ADVERTISEMENT

ಹುಬ್ಬಳ್ಳಿ: ‘ವಾಯವ್ಯ’ಕ್ಕೆ 200 ಇವಿ ಬಸ್‌

ಐದು ಎಕರೆ ಜಾಗದಲ್ಲಿ ಡಿಪೊ ನಿರ್ಮಾಣ; ಡಿಪಿಆರ್‌ ಸಲ್ಲಿಕೆ 

ಸತೀಶ ಬಿ.
Published 26 ಸೆಪ್ಟೆಂಬರ್ 2025, 4:58 IST
Last Updated 26 ಸೆಪ್ಟೆಂಬರ್ 2025, 4:58 IST
ಇವಿ ಬಸ್‌  –ಸಾಂದರ್ಭಿಕ ಚಿತ್ರ
ಇವಿ ಬಸ್‌  –ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಪಿ.ಎಂ ಇ-ಡ್ರೈವ್‌ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 200 ವಿದ್ಯುತ್‌ ಚಾಲಿತ (ಇವಿ) ಬಸ್‌ಗಳನ್ನು ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಮುಂದಿನ ದಿನಗಳಲ್ಲಿ ಅವಳಿ ನಗರದಲ್ಲಿ ಇ–ವಿ ಬಸ್‌ಗಳು ಸಂಚರಿಸಲಿವೆ.

200 ಬಸ್‌ಗಳಲ್ಲಿ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ–ಧಾರವಾಡ, ಬೆಳಗಾವಿಗೆ ತಲಾ 100  ಬಸ್‌ಗಳು ಹಂಚಿಕೆಯಾಗಲಿವೆ. ಈಗಾಗಲೇ ಡಿಪೊ ನಿರ್ಮಾಣಕ್ಕೆ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ತಲಾ ಐದು ಎಕರೆ ಸ್ಥಳ ಗುರುತಿಸಲಾಗಿದೆ. 

 ₹31.47ಕೋಟಿ ವೆಚ್ಚದಲ್ಲಿ ಡಿಪೊ ನಿರ್ಮಾಣವಾಗಲಿದ್ದು, ಅದರಲ್ಲಿ ಸಿವಿಲ್‌ ವರ್ಕ್‌ಗೆ ₹16.39 ಕೋಟಿ, ಎಲೆಕ್ಟ್ರಿಕ್‌ ವರ್ಕ್‌ಗೆ ₹14.88 ಕೋಟಿ ವೆಚ್ಚವಾಗಲಿದೆ. ಈ ಸಂಬಂಧ ಎರಡು ತಿಂಗಳ ಹಿಂದೆಯೇ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ, ಕೇಂದ್ರಕ್ಕೆ ಕಳಿಸಲಾಗಿದೆ. ಅಲ್ಲಿಂದ ಅನುಮತಿ ಸಿಕ್ಕ ನಂತರ ಮುಂದಿನ ಪ್ರಕ್ರಿಯೆಗಳು ಅರಂಭವಾಗಲಿವೆ ಎನ್ನುತ್ತಾರೆ ಎನ್‌ಡಬ್ಲ್ಯುಕೆಆರ್‌ಟಿಸಿ ಅಧಿಕಾರಿಗಳು.

ADVERTISEMENT

ಗುತ್ತಿಗೆ (ಜಿಸಿಸಿ–ಗ್ರಾಸ್ ಕಾಸ್ಟ್‌ ಕಾಂಟ್ರ್ಯಾಕ್ಟ್‌) ಆಧಾರದಲ್ಲಿ ಈ ಬಸ್‌ಗಳನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರ ಟೆಂಡರ್‌ ಕರೆದು, ಚಾಲಕರನ್ನೂ ನೇಮಿಸಲಿದೆ. ನಿರ್ವಾಹಕರನ್ನು ಸಂಸ್ಥೆಯಿಂದ ಒದಗಿಸುತ್ತೇವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ತಿಳಿಸಿದರು.

