ADVERTISEMENT

ಧಾರ್ಮಿಕ ಆಚರಣೆಗಷ್ಟೇ ನವರಾತ್ರಿ ಸೀಮಿತ

ಕೋವಿಡ್‌ ಪರಿಣಾಮ: ಈ ಬಾರಿ ಇಲ್ಲ ದಾಂಡಿಯಾ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 14:23 IST
Last Updated 18 ಅಕ್ಟೋಬರ್ 2020, 14:23 IST
ನವರಾತ್ರಿ ಅಂಗವಾಗಿ ಹುಬ್ಬಳ್ಳಿಯ ದಾಜೀಬಾನ್‌ ಪೇಟೆಯ ತುಳಜಾ ಭವಾನಿ ದೇವಸ್ಥಾನವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ
ನವರಾತ್ರಿ ಅಂಗವಾಗಿ ಹುಬ್ಬಳ್ಳಿಯ ದಾಜೀಬಾನ್‌ ಪೇಟೆಯ ತುಳಜಾ ಭವಾನಿ ದೇವಸ್ಥಾನವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ   

ಹುಬ್ಬಳ್ಳಿ: ಪ್ರತಿ ವರ್ಷ ನವರಾತ್ರಿ ಬಂತೆಂದರೆ ಸಾಕು ನಗರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ ಎದ್ದು ಕಾಣುತಿತ್ತು. ಆದರೆ, ಈ ಬಾರಿ ಕೋವಿಡ್‌ ಪರಿಣಾಮದಿಂದ ದಾಂಡಿಯಾ ಸೇರಿದಂತೆ ಯಾವುದೇ ಸಾಂಸ್ಕೃತಿಕ ನೃತ್ಯಗಳ ಸೊಬಗು ಇರುವುದಿಲ್ಲ.

ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಸರ್ಕಾರ ಹೆಚ್ಚು ಜನ ಸೇರಿವಂತಿಲ್ಲ ಎಂದು ಮಾರ್ಗಸೂಚಿ ಹೊರಡಿಸಿದೆ. ನಗರದಲ್ಲಿ ಪ್ರಮುಖವಾಗಿ ಕಾರ್ಯಕ್ರಮ ನಡೆಯುತ್ತಿದ್ದ ಗುಜರಾತ್‌ ಭವನದಲ್ಲಿ ಈ ಬಾರಿ ಯಾವ ಸಡಗರವೂ ಇಲ್ಲ. ನವರಾತ್ರಿ ಸಮಯದಲ್ಲಿ ದೇಶಪಾಂಡೆ ನಗರದಲ್ಲಿರುವ ಗುಜರಾತ್‌ ಭವನದ ಮುಂದುಗಡೆ ಹಾದು ಹೋಗುವುದೇ ಸಂಭ್ರಮದಂತಿರುತ್ತಿತ್ತು. ಝಗಮಗಿಸುವ ವಿದ್ಯುತ್‌ ದೀಪಗಳ ಬೆಳಕು, ಭವನದ ಒಳಗಡೆ ದೇವರ ವಿವಿಧ ಅಲಂಕಾರಗಳು, ಮಕ್ಕಳಿಂದ ದೇವರ ಅಲಂಕಾರಿಕ ಪ್ರತಿರೂಪಗಳು ಹೀಗೆ ಪ್ರತಿಯೊಂದು ಆಕರ್ಷಕವಾಗಿರುತ್ತಿದ್ದವು.

ಕೋವಿಡ್‌ ಪೂರ್ವದಲ್ಲಿ ರಾತ್ರಿ 7 ಗಂಟೆ ಸುಮಾರಿಗೆ ಅರಂಭವಾಗುತ್ತಿದ್ದ ಗುಜರಾತ್‌ನ ಸಾಂಪ್ರದಾಯಿಕ ಜಾನಪದ ನೃತ್ಯ ದಾಂಡಿಯಾ ಹಾಡುಗಳಿಗೆ ಹೆಜ್ಜೆ ಹಾಕುವ ಸಡಗರ ರಾತ್ರಿ 11.30ರ ವರೆಗೂ ನಡೆಯುತ್ತಿತ್ತು. ಅಂದಾಜು ಐದಾರು ನೂರಕ್ಕೂ ಹೆಚ್ಚು ಜನ ಖುಷಿಯಿಂದ ಪಾಲ್ಗೊಳ್ಳುತ್ತಿದ್ದರು. ಒಂಬತ್ತು ದಿನಗಳ ಕಾಲ ಒಂದೊಂದು ರೀತಿಯ ವೇಷ ತೊಟ್ಟು ಮಕ್ಕಳು ಸಡಗರದಿಂದ ಭಾಗಿಯಾಗುತ್ತಿದ್ದರು. ಆದರೆ, ಈ ವರ್ಷ ಇದ್ಯಾವುದೂ ಇರುವುದಿಲ್ಲ. ನವರಾತ್ರಿಯನ್ನು ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತ ಮಾಡಲಾಗಿದೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಹುಬ್ಬಳ್ಳಿ ಗುಜರಾತಿ ಸಮಾಜದ ಅಧ್ಯಕ್ಷ ಗಿರೀಶ ಉಪಾಧ್ಯೆ ‘ಕೋವಿಡ್‌ ಕಾರಣಕ್ಕೆ ಸರಳವಾಗಿ ನವರಾತ್ರಿ ಆಚರಿಸಲಾಗುತ್ತಿದೆ. ಒಂಬತ್ತು ದಿನಗಳ ಕಾಲ ಸಂಜೆ 7.30ರಿಂದ ಒಂದು ತಾಸು ಆರತಿ ನಡೆಯುತ್ತದೆ. ಅಷ್ಟಮಿ ದಿನ ದುರ್ಗಾಷ್ಟಮಿ ಹವನ ಹಮ್ಮಿಕೊಂಡಿದ್ದೇವೆ. ಶನಿವಾರ ಘಟಸ್ಥಾಪನೆ ಮಾಡಿದ್ದು, ನಿತ್ಯ ಒಂದು ಗುಜರಾತಿ ಕುಟುಂಬದ ಇಬ್ಬರು ಸದಸ್ಯರಿಗೆ ಮಾತ್ರ ಭವನದ ಒಳಗಡೆ ಪ್ರವೇಶ ನೀಡಲಾಗಿದೆ’ ಎಂದರು.

‘ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಭವನದ ಒಳಗೆ ಪ್ರವೇಶಿಸುವವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಪಡೆಯಲಾಗುತ್ತಿದೆ. ಸ್ಯಾನಿಟೈಸರ್‌ ಹಚ್ಚಿಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಬಹಳಷ್ಟು ಜನ ಬಂದರೆ ಹತ್ತು ಜನರ ಒಂದು ತಂಡವನ್ನು ಮಾತ್ರ ಕಳುಹಿಸಲಾಗುತ್ತದೆ’ ಎಂದರು.

‘ಸದ್ಯದ ಪರಿಸ್ಥಿತಿಯಲ್ಲಿ ಸುರಕ್ಷತೆಗೆ ಆದ್ಯತೆ ಕೊಡುವುದು ಅಗತ್ಯ. ಆದ್ದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ. ಧಾರ್ಮಿಕ ಕಾರ್ಯಕ್ರಮಗಳು ಸಂಕ್ಷಿಪ್ತವಾಗಿ ನಡೆಯುತ್ತವೆ’ ಎಂದು ಹುಬ್ಬಳ್ಳಿಯ ಜೈನ್ ಸಂಸ್ಥೆ ಅಧ್ಯಕ್ಷ ಮಹೇಂದ್ರ ಸಿಂಘಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.