ADVERTISEMENT

ಹಳೇ ಹುಬ್ಬಳ್ಳಿಯ ಹಳೇ ಗುಡಿ

ಕೃಷ್ಣೇಂದ್ರ ಗುರುಗಳ ಮಹಾತ್ಮೆಯಿಂದ ಪ್ರಸಿದ್ಧವಾದ ದತ್ತ ಮಂದಿರ

ಗಣೇಶ ವೈದ್ಯ
Published 17 ಜುಲೈ 2019, 9:36 IST
Last Updated 17 ಜುಲೈ 2019, 9:36 IST
ಹಳೇ ಹುಬ್ಬಳ್ಳಿಯ ಕಿಲ್ಲೆಯಲ್ಲಿರುವ ದತ್ತ ಮಂದಿರದ ಗರ್ಭಗುಡಿಯ ಮೇಲೆ ಶ್ರೀಚಕ್ರ ಆಕಾರದಲ್ಲಿ ನಿರ್ಮಿಸಿರುವ ಗೋಪುರ ಚಿತ್ರಗಳು: ಈರಪ್ಪ ನಾಯ್ಕರ್
ಹಳೇ ಹುಬ್ಬಳ್ಳಿಯ ಕಿಲ್ಲೆಯಲ್ಲಿರುವ ದತ್ತ ಮಂದಿರದ ಗರ್ಭಗುಡಿಯ ಮೇಲೆ ಶ್ರೀಚಕ್ರ ಆಕಾರದಲ್ಲಿ ನಿರ್ಮಿಸಿರುವ ಗೋಪುರ ಚಿತ್ರಗಳು: ಈರಪ್ಪ ನಾಯ್ಕರ್   

ಹಳೇ ಹುಬ್ಬಳ್ಳಿಯ ಹಳೆಯ ದೇವಸ್ಥಾನಗಳಲ್ಲಿ ಒಂದು ಕಿಲ್ಲೆ ಪ್ರದೇಶದಲ್ಲಿರುವ ಕೃಷ್ಣೇಂದ್ರ ಸ್ವಾಮಿ ಮಠ. ಎದುರಿಗೆ ಎತ್ತರದ ಮುಖ್ಯ ದ್ವಾರ, ಚಿಕ್ಕದಾದ ದೇವರ ಗುಡಿ ಇರುವ ಈ ದೇವಸ್ಥಾನ ತೀರಾ ಹಳೆಯ ಚಹರೆಯನ್ನೇ ಉಳಿಸಿಕೊಂಡಿದೆ.

‘ಮೂಲದಲ್ಲಿ ಇದು ದತ್ತ ಮಂದಿರ. ಈ ದೇವಸ್ಥಾನಕ್ಕೆ ಕನಿಷ್ಠ ಇನ್ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇದೆ’ ಎನ್ನುತ್ತಾರೆ ದೇವಸ್ಥಾನದ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಧನಂಜಯ ಕುಲಕರ್ಣಿ.

ದತ್ತ ಪಾದುಕೆ ಇಲ್ಲಿಯ ಮೂಲ ದೇವರು. ನರಸಿಂಹ ಭಟ್ಟ ಅಗ್ನಿಹೋತ್ರಿ ಅವರು ಈ ಪಾದುಕೆಗಳನ್ನು ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಅಕ್ಕ ಪಕ್ಕದಲ್ಲಿ ಗಣಪತಿ, ಶಂಕರಾಚಾರ್ಯರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಎದುರಿಗೆ ನವಗ್ರಹ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.

