ADVERTISEMENT

ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗಲು ಸಿ.ಎಂ ಆಗಬೇಕಾ?: ಸಿದ್ದರಾಮಯ್ಯ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 14 ಮೇ 2019, 14:43 IST
Last Updated 14 ಮೇ 2019, 14:43 IST
   

ಕುಂದಗೋಳ(ಹುಬ್ಬಳ್ಳಿ): ‘ಮೇ 23ರ ಬಳಿಕ ರಾಜ್ಯ ಸರ್ಕಾರ ಬೀಳಲಿದ್ದು, ಬಳಿಕ ನಾನೇ ಮುಖ್ಯಮಂತ್ರಿ ಎಂದು ಬಿ‌.ಎಸ್. ಯಡಿಯೂರಪ್ಪ ಹೇಳುತ್ತಿದ್ದಾರೆ. ಅಧಿಕಾರ ಇದ್ದಾಗ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡದ ಅವರು, ಮತ್ತೆ ಜೈಲಿಗೆ ಹೋಗಲು ಮುಖ್ಯಮಂತ್ರಿ ಆಗಬೇಕಾ’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಕುಂದಗೋಳ ತಾಲ್ಲೂಕಿನ ಅರಳಿಕಟ್ಟಿಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಮೂರು ದಿನ ಸಿ.ಎಂ ಆಗಿ ಬಹುಮತ ಸಾಬೀತುಪಡಿಸಲಾಗದ ಯಡಿಯೂರಪ್ಪಗೆ ಅಧಿಕಾರ ಕಳೆದುಕೊಂಡಾಗಿನಿಂದಲೂ ವಿಧಾನಸೌಧದ ಮೂರನೇ ಮಹಡಿಯ ಕನಸೇ ಬೀಳುತ್ತಿದೆ. ತಿಪ್ಪರಲಾಗ ಹಾಕಿದರೂ ಅವರು ಮತ್ತೆ ಸಿ.ಎಂ ಆಗುವುದಿಲ್ಲ’ ಎಂದರು.

‘ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪಿಗೆ ಬದ್ಧರಾಗಿ, ಬಾಯಿ ಮುಚ್ಚಿಕೊಂಡು ವಿರೋಧ ಪಕ್ಷದಲ್ಲಿ ಕೆಲಸ ಮಾಡಬೇಕು. ಆದರೆ, ಈ ಮಾನಗೆಟ್ಟ ಮತ್ತು ಲಜ್ಜೆಗೆಟ್ಟ ಬಿಜೆಪಿಯವರು 23ರ ಬಳಿಕ ನಮ್ಮ ಸರ್ಕಾರ ಬರುತ್ತದೆ ಎಂದು ಹೇಳುತ್ತಲೇ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮೂರೂ ಬಿಟ್ಟಿರುವ ಇವರಿಗೆ ಮರ್ಯಾದೆಯೇ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದು ನಾವು ಕೇಳಿದೆವು. ಆಗ, ನಾವು ನೋಟು ಪ್ರಿಂಟಿಂಗ್ ಮಷಿನ್ ಇಲ್ಲ ಎಂದಿದ್ದ ಅವರು, ನೋಟ್ ಎಣಿಸುವ ಯಂತ್ರ ಇಟ್ಟುಕೊಂಡಿದ್ದರು. ಈಶ್ವರಪ್ಪ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ನೋಟು ಎಣಿಸುವ ಯಂತ್ರ ಸಿಕ್ಕಿತ್ತು’ ಎಂದು ತರಾಟೆಗೆ ತೆಗೆದುಕೊಂಡರು.

₹50 ಕೋಟಿಗೆ ಜಾಧವ ಡೀಲ್

ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿದಿರುವ ಗಿರಾಕಿ ಉಮೇಶ್ ಜಾಧವ ₹50ಕೋಟಿಗೆ ಡೀಲ್ ಆಗಿದ್ದಾನೆ. ಸಾಲದಕ್ಕೆ ಮಗನಿಗೂ ಉಪ ಉಪ ಚುನಾವಣೆಯಲ್ಲಿ ಟಿಕೆಟ್ ಕೊಡಿಸಿದ್ದಾನೆ. ಅವರಿಬ್ಬರೂ ಸೋಲುವುದು ಖಚಿತ ಎಂದ ಅವರು, ರಾಜ್ಯದ ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದರು.

‘ಬೆಂಕಿ ಹಚ್ಚುವುದೇ ಸುಳ್ಳುಗಾರ ಶೆಟ್ಟರ್ ಕೆಲಸ’

ಶಾಸಕ ಜಗದೀಶ ಶೆಟ್ಟರ್ ಮಹಾನ್ ಸುಳ್ಳುಗಾರ. ಕಾಂಗ್ರೆಸ್- ಜೆಡಿಎಸ್ ಮಧ್ಯೆ ಬೆಂಕಿ ಹಚ್ಚುವುದೇ ಅವರ ಕೆಲಸ ಎಂದು ಟೀಕಿಸಿದರು.
ಮಂಡ್ಯದಲ್ಲಿ ಸುಮಲತಾಗೆ ಸಿದ್ದರಾಮಯ್ಯ ಸಪೋರ್ಟ್ ಮಾಡಿ, ಮತ್ತೆ ಸಿ.ಎಂ ಆಗಲು ಗೌಪ್ಯ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಈ ತರಹ ಬೆಂಕಿ ಹಂಚುವುದರಲ್ಲಿ ಬಿಜೆಪಿಗರು ನಿಸ್ಸಿಮರು. ಸುಳ್ಳು ಹೇಳುವುದು ಬಿಟ್ಟು ಅವರಿಗೇನೂ ಗೊತ್ತಿಲ್ಲ.

ಸುಮಲತಾಗೆ ಸಪೋರ್ಟ್ ಮಾಡಿದ್ದು ನಾವಾ? ಎಂದು ಪ್ರಶ್ನಿಸಿದ ಅವರು ಮಂಡ್ಯದಲ್ಲಿ ಪಕ್ಷದಿಂದ ಅಭ್ಯರ್ಥಿ ನಿಲ್ಲಿಸದೆ ಸುಮಲತಾಗೆ ಸಪೋರ್ಟ್ ಮಾಡಿದ್ದು ಬಿಜೆಪಿಯವರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.