ADVERTISEMENT

ಯಂತ್ರ ಒಂದು; ಉಪಯೋಗ ಮೂರು

ಕಳೆ ನಿಯಂತ್ರಣಕ್ಕೆ ಪವರ್‌ ವೀಡರ್‌ ಯಂತ್ರ ಆವಿಷ್ಕರಿಸಿರುವ ಸಚಿನ್ ಬಡಿಗೇರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 1:43 IST
Last Updated 20 ಸೆಪ್ಟೆಂಬರ್ 2022, 1:43 IST
ಪವರ್‌ ವೀಡರ್‌ ಯಂತ್ರದೊಂದಿಗೆ ಸಚಿನ್‌ ಬಡಿಗೇರ 
ಪವರ್‌ ವೀಡರ್‌ ಯಂತ್ರದೊಂದಿಗೆ ಸಚಿನ್‌ ಬಡಿಗೇರ    

ಹುಬ್ಬಳ್ಳಿ: ರೈತರಿಗೆ ಬಿತ್ತನೆ ಮಾಡಲು, ಕುಂಟೆ ಹೊಡೆಯುವುದಕ್ಕೆ ಹಾಗೂ ಮುಖ್ಯವಾಗಿ ಕಳೆ ನಿಯಂತ್ರಣಕ್ಕೆ ನೆರವಾಗುವ ಉದ್ದೇಶದಿಂದ ಕಲಘಟಗಿಯಹಿರೋನಹಳ್ಳಿಯ ಸಚಿನ್‌ ಬಡಿಗೇರ ಅವರು ‘ಪವರ್‌ ವೀಡರ್‌’ ಎಂಬ ಯಂತ್ರವನ್ನು ಪರಿಚಯಿಸಿದ್ದು, ಈ ಯಂತ್ರ ರೈತರ ಮೆಚ್ಚುಗೆಗೆ ಪಾತ್ರವಾಗಿದೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದ ‘ಕೃಷಿ ಯಂತ್ರಗಳ ಪ್ರದರ್ಶನ’ದಲ್ಲಿ ‍‍ಪವರ್‌ ವೀಡರ್‌ ಯಂತ್ರ ರೈತರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಕೃಷಿ ಯಂತ್ರಗಳನ್ನು ವೀಕ್ಷಿಸಲು ಬಂದ ರೈತರು ಈ ಯಂತ್ರದ ಬಗ್ಗೆ ಸಚಿನ್‌ ಬಡಿಗೇರ ಅವರ ತಂಡದಿಂದ ಮಾಹಿತಿ ಪಡೆದುಕೊಂಡರು.

ಸಚಿನ್‌ ಅವರು ‌ಐಟಿಐ (ಎಲೆಕ್ಟ್ರೀಷಿಯನ್‌) ಶಿಕ್ಷಣ ಪಡೆದಿದ್ದಾರೆ. ಬಸವ ಇಂಡಸ್ಟ್ರೀಸ್‌ ಸ್ಥಾಪನೆ ಮಾಡಿ ಕೃಷಿ ಯಂತ್ರಗಳ ಆವಿಷ್ಕಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ಕಳೆ ನಿಯಂತ್ರಣಕ್ಕೆ ಸಹಕಾರಿ: ‘ಕೃಷಿಯಲ್ಲಿ ಕಳೆ ನಿಯಂತ್ರಣ ಮಾಡುವುದು ಸವಾಲಾಗಿದ್ದು, ಕೃಷಿ ಕಾರ್ಮಿಕರ ಸಮಸ್ಯೆಯೂ ಇರುವುದರಿಂದ ಈ ಯಂತ್ರ ಬಹುಉಪಯೋಗಿ ಆಗಿದೆ’ ಎನ್ನುತ್ತಾರೆ ಸಚಿನ್‌ ಬಡಿಗೇರ.‌

‘ರಾಸಾಯನಿಕಗಳನ್ನು ಬಳಸಿ ಕಳೆ ನಿರ್ಮೂಲನೆ ಮಾಡುವುದರಿಂದ ಭೂಮಿಯ ಫಲವತ್ತತೆಗೆ ಹಾನಿಯಾಗುತ್ತದೆ. ಹೀಗಾಗಿ, ಈ ಯಂತ್ರವನ್ನು ಪರಿಚಯಿಸಲಾಗಿದೆ. ಇದು ಪೆಟ್ರೋಲ್‌ ಚಾಲಿತವಾಗಿದ್ದು, ಕಳೆ ನಿಯಂತ್ರಣ ಹಾಗೂ ನೆಲ ಹಗುರು ಮಾಡಲು ಸಹಕಾರಿಯಾಗಿದೆ. ಯಂತ್ರವು ಮೂರು ಹರಗುವ ಕುಂಟೆಗಳನ್ನು ಹೊಂದಿದ್ದು, ಬೀಜ ಬಿತ್ತುವ ಹಾಗೂ ರಾಸಾಯನಿಕ ಸಿಂಪಡಣೆಗೆ ಸಹಕಾರಿ ಆಗುವ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ’ ಎಂದರು.

ಯಂತ್ರದಿಂದ ಐದಾರು ಎಕರೆ ಕಳೆ ನಿಯಂತ್ರಣ ಮಾಡಬಹುದಾಗಿದೆ. ಆರು ಎಕರೆ ವ್ಯಾಪ್ತಿಯಲ್ಲಿ ಯಂತ್ರವನ್ನು ಬಳಸಲು ಅಂದಾಜು 8ರಿಂದ 9 ಲೀಟರ್ ಪೆಟ್ರೋಲ್‌ ಬಳಕೆಯಾಗುತ್ತದೆ. ಪ್ರತಿ ಯಂತ್ರಕ್ಕೆ ₹26 ಸಾವಿರ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ: 87622 98594 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.