
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಿಸಿ, ಮೂಲಸೌಕರ್ಯ ಅಭಿವೃದ್ಧಿಪಡಿಸಲು ಕ್ರಮ ವಹಿಸಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿದ ಸಂಸ್ಥೆಯವರು, ಪ್ರೋತ್ಸಾಹದಾಯಕ ಕೈಗಾರಿಕಾ ನೀತಿಗಳು ಹಾಗೂ ವಿಶೇಷ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಕೋರಿದರು.
ಉತ್ತರ ಕರ್ನಾಟಕದ ಕೈಗಾರಿಕೋದ್ಯಮದ ಪ್ರಸ್ತುತ ಸ್ಥಿತಿ, ಸವಾಲುಗಳು, ಭವಿಷ್ಯದ ಅವಕಾಶಗಳು, ‘ಇನ್‍ಕಾಮೆಕ್ಸ್–2026’ ಬೃಹತ್ ಕೈಗಾರಿಕಾ ವಸ್ತುಪ್ರದರ್ಶನ, ರಾಜ್ಯದಲ್ಲಿ ಹೊಸದಾಗಿ ಬೃಹತ್ ಕೈಗಾರಿಕಾ ಪ್ರದೇಶಗಳ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ‘ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದು ಭರವಸೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಜಿ.ಕೆ.ಆದಪ್ಪಗೌಡರ, ಉಪಾಧ್ಯಕ್ಷ ಸಿದ್ದೇಶ್ವರ ಜಿ.ಕಮ್ಮಾರ, ಗೌರವ ಕಾರ್ಯದರ್ಶಿಗಳಾದ ಉದಯ ರೇವಣಕರ, ಪ್ರಕಾಶ ಶೃಂಗೇರಿ ಹಾಗೂ ಡಿ.ಪದ್ಮನಾಭ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.