಂಬಲಿಯವರ ಆರೋಗ್ಯ ಸಮಸ್ಯೆಯಾಗಿದ್ದು, ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದರಿಂದ ಸ್ಥಳದಲ್ಲಿಯೇ ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡಿದರು.
ಶೇಶಪ್ಪ ಬೆಳಹಾರ, ಪ್ರವೀಣ ಯರಗಟ್ಟಿ, ಶಂಕರಗೌಡ ಪಾಟೀಲ್, ಲೋಕನಾಥ ಹೆಬಸೂರ, ಎಸ್.ಎಸ್.ಪಾಟೀಲ, ಅರುಣ ಪಟ್ಟಣಶೆಟ್ಟಿ, ಬಸನಗೌಡ ಪಾಟೀಲ, ಸಿದ್ದಲಿಂಗಪ್ಪ ಮಾಶ್ಯಾಳ, ಸಿದ್ದು ನಿಡವಣಿ, ಈರಣ್ಣ ಸೊಪ್ಪಿನ ಮತ್ತಿತರರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.