ADVERTISEMENT

ವಿದೇಶ ಪ್ರವಾಸಕ್ಕೆ ಹೋಗಲ್ಲ: ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 11:56 IST
Last Updated 1 ನವೆಂಬರ್ 2019, 11:56 IST
   

ಹುಬ್ಬಳ್ಳಿ: ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನ ಸಂಕಷ್ಟದಲ್ಲಿರುವ ಕಾರಣ ವಿದೇಶ ಪ್ರವಾಸಕ್ಕೆ ಹೋಗದಿರಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ವಿದೇಶಕ್ಕೆ ಯಾರು ಹೋಗುತ್ತಾರೊ; ಬಿಡುತ್ತಾರೊ ನನಗಂತೂ ಗೊತ್ತಿಲ್ಲ. ವಿಧಾನ ಪರಿಷತ್‌ನ ಸದಸ್ಯರಂತೂ ಹೋಗುವುದಿಲ್ಲ. ಹೋಗಲು ಇದು ಸೂಕ್ತ ಸಮಯವೂ ಅಲ್ಲ’ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಮುಖಂಡರು ಏನೇ ತೀರ್ಮಾನ ಕೈಗೊಳ್ಳುವ ಮೊದಲು ಎಲ್ಲರೊಂದಿಗೂ ಚರ್ಚಿಸಬೇಕು. ಆಗ ಮಾತ್ರ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ನಮ್ಮೊಂದಿಗೆ ಚರ್ಚಿಸದೇ ನಿರ್ಧರಿಸಿಬಿಟ್ಟರೆ ಮಾಧ್ಯಮಗಳಿವೆ ಎನು ಪ್ರತಿಕ್ರಿಯಿಸಬೇಕು ಎಂದು ಪ್ರಶ್ನಿಸಿದರು.

ADVERTISEMENT

ಪುಟ್ಟಣ್ಣ ಬಗ್ಗೆ ಎಚ್‌.ಡಿ. ರೇವಣ್ಣ ನೀಡಿದ ಹೇಳಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಕುಮಾರಸ್ವಾಮಿ ಹಾಗೂ ರೇವಣ್ಣ ಅವರು ಮೊದಮೊದಲು ಕೆಲವರನ್ನು ಅಟ್ಟಕ್ಕೆ ಏರಿಸಿಬಿಡುತ್ತಾರೆ. ಅವರು ಹೇಳಿದ್ದೇ ವೇದವಾಕ್ಯ ಎನ್ನುವಂತೆ ನಡೆದುಕೊಳ್ಳುತ್ತಾರೆ. ನಂತರ ನಿರ್ಲಕ್ಷ್ಯ ಮಾಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇವೇಗೌಡ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಇದೇ 6 ಅಥವಾ 7ರಂದು ಸಭೆ ನಡೆಸಿ ಪಕ್ಷದೊಳಗಿನ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ. ಪಕ್ಷದ ಜೀವಂತಿಕೆ ಉಳಿಯಬೇಕು ಎನ್ನುವುದಷ್ಟೇ ನಮ್ಮ ಬೇಡಿಕೆ. ಚಾಕೊಲಟ್‌ ಹಾಗೂ ಪೆಪ್ಪರ್‌ಮೆಂಟ್‌ನಂಥ ಬೇಡಿಕೆಗಳು ನಮ್ಮವು’ ಎಂದರು.

‘ವಿಧಾನ ಪರಿಷತ್‌ ಸದಸ್ಯರನ್ನು ನಿಷ್ಕಾಳಜಿ ಮಾಡಿದ್ದಾರೆ ಎನ್ನುವ ಅಸಮಾಧಾನ ಎಲ್ಲರಲ್ಲಿಯೂ ಇತ್ತು. ಈಗ ಕಾಳಜಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕರ್ನಾಟಕ ರಾಜ್ಯೋತ್ಸವ ಸಮಯದಲ್ಲಿ ಯಾವ ಧ್ವಜ ಹಾರಿಸಬೇಕು ಎನ್ನುವ ವಿಚಾರದ ಬಗ್ಗೆ ಒಂದೊಂದು ಸರ್ಕಾರಗಳು ಒಂದೊಂದು ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿವೆ. ಇದಕ್ಕಾಗಿ ಹಿಂದೆ ಸಮಿತಿ ಕೂಡ ರಚಿಸಲಾಗಿತ್ತು. ತಪ್ಪೊ, ಸರಿಯೊ; ಹಿಂದಿನ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರವನ್ನೇ ಈಗಿನ ಬಿಜೆಪಿ ಸರ್ಕಾರ ಮುಂದುವರಿಸಬೇಕಿತ್ತು. ಧ್ವಜ ಬಳಕೆ ವಿಷಯ ವಿನಾಕಾರಣ ಚರ್ಚೆಗೆ ಒಳಗಾಗಬಾರದು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.