ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಗಣೇಶಮೂರ್ತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತಸಮೂಹ
ಹುಬ್ಬಳ್ಳಿ: ನಗರದ ವಿವಿಧೆಡೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಗಳನ್ನು ಶನಿವಾರ ವಿಜೃಂಭಣೆಯಿಂದ ಮೆರವಣಿಗೆ ನಡೆಸಿ, ಬಾವಿಗಳಲ್ಲಿ ವಿಸರ್ಜಿಸುವ ಮೂಲಕ ಪ್ರಸ್ತುತ ವರ್ಷದ ಗಣೇಶ ಹಬ್ಬಕ್ಕೆ ತೆರೆ ಎಳೆಯಲಾಯಿತು.
11 ದಿನಗಳ ಕಾಲ ಧಾರ್ಮಿಕ ವಿಧಿ–ವಿಧಾನಗಳಿಂದ ಗಣೇಶನನ್ನು ಪೂಜಿಸಿದ ಭಕ್ತರು, ಭಾವುಕರಾಗಿ ಬೀಳ್ಕೊಟ್ಟರು. ಮರಾಠಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ್ದ 25 ಅಡಿ ಎತ್ತರದ ‘ಹುಬ್ಬಳ್ಳಿ ಕಾ ಮಹಾರಾಜ’, ಮೇದಾರ ಓಣಿಯ ‘ಸಪ್ತ ಸಾಮ್ರಾಟ ಮಹಾರಾಜ’ ಹಾಗೂ ದಾಜಿಬಾನ್ ಪೇಟೆಯ ‘ಹುಬ್ಬಳ್ಳಿ ಕಾ ರಾಜಾ’ ಸೇರಿ 500ಕ್ಕೂ ಹೆಚ್ಚು ಸಾರ್ವಜನಿಕ ಗಣೇಶಮೂರ್ತಿಗಳನ್ನು ವಿಸರ್ಜಿಸಲಾಯಿತು. ಪಟಾಕಿ ಸಿಡಿಸುತ್ತ, ಡಿಜೆ ಹಾಡಿಗೆ–ಮಂಗಳ ವಾದ್ಯಗಳಿಗೆ ಹೆಜ್ಜೆ ಹಾಕಿ ಕುಣಿಯುತ್ತ ಸಂಭ್ರಮದಿಂದ ಮೆರವಣಿಗೆ ನಡೆಸಿದರು.
ಮಧ್ಯಾಹ್ನ 3 ಗಂಟೆಗೆ ಆರಂಭವಾದ ವಿಸರ್ಜನಾ ಮೆರವಣಿಗೆ ಭಾನುವಾರ ಬೆಳಿಗ್ಗೆವರೆಗೂ ಮುಂದುವರೆದಿತ್ತು. ಒಂದೆಡೆ ಡಿಜೆ ಹಾಡು ಮೊಳಗಿದರೆ, ಮತ್ತೊಂದೆಡೆ ‘ಗಣಪತಿ ಬಪ್ಪಾ ಮೋರೆಯಾ, ಮಂಗಳಮೂರ್ತಿ ಮೋರೆಯಾ’ ಜೈಕಾರಗಳು ಪ್ರತಿಧ್ವನಿಸಿದವು. ಮರಾಠಗಲ್ಲಿ ವೃತ್ತ ಹಾಗೂ ದಾಜಿಬಾನ್ ಪೇಟೆ ರಸ್ತೆಯಲ್ಲಿ ಮೆರವಣಿಗೆ ಸಾಗುವಾಗ ಯುವಕರು ಡಿಜೆ, ಡಾಲ್ಬಿ ಅಬ್ಬರಕ್ಕೆ ಮನದಣಿಯೇ ಕುಣಿದು ಸಂಭ್ರಮಿಸಿದರು. ಜಾಂಝ್, ಪಂಚವಾದ್ಯ ಮೇಳಗಳು ಮೆರವಣಿಗೆಗೆ ಕಳೆ ಹೆಚ್ಚಿಸಿದ್ದವು. ಮಹಿಳೆಯರು ಭಜನೆ ಮಾಡುತ್ತ, ಭಕ್ತಿಗೀತೆ ಹಾಡುತ್ತ ಸಾಗಿದರು.
ರಾತ್ರಿ 10ರವರೆಗೆ ನಿಧಾನವಾಗಿ ಸಾಗಿದ ಮೆರವಣಿಗೆ, ಡಿಜೆ ಸ್ತಬ್ಧ ಆದ ಬಳಿಕ ವೇಗ ಪಡೆದುಕೊಂಡಿತು. ಗದಗ ರಸ್ತೆ, ಸಿಬಿಟಿ, ಹರ್ಷಾ ಕಾಂಪ್ಲೆಕ್ಸ್, ಮೇದಾರ ಓಣಿ, ಕೊಪ್ಪಿಕರ್ ರಸ್ತೆ ಹಾಗೂ ಇತರೆಡೆಯಲ್ಲಿನ ಮನೆಯ ಎದುರು ಮೆರವಣಿಗೆ ಬರುತ್ತಿದ್ದಂತೆ, ಭಕ್ತರು ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಈಡುಗಾಯಿ ಒಡೆದು ಭಕ್ತಿ ಅರ್ಪಿಸಿದರು. ವಿಸರ್ಜನೆ ಪ್ರಯುಕ್ತ ಬೆಳಿಗ್ಗೆಯಿಂದ ಪೆಂಡಾಲ್‌ಗಳಲ್ಲಿ ವಿಶೇಷ ಪೂಜೆ, ಹೋಮ ಇತ್ಯಾದಿ ಧಾರ್ಮಿಕ ಕಾರ್ಯಗಳು ನಡೆದವು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಕೆಲವು ಸಮಿತಿಗಳ ಸದಸ್ಯರು ಗಣೇಶಮೂರ್ತಿಗೆ ಅಲಂಕರಿಸಿದ್ದ ಆಭರಣ, ವಸ್ತುಗಳನ್ನು ಸವಾಲು ಕರೆದರು.
ದಾಜಿಬಾನ್ ಪೇಟೆ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿದ್ದ ಗಣೇಶಮೂರ್ತಿಗಳ ಮೆರವಣಿಗೆಯಲ್ಲಿ ಜನರು ಕಿಕ್ಕಿರಿದು ಪಾಲ್ಗೊಂಡಿದ್ದರು. ಶೀಲವಂತರ ಓಣಿ, ಬಾನಿ ಓಣಿ, ಬಾರದಾನ್ ಸಾಲ, ಯಲ್ಲಾಪುರ ಓಣಿ, ವಿದ್ಯಾನಗರದಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯಿತು. ಹೊಸೂರು ಹಾಗೂ ಇಂದಿರಾಗಾಜಿನ ಮನೆ ಹಿಂಭಾಗದ ಗಣೇಶಬಾವಿಯಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಗಣೇಶಮೂರ್ತಿ ವಿಸರ್ಜನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಮೈಸೂರಿನಲ್ಲಿ ಪಿಎಸ್‌ಐ ತರಬೇತಿ ಪಡೆಯುತ್ತಿದ್ದ ಅಭ್ಯರ್ಥಿಗಳನ್ನು ಭದ್ರತೆಗೆ ಕರೆಸಲಾಗಿತ್ತು. ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಭದ್ರತೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.