ADVERTISEMENT

ಹುಬ್ಬಳ್ಳಿ ನೇಹಾ ಹೀರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಜಾಮೀನು ಅರ್ಜಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 14:34 IST
Last Updated 4 ಆಗಸ್ಟ್ 2025, 14:34 IST
<div class="paragraphs"><p>ಕೊಲೆಯಾದ ನೇಹಾ ಹೀರೇಮಠ,&nbsp;ಆರೋಪಿ ಫಯಾಜ್‌</p></div>

ಕೊಲೆಯಾದ ನೇಹಾ ಹೀರೇಮಠ, ಆರೋಪಿ ಫಯಾಜ್‌

   

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹೀರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್‌ ಕೊಂಡುನಾಯ್ಕ್ ಪರ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿಯನ್ನು ಹುಬ್ಬಳ್ಳಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ.

ಆರೋಪಿ ಪರ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿಯ ವಿಚಾರಣೆ ಕಳೆದ ಜೂನ್‌ 10ರಿಂದ ಆರಂಭವಾಗಿದ್ದವು. ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ನ್ಯಾಯಾಧೀಶೆ ಪಲ್ಲವಿ ಬಿ.ಆರ್‌. ಸೋಮವಾರ ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದರು.

ADVERTISEMENT

ನೇಹಾ ಹಿರೇಮಠ ತಾಯಿ ಪರ ಸರ್ಕಾರಿ ವಿಶೇಷ ಅಭಿಯೋಜಕ ಮಹೇಶ ವೈದ್ಯ ಮತ್ತು ರಾಘವೇಂದ್ರ ಮತಗೀಕರ ಹಾಗೂ ಆರೋಪಿ ಫಯಾಜ್ ಪರ ಝಡ್.ಎಂ. ಹತ್ತರಕಿ ವಾದ ಮಂಡಿಸಿದ್ದರು. ಫಯಾಜ್‌ನನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು.

2024ರ ಎಪ್ರಿಲ್‌ 18ರಂದು ನಗರದ ಬಿವಿಬಿ ಕಾಲೇಜಿನ ಕ್ಯಾಂಪಸ್‌ನಲ್ಲಿ ನೇಹಾ ಕೊಲೆಯಾಗಿದ್ದರು. ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸರ್ಕಾರಿ ವಿಶೇಷ ಅಭಿಯೋಜಕ ಮಹೇಶ ವೈದ್ಯ, ‘ಜಾಮೀನು ಅರ್ಜಿ ಸಂಬಂಧಿಸಿ ನ್ಯಾಯಾಲಯ ಎರಡೂ ಕಡೆ ವಾದ ಆಲಿಸಿತ್ತು. ಆರೋಪಿ ಪರ ವಾದ ಮಂಡಿಸಿದ್ದ ವಕೀಲರು, ಬಂಧನ ಪ್ರಕ್ರಿಯೆ ಸರಿಯಾಗಿಲ್ಲ. ಪೋಷಕರಿಗೆ ಮಾಹಿತಿ ನೀಡದೆ ಬಂಧಿಸಲಾಗಿದೆ ಎಂದು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಯಾಕೆ ಬಂಧಿಸಿದ್ದು ಎನ್ನುವ ಕುರಿತು ನಾವು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದೆವು’ ಎಂದರು.

‘ಕೊಲೆ ಪ್ರಕರಣದ ವಿಚಾರಣೆ ಯಾವ ದಿನಾಂಕದಿಂದ ನಡೆಸಬೇಕೆನ್ನುವ ಕುರಿತು ನಿರ್ಧರಿಸಲು ನ್ಯಾಯಾಲಯ ಆಗಸ್ಟ್‌ 6ರಂದು ಸೂಚಿಸಲಿದೆ. ಅಂದು ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ’ ಎಂದು ತಿಳಿಸಿದರು.

‘ಜಾಮೀನು ಅರ್ಜಿ ತಿರಸ್ಕೃತವಾಗಿದ್ದು, ನ್ಯಾಯಕ್ಕೆ ಸಿಕ್ಕ ತಾತ್ಕಾಲಿಕ ಜಯವಾಗಿದೆ. ಆರೋಪಿ ಪರವಾದ ಮಂಡಿಸಲು ಬೇರೆ ಜಿಲ್ಲೆಯ ವಕೀಲರು ಮುಂದೆ ಬಂದಿದ್ದರು. ಬಂಧನ ಪ್ರಕ್ರಿಯೆಯಲ್ಲಿ ಯಾವ ಲೋಪವೂ ಆಗಿಲ್ಲ ಎಂದು ಕೋರ್ಟ್‌ ಅವರ ಅರ್ಜಿ ತಿರಸ್ಕರಿಸಿದೆ. ಕೊಲೆ ಪ್ರಕರಣದ ವಿಚಾರಣೆ ತ್ವರಿತವಾಗಿ ನಡೆಯಬೇಕು’ ಎಂದು ನೇಹಾ ತಂದೆ ನಿರಂಜನ ಹಿರೇಮಠ ವಿನಂತಿಸಿದರು.

‘ನ್ಯಾಯಾಲಯದ ತೀರ್ಪು ಮಹಿಳೆಯ ಪರವಾಗಿ ಬಂದಿದೆ. ಇಬ್ಬರು ಮುಸ್ಲಿಂ ವಕೀಲರ ಹಿಂದೆ ಭಯೋತ್ಪಾದನೆ ಸಂಘಟನೆ ಕೆಲಸ ಮಾಡುತ್ತಿದೆ. ಕೊಲೆಗಾರರ ಪರ ವಾದ ಮಂಡಿಸುವ ವಕೀಲರಿಗೆ ಜಿಹಾದಿ ಶಕ್ತಿಯ ಬೆಂಬಲವಿದೆ. ಅವರಿಗೆ ಎಲ್ಲಿಂದ ಹಣ ಬರುತ್ತದೆ ಎನ್ನುವುದು ವಿಚಾರಣೆಯಾಗಬೇಕು’ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.

ಜಾಮೀನು ಅರ್ಜಿ ತಿರಸ್ಕೃತವಾದ ಸುದ್ದಿ ಹೊರ ಬೀಳುತ್ತಿದ್ದಂತೆ ಶ್ರೀರಾಮ ಸೇನಾ ಕಾರ್ಯಕರ್ತರು ಸಂಭ್ರಮಾಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.