ADVERTISEMENT

ಪಿಎಸ್‌ಡಿ ಸ್ಥಳಾಂತರಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 15:25 IST
Last Updated 5 ನವೆಂಬರ್ 2020, 15:25 IST
ಪೋಸ್ಟಲ್‌ ಸ್ಟೋರ್‌ ಡಿಪೊ ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಗುರುವಾರ ಎಎಪಿ ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು
ಪೋಸ್ಟಲ್‌ ಸ್ಟೋರ್‌ ಡಿಪೊ ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಗುರುವಾರ ಎಎಪಿ ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು   

ಹುಬ್ಬಳ್ಳಿ: ನಗರದಲ್ಲಿರುವ ಪೋಸ್ಟಲ್‌ ಸ್ಟೋರ್‌ ಡಿಪೊ (ಪಿಎಸ್‌ಡಿ) ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವ ನಿರ್ಧಾರವನ್ನು ಕೈ ಬಿಡಬೇಕು ಎಂದು ಆಮ್‌ ಆದ್ಮಿ ಪಕ್ಷ ಒತ್ತಾಯಿಸಿದೆ.

ಈ ಕುರಿತು ಎಎಪಿ ಗುರುವಾರ ಹುಬ್ಬಳ್ಳಿ ತಹಶೀಲ್ದಾರ್‌ ಮೂಲಕ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಖಾತೆ ಸಚಿವ ರವಿಶಂಕರ ಪ್ರಸಾದ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

‘ಬಹುಜನರ ನಿರೀಕ್ಷೆಯಂತೆ 2014 ಮತ್ತು 2019ರ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಈ ಭಾಗದ 14 ಜಿಲ್ಲೆಗಳಿಗೆ ಅಂಚೆ ಸಾಮಗ್ರಿ ಒದಗಿಸುತ್ತಿರುವ ಡಿಪೊವನ್ನು ಸ್ಥಳಾಂತರಿಸಲು ಮುಂದಾಗಿದೆ. ಕೂಡಲೇ ಇದನ್ನು ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಉತ್ತರ ಕರ್ನಾಟಕದಲ್ಲಿದ್ದ ಗ್ಯಾಜಿಟೆಡ್‌ ಸೀನಿಯರ್‌ ಪೋಸ್ಟ್ ಮಾಸ್ಟರ್‌ ಹುದ್ದೆಯನ್ನು ಎಂಟು ತಿಂಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರಿಸಿತ್ತು. ಪಿಎಸ್‌ಡಿ ಕಚೇರಿ ಸ್ಥಳಾಂತರ ಅಧಿಕಾರ ವಿಕೇಂದ್ರೀಕರಣ ತತ್ವಕ್ಕೆ ವಿರುದ್ಧವಾದ ನಡೆಯಾಗಿದೆ’ ಎಂದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ನರಗುಂದ ಹಾಗೂ ಕಾರ್ಯಕರ್ತರು ಇದ್ದರು.

ಕರಪತ್ರ ಹಂಚಿಕೆ: ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಬೆಲೆ ಹೆಚ್ಚಳ ವಿರೋಧಿಸಿ ನ. 7ರಂದು ಎಎಪಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಬೆಂಬಲ ಕೋರಿ ಪಕ್ಷದ ಕಾರ್ಯಕರ್ತರು ಸಣ್ಣ ಕೈಗಾರಿಕೆಗಳ ಉದ್ಯಮಿಗಳ ಬೆಂಬಲ ಕೋರಿ ಕರಪತ್ರ ಹಂಚಿದರು.

ಕಾರ್ಯಕಾರಿ ಸಮಿತಿ ಸದಸ್ಯರಾದ ವಿಕಾಸ ಸೊಪ್ಪಿನ, ಶಶಿಕುಮಾರ್ ಸುಳ್ಳದ, ಡೇನಿಯಲ್ ಐಕೋಸ್, ಶಿವಕುಮಾರ್ ಬಾಗಲಕೋಟೆ, ಮೆಹಬೂಬ್ ಹೊಸಮನಿ, ಭೀಮಪ್ಪ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.