ADVERTISEMENT

ಧಾರವಾಡ: ‘ಜೂಮ್‌’ ಮೂಲಕ ಆನ್‌ಲೈನ್‌ ಪಾಠ

ಪರ್ಯಾಯ ಮಾರ್ಗ ಕಂಡುಕೊಂಡು ಚೇತನ ಬ್ಯುಸಿನೆಸ್‌ ಸ್ಕೂಲ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 11:22 IST
Last Updated 21 ಮಾರ್ಚ್ 2020, 11:22 IST
ಹುಬ್ಬಳ್ಳಿಯ ಚೇತನ ಬ್ಯುಸಿನೆಸ್‌ ಸ್ಕೂಲ್‌ನಲ್ಲಿ ಶನಿವಾರ ಆನ್‌ಲೈನ್‌ ಪಾಠ ಮಾಡಿದ ವಿ.ಎಂ. ಕೊರವಿ
ಹುಬ್ಬಳ್ಳಿಯ ಚೇತನ ಬ್ಯುಸಿನೆಸ್‌ ಸ್ಕೂಲ್‌ನಲ್ಲಿ ಶನಿವಾರ ಆನ್‌ಲೈನ್‌ ಪಾಠ ಮಾಡಿದ ವಿ.ಎಂ. ಕೊರವಿ   

ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವ ಭೀತಿಯಿಂದ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದ್ದರಿಂದ ಪರೀಕ್ಷೆಯ ಸಮೀಪದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹೊರೆಯಾಗಬಾರದು ಎನ್ನುವ ಕಾರಣಕ್ಕೆ ಉಣಕಲ್‌ನ ಚೇತನ ಬ್ಯುಸಿನೆಸ್‌ ಶಾಲೆ ‘ಜೂಮ್‌’ ಆ್ಯಪ್‌ ಆಧರಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಆನ್‌ಲೈನ್‌ ಪಾಠ ಆರಂಭಿಸಿದೆ.

ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಚೇತನ ಸಂಸ್ಥೆಯ ನಿರ್ದೇಶಕ ಡಾ. ವಿಶ್ವನಾಥ ಎಂ. ಕೊರವಿ ‘ಮನೆಯಲ್ಲಿ ವ್ಯರ್ಥವಾಗಿ ಸಮಯ ಕಳೆಯಬಾರದು ಎನ್ನುವ ಕಾರಣಕ್ಕೆ ಎಂ.ಬಿ.ಎ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ ಆರಂಭಿಸಲಾಗಿದೆ. ಆ್ಯಪ್ ಮೂಲಕ ಪ್ರತಿ ವಿದ್ಯಾರ್ಥಿಗಳಿಗೂ ಪ್ರತ್ಯೇಕವಾಗಿ ಯೂಸರ್‌ ನೇಮ್‌ ಹಾಗೂ ಪಾಸ್‌ವರ್ಡ್‌ ನೀಡಲಾಗಿದೆ. ಆನ್‌ಲೈನ್‌ ಪಾಠದಲ್ಲಿ ಎಲ್ಲ ವಿದ್ಯಾರ್ಥಿಗಳು ಪರಸ್ಪರ ಸಂವಾದ ನಡೆಸಬಹುದು. ಶಿಕ್ಷಕರು ಬೋರ್ಡ್ ಮೇಲೆ ಬರೆಯುವುದು ಮತ್ತು ಪವರ್‌ ಪ್ರಸೆಂಟೇಷನ್‌ ಮೂಲಕ ಪಾಠ ಮಾಡುವುದು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಕಾಣುತ್ತದೆ’ ಎಂದರು.

‘ಅಗತ್ಯಬಿದ್ದರೆ ಮುಂಬರುವ ದಿನಗಳಲ್ಲಿ ಶಿಕ್ಷಕರು ಕೂಡ ಮನೆಯಿಂದ ಪಾಠ ಮಾಡುತ್ತಾರೆ. ಮೂರು ದಿನಗಳ ಹಿಂದೆ ಆನ್‌ಲೈನ್‌ ಪಾಠ ಆರಂಭಿಸಲಾಗಿದ್ದು, ನಿತ್ಯ ಮೂರು ತಾಸು ತರಗತಿ ತೆಗೆದುಕೊಳ್ಳಲಾಗುತ್ತಿದೆ. ಸಿಂಧನೂರು, ಹೂವಿನಹಡಗಲಿ ಹೀಗೆ ಬೇರೆ ಬೇರೆ, ಬೇರೆ ಊರುಗಳಿಂದ ಬಂದು ನಮ್ಮಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮನೆಯಲ್ಲಿದ್ದುಕೊಂಡೇ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ವಿವರಿಸಿದರು.

ADVERTISEMENT

ಆಸಕ್ತ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ನಮ್ಮ ಕಾಲೇಜಿಗೆ ಬಂದರೆ ಈ ತಂತ್ರಜ್ಞಾನದ ಬಗ್ಗೆ ಉಚಿತವಾಗಿ ಮಾಹಿತಿ ನೀಡಲಾಗುತ್ತದೆ ಎಂದರು. ಇನ್ನಷ್ಟು ಮಾಹಿತಿಗೆ ಕೊರವಿ ಅವರ ಮೊ. 9448267973 ಅಥವಾ ಕಾಲೇಜಿನ ತಾಂತ್ರಿಕ ಸಿಬ್ಬಂದಿ ಆಶ್ರಫ್‌ ಮೊ. 9845317444 ಸಂಪರ್ಕಿಸುವಂತೆ ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.