ADVERTISEMENT

ಚುನಾವಣೆಯಲ್ಲಿ ಯುವಕರಿಗೆ ಅವಕಾಶ: ತೇಜಸ್ವಿ ಸೂರ್ಯ ಹೇಳಿಕೆ

ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 6:56 IST
Last Updated 14 ಜನವರಿ 2023, 6:56 IST
   

ಹುಬ್ಬಳ್ಳಿ: ‘ಚುನಾವಣೆಗಳಲ್ಲಿ ಯುವಜನರ ಸ್ಪರ್ಧೆಗೆ ಬಿಜೆಪಿಯಲ್ಲಿ ಹೆಚ್ಚಿನ ಅವಕಾಶ ಸಿಗಲಿದೆ. ನಮ್ಮ ಪಕ್ಷದಲ್ಲಿ ಮಾತ್ರ ರಾಜಕೀಯ, ಜಾತಿ ಹಾಗೂ ಹಣ ಬಲವಿಲ್ಲದೆ ಸಾಮಾನ್ಯರಿಗೂ ರಾಜಕೀಯವಾಗಿ ಹೆಚ್ಚಿನ ಅವಕಾಶಗಳು ಸಿಗುತ್ತವೆ’ ಎಂದು ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.

ನಗರದ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿರುವ ಸಂಸದರ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಯುವ ಮೋರ್ಚಾ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದಲ್ಲಿ ಸಾಮಾನ್ಯರಿಗೂ ಅವಕಾಶ ಸಿಗುತ್ತದೆ ಎಂಬುದಕ್ಕೆ ನಾನೇ ನಿದರ್ಶನ. ಅವಕಾಶ ವಂಚಿತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿರುವ ಪಕ್ಷವು, ಪ್ರಾಮಾಣಿಕವಾಗಿ ದುಡಿದವರನ್ನು ಗುರುತಿಸಿ ಉತ್ತಮ ಸ್ಥಾನಮಾನ ನೀಡಿದೆ’ ಎಂದರು.

‘ಪಕ್ಷವು ಯುವಜನರನ್ನು ತಲುಪುವಲ್ಲಿ ಯುವ ಮೋರ್ಚಾ ಮುಖ್ಯ ಪಾತ್ರ ವಹಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಲ್ಲಿ ಮೂರ್ನಾಲ್ಕು ಸಾವಿರ ಹೊಸ ಮತದಾರರ ಸಂಖ್ಯೆ ಹೆಚ್ಚಾಗಿದೆ. ಅಂತಹವರನ್ನು ತಲುಪಲು ಮೋರ್ಚಾ ಕೆಲಸ ಮಾಡುತ್ತಿದೆ. ಯುವ ಕಾರ್ಯಕರ್ತರು ಚುನಾವಣೆ ಎದುರು ನೋಡುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತವನ್ನು ಜನ ಮೆಚ್ಚಿಕೊಂಡಿದ್ದಾರೆ. ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿದ್ದೇವೆ. ಮೋದಿ ಅವರ ಭೇಟಿ, ಉತ್ತರ ಕರ್ನಾಟಕದಲ್ಲಿ ಚುನಾವಣೆಯ ಉತ್ಸಾಹವನ್ನು ಹೆಚ್ಚಿಸಿದೆ’ ಎಂದು ತಿಳಿಸಿದರು.

ADVERTISEMENT

‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರೆಯಬೇಕೆಂಬುದು ಬಿಜೆಪಿ ಸಿದ್ದಾಂತ. ಜಾತಿ–ಧರ್ಮ ಮೀರಿ ಎಲ್ಲರಿಗೂ ಸಮಾನ ಅವಕಾಶ ಹಾಗೂ ಎಲ್ಲರ ಸಮಾನ ವಿಕಾಸವಾಗಬೇಕು ಎಂಬುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.