ADVERTISEMENT

ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮಗು ಅಪಹರಣ: ತಾಯಿನೇ ಸೂತ್ರಧಾರಿ?

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 9:40 IST
Last Updated 16 ಜೂನ್ 2022, 9:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ಮಕ್ಕಳ ವಾರ್ಡ್‌ನಿಂದ ನಾಲ್ಕು ದಿನಗಳ ಹಿಂದೆ ನಡೆದಿದ್ದ, 40 ದಿನದ ಹೆಣ್ಣು ಮಗು ಅಪಹರಣ ಮತ್ತು ಪತ್ತೆ ಪ್ರಕರಣವು ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಮಗುವಿನ ತಾಯಿಯೇ ಪ್ರಕರಣದ ಸೂತ್ರಧಾರಿಯೇ? ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

ಕುಂದಗೋಳದ ಸಲ್ಮಾ ಶೇಕ್ ಅವರು, ಮಧ್ಯಾಹ್ನ ವಾರ್ಡ್‌ನಿಂದ ಮಗುವನ್ನು ಹೊರಗೆ ತಂದಾಗ, ವ್ಯಕ್ತಿಯೊಬ್ಬ ಏಕಾಏಕಿ ಮಗುವನ್ನು ಕಸಿದುಕೊಂಡು ಪರಾರಿಯಾದ ಎಂದು ಜೂನ್ 13ರಂದು ಆರೋಪಿಸಿದ್ದರು. ಸ್ಥಳಕ್ಕೆ ಹಿರಿಯ ಪೊಲೀಸರು ಹಾಗೂ ಕಿಮ್ಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು.

ಘಟನೆಯ ಬೆನ್ನತ್ತಿದ್ದ ಪೊಲೀಸರು, ತಾಯಿ ಹೇಳಿಕೆ ಜೊತೆಗೆ ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಮಗುವಿನ ಪತ್ತೆ ಕಾರ್ಯ ಕೈಗೊಂಡಿದ್ದರು. ಇದಾದ ಮಾರನೇಯ ದಿನ ಬೆಳಿಗ್ಗೆ 6 ಗಂಟೆಗೆ ಕಿಮ್ಸ್‌ನ ಪಿಎಂಎಸ್‌ಎಸ್‌ವೈ ಆಸ್ಪತ್ರೆಯ ಹಿಂಭಾಗದ ಹಳೇ ಕಟ್ಟಡದ ಬಳಿ ಮಗು ಪತ್ತೆಯಾಗಿತ್ತು. ಆದರೆ, ಮಗು ಕಸಿದುಕೊಂಡು ಹೋಗಿದ್ಯಾರು? ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿತ್ತು. ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ, ಸಲ್ಮಾ ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ, ವಿಭಿನ್ನ ಹೇಳಿಕೆಗಳನ್ನು ನೀಡಿದ್ದರು. ಇದು ತಾಯಿ ಹಾಗೂ ಕುಟುಂಬದ ಮೇಲಿನ ಅನುಮಾನಕ್ಕೆ ಕಾರಣವಾಗಿದೆ. ಪೂರಕವಾಗಿ ವಾರ್ಡ್‌ ಬಳಿಯ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳ ದೃಶ್ಯವೂ ಇದಕ್ಕೆ ಪುಷ್ಟಿ ನೀಡುವಂತಿದೆ. ಈ ಎಲ್ಲದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಪ್ರಕರಣದ ಹಿಂದೆ ಯಾರ‍್ಯಾರು ಇದ್ದಾರೆ ಎನ್ನುವ ಕುರಿತು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಉತ್ತರ ವಿಭಾಗದ ಎಸಿಪಿ ವಿನೋದ ಮುಕ್ತೇದಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.