ADVERTISEMENT

ಶ್ರೀಚಕ್ರದ ವಿಶೇಷ

ಶ್ರೀಚಕ್ರದಲ್ಲಿ ಎಲ್ಲ ದೇವತೆಗಳೂ ನೆಲೆಸಿದ್ದಾರೆ ಎಂಬುದು ನಂಬಿಕೆ. ಶ್ರೀಚಕ್ರವೇ ಈ ದೇವಸ್ಥಾನದ ವೈಶಿಷ್ಟ್ಯ. ದೇವಸ್ಥಾನದ ಗರ್ಭಗುಡಿಯ ಗೋಪುರವನ್ನು ಶ್ರೀಚಕ್ರದ ಆಕಾರದಲ್ಲಿ ನಿರ್ಮಿಸಲಾಗಿದೆ. ಆಗಿನ ಮಾಮಲೇದಾರ ಆಗಿದ್ದ ಗಣೇಶಪಂತ್ ಸಹಸ್ರಬುದ್ಧೆ ದೇವಸ್ಥಾನ ನಿರ್ಮಿಸುವ ಕಾರ್ಯ ನಡೆಸಿದರು.

ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯ ಅನಂತ ಶಾಸ್ತ್ರಿ ಎಂಬುವವರು ಕಾಶಿಗೆ ತೆರಳಿ ಅಲ್ಲಿ ಅಧ್ಯಯನ ಮಾಡಿ, ಸನ್ಯಾಸ ದೀಕ್ಷೆ ಪಡೆದರು. ಕೃಷ್ಣೇಂದ್ರ ಗುರು ಎಂದು ಹೆಸರು ಪಡೆದು, ತಮ್ಮ ಗುರುಗಳ ಮಾತಿನಂತೆ ದಕ್ಷಿಣ ದಿಕ್ಕಿನತ್ತ ಹೊರಟರು.

ಹೀಗೆ ಹುಬ್ಬಳ್ಳಿಗೆ ಬಂದ ಕೃಷ್ಣೇಂದ್ರ ಗುರುಗಳು ದತ್ತ ಮಂದಿರಕ್ಕೆ ಭೇಟಿ ನೀಡಿದರು. ಆಗ ಈ ಮಂದಿರದಲ್ಲಿನ ದತ್ತ ಪಾದುಕೆ ಹಾಗೂ ವಿಶೇಷವಾದ ಶ್ರೀಚಕ್ರ ಗೋಪುರ ಕಂಡು, ತಾನು ನೆಲೆಗೊಳ್ಳಲು ಇದೇ ಸೂಕ್ತ ಸ್ಥಳ ಎಂದು ನಂಬಿ ಇಲ್ಲಿಯೇ ತಂಗಿದರು. ನಂತರ ಈ ದೇವಸ್ಥಾನ ಕೃಷ್ಣೇಂದ್ರ ಸ್ವಾಮಿಮಠ ಎಂಬ ಹೆಸರನ್ನು ಪಡೆಯಿತು.

ಕೃಷ್ಣೇಂದ್ರ ಸ್ವಾಮಿಗಳು ತಮ್ಮ ಜೀವಿತಾವಧಿಯಲ್ಲಿ ಹಲವು ಪವಾಡಗಳನ್ನೂ ಮಾಡಿದ್ದಾರೆ ಎಂಬ ಪ್ರತೀತಿ ಇದೆ. ಅವರು ಕ್ರಿ.ಶ. 1855ರಲ್ಲಿ ಜೀವಂತ ಸಮಾಧಿ ಆದರೆಂದು ಅವರ ಬಗೆಗೆ ಬರೆಯಲಾದ ಶ್ರೀ ಕೃಷ್ಣೇಂದ್ರ ಗುರುಗಳ ಚರಿತ್ರೆ ಹೇಳುತ್ತದೆ.

