ADVERTISEMENT

ಆನ್‌ಲೈನ್‌ಲ್ಲಿ ಪ್ರಾಚಾರ್ಯರಿಗೆ ₹34 ಲಕ್ಷ ಪಂಗನಾಮ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 15:30 IST
Last Updated 26 ಫೆಬ್ರುವರಿ 2020, 15:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ನಗರದ ಫಾತಿಮಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಬ್ರೋ ಹೆನ್ರಿ ಸೆಕ್ವೇರಿಯಾ ಅವರಿಗೆ ₹ 34 ಲಕ್ಷ ವಂಚನೆ ಮಾಡಿದ್ದಾಳೆ. ಹುಬ್ಬಳ್ಳಿ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಎನಾಬೆಲೆ ಮಾರ್ಕ್‌ ಹೆಸರಿನ ಮಹಿಳೆ ತಾನು ಅಮೆರಿಕದ ಫಿಲಿಪ್‌ ಜೆ.ಒ. ಕೆಮೆಸ್ಟ್ರಿ ಹೆಲ್ತ್‌ ಕಂಪನಿಯಲ್ಲಿ ಸಮಾಲೋಚಕಿ ಹಾಗೂ ಖರೀದಿದಾರಳಾಗಿರುವುದಾಗಿ ಪರಿಚಯಿಸಿಕೊಂಡಿದ್ದಳು.

ಮುಂಬೈನಲ್ಲಿರುವ ಟ್ರೀಟ್‌ ಅಂಡ್‌ ಕ್ಯೂರ್‌ ಇಂಡಿಯಾ ಕಂಪನಿಯ ಲಕ್ಷ್ಮಿ ತಿವಾರಿ ಎಂಬುವವರು ‘ಏಕ್‌ಬಿ4’ (ಕ್ಯಾನ್ಸರ್‌, ಡಯಾಬಿಟಿಕ್‌ ಮತ್ತು ಮೆಂಟಲ್‌ ಡಿಸಾರ್ಡರ್‌ರೆ ಬಳಸುವುದು) ಎಂಬ ಔಷಧಿಯನ್ನು ನಮ್ಮ ಕಂಪನಿಗೆ ಪೂರೈಕೆ ಮಾಡುತ್ತಿದ್ದಾರೆ. ಅವರಿಂದ ಔಷಧಿ ಖರೀದಿಸಿ ಪೂರೈಕೆ ಮಾಡಿದರೆ ನೀವು ಲಾಭ ಗಳಿಸಬಹುದು ಎಂದು ಆಸೆ ತೋರಿಸಿದ್ದಳು.

ADVERTISEMENT

ಪ್ರಾಚಾರ್ಯ ಡಾ. ಬ್ರೋ ಕೂಡಲೇ ಲಕ್ಷ್ಮಿ ತಿವಾರಿ ಅವರನ್ನು ಸಂಪರ್ಕಿಸಿ ವಿ.ಎನ್. ಎಂಟರ್‌ಪ್ರೈಸಸ್‌ ಖಾತೆಗೆ ₹3 ಲಕ್ಷ ವರ್ಗಾವಣೆ ಮಾಡಿ, ಎರಡು ಲೀಟರ್‌ ಬಾಟಲಿ ಔಷಧಿ ತರಿಸಿಕೊಂಡಿದ್ದರು. ಎನಾಬೆಲೆ ತಂಡದ ಡಾ. ಅಲೆಕ್ಸ್‌ ಡೇವಿಡ್‌ ಎಂಬಾತ ದೆಹಲಿಗೆ ತೆಗೆದುಕೊಂಡು ಹೋಗಿ ಔಷಧಿ ಉಪಯೋಗಿಯಾಗಿದೆ ಎಂದು ತಿಳಿಸಿದ್ದ.

ಲಾಭದ ಆಸೆಗೆ ಬಿದ್ದ ಪ್ರಾಚಾರ್ಯರು ಮತ್ತಷ್ಟು ಔಷಧಿ ಕಳುಹಿಸುವಂತೆ ಲಕ್ಷ್ಮಿಗೆ ಮುಂಗಡವಾಗಿ ₹31 ಲಕ್ಷ ವರ್ಗಾವಣೆ ಮಾಡಿದ್ದರು. ಕೊರಿಯರ್‌ ಮೂಲಕ ಬಂದ ಬಾಟಲಿಗಳನ್ನು ಯಾರಿಗೆ ತಲುಪಿಸಬೇಕು ಎಂದು ಪ್ರಾಚಾರ್ಯರು ಕರೆ ಮಾಡಿದಾಗ ಲಕ್ಷ್ಮಿ ಹಾಗೂ ಎನಾಬೆಲೆ ಮೊಬೈಲ್‌ಗಳು ಸ್ವಿಚ್ಡ್‌ ಆಫ್‌ ಆಗಿದ್ದರಿಂದ ಮೋಸ ಹೋಗಿರುವುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.