ಬಸ್‌ ನಿರ್ವಹಣೆಯನ್ನು ಟೆಂಡರ್‌ ಪಡೆದವರೇ ಮಾಡುತ್ತಾರೆ. ಕಿ.ಮೀ ಆಧಾರದಲ್ಲಿ ಕೇಂದ್ರ ಸರ್ಕಾರದಿಂದ ಸಂಸ್ಥೆಗೆ ಸಬ್ಸಿಡಿ ನೀಡಲಿದ್ದು, ಉಳಿದ ಹಣವನ್ನು ಸಂಸ್ಥೆಯಿಂದ ಭರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಾಮಾನ್ಯ ಬಸ್‌ಗಳ ಮೈಲೇಜ್ ಪ್ರತಿ ಲೀಟರ್‌ಗೆ 4.8 ಕಿ.ಮೀ. ಡೀಸೆಲ್‌ಗಾಗಿ ಪ್ರತಿ ದಿನ ₹3 ಕೋಟಿ ಖರ್ಚಾಗುತ್ತದೆ. ಪ್ರತಿ ದಿನ ಒಂದು ಇ.ವಿ ಬಸ್‌ 220 ಕಿ.ಮೀ ಸಂಚರಿಸಬೇಕು. ಬಸ್‌ಗಳನ್ನು ಒದಗಿಸಿ, ಕಾರ್ಯಾಚರಣೆ ಆರಂಭವಾದ ನಂತರ ಮೈಲೇಜ್, ಇಂಧನ ಉಳಿತಾಯ ಸೇರಿದಂತೆ ಇನ್ನಿತರ ಮಾಹಿತಿ ಸಿಗಲಿದೆ ಎಂದರು.

ಅವಳಿ ನಗರದಲ್ಲಿ 450ಕ್ಕೂ ಹೆಚ್ಚು ಬಸ್‌ಗಳಿವೆ. ಒಂದು ಬಸ್‌ ಅನ್ನು 15 ವರ್ಷ ಓಡಿಸಬಹುದು.  ಸಂಸ್ಥೆಯಲ್ಲಿ ಪ್ರತಿ ವರ್ಷ 250 ಬಸ್‌ಗಳು ಗುಜರಿಗೆ ಹೋಗುತ್ತವೆ. ಇವಿ ಬಸ್‌ಗಳು ಬಂದರೆ ಬಸ್‌ಗಳ ಕೊರತೆ ತಕ್ಕಮಟ್ಟಿಗೆ ನೀಗಲಿದ್ದು, ಇನ್ನೂ ಉನ್ನಮ ಸಾರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಡಿಪಿಆರ್ ಸಿದ್ಧಪಡಿಸಿ ಕೆಂದ್ರ ಸರ್ಕಾರಕ್ಕೆ ಕಳಿಸಲಾಗಿದೆ. ಟೆಂಡರ್‌ಗೆ ಅನುಮೋದನೆ ಸಿಕ್ಕ ನಂತರ ಉಳಿದ ಪ್ರಕ್ರಿಯೆಗಳು ಆರಂಭವಾಗಲಿವೆ. ಇದಕ್ಕೆ ಇನ್ನೂ ಎರಡ್ಮೂರು ತಿಂಗಳು ಬೇಕಾಗುತ್ತದೆ

-ಪ್ರಿಯಾಂಗಾ ಎಂ. ವ್ಯವಸ್ಥಾಪಕ ನಿರ್ದೇಶಕಿ ಎನ್‌ಡಬ್ಲ್ಯುಕೆಆರ್‌ಟಿಸಿ

‘20 ಬಸ್‌ಗಳಿಗೆ ಒಂದು ಎಕರೆ ಜಾಗ’

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿನ ಸಂಸ್ಥೆಯ ವರ್ಕ್‌ಶಾಪ್‌ ಆವರಣದಲ್ಲಿ ಇವಿ ಬಸ್‌ಗಳ ಡಿಪೊ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ 20 ಬಸ್‌ಗಳಿಗೆ ಒಂದು ಎಕರೆ ಜಾಗ ಬೇಕಾಗುತ್ತದೆ. ಡಿಪೊದಲ್ಲಿ ಚಾರ್ಜಿಂಗ್ ಸ್ಟೇಷನ್‌ ಸಹ ನಿರ್ಮಾಣವಾಗಲಿವೆ. ಕಾಂಪೌಂಡ್‌ ದುರಸ್ತಿ ಘಟಕ ಪಾರ್ಕಿಂಗ್‌ ಚಾಲಕ ನಿರ್ವಾಹಕರಿಗೆ ಶೌಚಾಲಯ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತದೆ. ಚಾರ್ಜಿಂಗ್ ಸ್ಟೇಷನ್‌ಗಾಗಿ 5 ಸಾವಿರ ಕೆ.ವಿ ಸಾಮರ್ಥ್ಯದ ವಿದ್ಯುತ್ ಕೇಂದ್ರ ಸ್ಥಾಪಿಸಲಾಗಿದೆ. ಹುಬ್ಬಳ್ಳಿ–ಧಾರವಾಡ ಬೆಳಗಾವಿ ಸೇರಿದಂತೆ ಬಳ್ಳಾರಿ ಕಲಬುರಗಿ ವಿಜಯಪುರ ದಾವಣಗೆರೆ ತುಮಕೂರು ಮಂಗಳೂರು ಮೈಸೂರು ಬೆಂಗಳೂರಿನಲ್ಲಿ ಇವಿ ಬಸ್‌ ಡಿಪೊಗಳು ನಿರ್ಮಾಣಗವಾಗಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.