‘ಗುಡಿಯ ಹಿಂದೆ ವಿಶೇಷವಾದ ಐದು ದಳದ ಬಿಲ್ವಪತ್ರೆ ಗಿಡ ಇತ್ತು. ಕಾಲ ಕಳೆದಂತೆ ಈ ಗಿಡ ಒಣಗುತ್ತಾ ಬಂತು. ಈ ಗಿಡ ಪೂರ್ತಿಯಾಗಿ ಒಣಗಿದಾಗ ಕೃಷ್ಣೇಂದ್ರ ಗುರುಗಳು, ತನ್ನ ಅವಧಿಯೂ ಮುಗಿಯಿತು ಎಂದು ಸಮಾಧಿಸ್ಥರಾದರು’ ಎಂದು ಈ ದೇವಸ್ಥಾನಕ್ಕೆ ನಡೆದುಕೊಳ್ಳುವ ಎನ್.ಎಚ್. ಹಳ್ಯಾಳ ಅವರು ತಮ್ಮ ಪೂರ್ವಜರು ಹೇಳಿದ ಕತೆಯನ್ನು ನೆನಪಿಸಿಕೊಂಡರು.

ದತ್ತ ಮಂದಿರದ ಹಿಂಭಾಗದಲ್ಲಿ ಕೃಷ್ಣೇಂದ್ರ ಗುರುಗಳ ಸಮಾಧಿ ಇದೆ. ಅವರ ಸಮಾಧಿ ಅಕ್ಕ ಪಕ್ಕದಲ್ಲಿ ಶಿಷ್ಯಂದಿರಾದ ಸಚ್ಚಿದಾನಂದ ಪ್ರಸನ್ನ ಹಾಗೂ ಶ್ರೀಧರ ಪ್ರಸನ್ನ ಅವರ ಸಮಾಧಿಯನ್ನೂ ಸ್ಥಾಪಿಸಲಾಗಿದೆ.

ಸಮಾಧಿ ಬಲ ಭಾಗದಲ್ಲಿ ವಿಠೋಬ, ರುಕುಮಾಬಾಯಿ, ರಾಧಾ ಹಾಗೂ ಈಶ್ವರ, ಪಾರ್ವತಿ, ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಕಾರ್ತೀಕದಲ್ಲಿ ಗುರುಗಳ ಆರಾಧನೆ

ದೇವಸ್ಥಾನದ ಎಲ್ಲ ಮೂರ್ತಿಗಳಿಗೂ ಪ್ರತಿ ದಿನ ತ್ರಿಕಾಲ ಪೂಜೆ ನಡೆಯುತ್ತದೆ. ತ್ರಿವಿಕ್ರಮ ಶಾಸ್ತ್ರಿ ಲಕ್ಷ್ಮೇಶ್ವರ ಅವರ ವಂಶಸ್ಥರು ನಿರಂತರವಾಗಿ ಈ ದೇವಾಲಯದ ಪೂಜಾ ಸೇವೆ ನಡೆಸಿಕೊಂಡು ಹೋಗುವುದೆಂದು ಕೃಷ್ಣೇಂದ್ರ ಸ್ವಾಮಿಗಳು ಅನುಮತಿ ನೀಡಿದ್ದರು.

ಪ್ರತಿ ಶನಿವಾರ ಪಲ್ಲಕ್ಕಿ ಸೇವೆ ನಡೆಸಲಾಗುತ್ತದೆ. ಶ್ರಾವಣ ಸೋಮವಾರ ವಿಶೇಷ ಪೂಜೆ ಇರುತ್ತದೆ. ದತ್ತ ಜಯಂತಿ, ಶಂಕರ ಜಯಂತಿ ಆಚರಿಸಲಾಗುತ್ತದೆ.

ಕೃಷ್ಣೇಂದ್ರ ಗುರುಗಳು ದೇಹಬಿಟ್ಟ ನೆನಪಿಗಾಗಿ ಪ್ರತಿವರ್ಷ ಕಾರ್ತೀಕ ಶುದ್ಧ ತ್ರಯೋದಶಿ ಹಾಗೂ ಚತುರ್ದಶಿಯಂದು ಆರಾಧನೆ ನಡೆಯುತ್ತದೆ. ಈ ಬಾರಿ 164ನೇ ಆರಾಧನೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.