ADVERTISEMENT

ಒಲಿಂ‍ಪಿಕ್ಸ್‌: ಭಾರತಕ್ಕೆ ‘ಚಿಯರ್‌’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 16:52 IST
Last Updated 6 ಜುಲೈ 2021, 16:52 IST
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ‌ ’ಚಿಯರ್‌ ಸೆಲ್ಫಿ ಪಾಯಿಂಟ್‌’ನಲ್ಲಿ ಫೋಟೊ ತೆಗೆಸಿಕೊಂಡು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಬೆಂಬಲ ನೀಡಿದ ಕ್ರೀಡಾಪಟುಗಳು
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ‌ ’ಚಿಯರ್‌ ಸೆಲ್ಫಿ ಪಾಯಿಂಟ್‌’ನಲ್ಲಿ ಫೋಟೊ ತೆಗೆಸಿಕೊಂಡು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಬೆಂಬಲ ನೀಡಿದ ಕ್ರೀಡಾಪಟುಗಳು   

ಹುಬ್ಬಳ್ಳಿ: ಜಪಾನ್‌ ರಾಜಧಾನಿ ಟೋಕಿಯೊದಲ್ಲಿ ಜು. 26ರಿಂದ ಆರಂಭವಾಗಲಿರುವ ಒಲಿಂಪಿಕ್ಸ್‌ಗೆ ತೆರಳಲಿರುವ ಭಾರತದ ಕ್ರೀಡಾಪಟುಗಳಿಗೆ ಬೆಂಬಲ ನೀಡಲು ರೈಲ್ವೆ ಇಲಾಖೆ ದೇಶದಾದ್ಯಂತ ‘ಚಿಯರ್‌ ಅಭಿಯಾನ’ ಹಮ್ಮಿಕೊಂಡಿದೆ. ಇದರ ಭಾಗವಾಗಿ ಮಂಗಳವಾರ ನೈರುತ್ಯ ರೈಲ್ವೆ ವ್ಯಾಪ್ತಿಯ ಹುಬ್ಬಳ್ಳಿ ವಿಭಾಗದಲ್ಲಿಯೂ ಈ ಅಭಿಯಾನ ಆರಂಭವಾಯಿತು.

ಭಾರತದ ಕ್ರೀಡಾಪಟುಗಳಿಗೆ ಬೆಂಬಲ ನೀಡಲು ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ’ಚಿಯರ್‌ ಸೆಲ್ಫಿ ಪಾಯಿಂಟ್‌’ ನಿರ್ಮಿಸಲಾಗಿದೆ. ಕ್ರೀಡಾಪ್ರೇಮಿಗಳು, ಕ್ರೀಡಾಪಟುಗಳು ಹಾಗೂ ಗಣ್ಯರು ಅಲ್ಲಿ ‌ಫೋಟೊ ತಗೆಯಿಸಿಕೊಂಡು ಬೆಂಬಲ ವ್ಯಕ್ತಪಡಿಸಿದರು.

ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಳಖೇಡೆ ’ರೈಲ್ವೆಯಲ್ಲಿ ಉದ್ಯೋಗದಲ್ಲಿರುವ 23 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತ ಮಹಿಳಾ ಹಾಕಿ ತಂಡದ 16 ಸದಸ್ಯರಲ್ಲಿ 13 ಜನ ರೈಲ್ವೆ ಉದ್ಯೋಗಿಗಳೇ ಇದ್ದಾರೆ. ಪುರುಷರ ಹಾಕಿ ತಂಡದಲ್ಲಿ ನಾಲ್ವರು ರೈಲ್ವೆ ಸಿಬ್ಬಂದಿ ಇದ್ದಾರೆ’ ಎಂದರು.

ADVERTISEMENT

ಹುಬ್ಬಳ್ಳಿ ವಿಭಾಗೀಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ವಾಸ್ಕೋಡಗಾಮ, ಬಳ್ಳಾರಿ ಮತ್ತು ವಿಜಯಪುರ ರೈಲು ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ಅಳವಡಿಸಲಾಗಿದೆ. ಇಲ್ಲಿನ ಪ್ರಾದೇಶಿಕ ಕಚೇರಿಯಲ್ಲಿಯೂ ಈ ಸೌಲಭ್ಯ ಇದೆ.

ವಿಭಾಗೀಯ ಕ್ರೀಡಾ ಸಂಘದ ಕಾರ್ಯದರ್ಶಿ ಕೆ. ಆಸೀಫ್‌ ಹಫೀಜ್‌ ’ಭಾರತದಲ್ಲಿ ಕ್ರೀಡೆ ಸಂಸ್ಕೃತಿಯಂತೆ. ಎಲ್ಲರೂ ಕ್ರೀಡಾಪಟುಗಳನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು. ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಇಮ್ತಿಯಾನ್‌ ಅಹ್ಮದ್‌, ಅಧಿಕಾರಿಗಳಾದ ಅರವಿಂದ ಹೆರ್ಲೆ, ಅಂಕಿತಾ ವರ್ಮಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.