ಹುಬ್ಬಳ್ಳಿ: ಒಂದೇ ಎಕರೆಯಲ್ಲಿ 20–22 ಬೆಳೆಗಳನ್ನು ಬೆಳೆಯುವ ಅಳ್ನಾವರ ತಾಲ್ಲೂಕು ಹೊನ್ನಾಪುರದ ರೈತ ರಾಮಪ್ಪ ಶಿವಪ್ಪ ನಂದನವಾಡಿ ಸಾವಯವ ಪದ್ಧತಿಯಲ್ಲಿ ಕಡಿಮೆ ಖರ್ಚು ಹೆಚ್ಚು ಇಳುವರಿ ಎಂಬ ಫಲಿತಾಂಶ ಕಂಡುಕೊಂಡಿದ್ದಾರೆ. ತರಕಾರಿ, ಹೂ, ಹಣ್ಣು, ಸೊಪ್ಪು, ಅರಿಸಿಣ ಹಾಗೂ ಇನ್ನೂ ಹಲವು ವೈವಿಧ್ಯಮಯ ಬೆಳೆಗಳನ್ನು ಅವರ ಹೊಲದಲ್ಲಿ ಕಾಣಬಹುದು.
ಸಂಪೂರ್ಣ ಸಾವಯವ ಪದ್ಧತಿ ಅನುಸರಿಸುವ ರಾಮಪ್ಪ ಪ್ರಮುಖವಾಗಿ ಹೀರೇಕಾಯಿ, ಮೆಣಸಿನಕಾಯಿ, ಹಾಗಲಕಾಯಿ, ಟೊಮೆಟೊ, ಬೀನ್ಸ್ ಬೆಳೆಯುತ್ತಾರೆ. ಸ್ಥಳೀಯವಾಗಿ ಮಂಗಳವಾರ ನಡೆಯುವ ಸಂತೆಯಲ್ಲಿಯೇ ಎಲ್ಲ ತರಕಾರಿಗಳೂ ಮಾರಾಟವಾಗುತ್ತವೆ. ಹೀಗಾಗಿ ಮಾರುಕಟ್ಟೆ ಸಮಸ್ಯೆ ಇವರಿಗಿಲ್ಲ.
ತರಕಾರಿ ಬೆಳೆಯ ಮಧ್ಯ ಖಾಲಿ ಜಾಗದಲ್ಲಿ ಅರಿಸಿಣ ಹಾಕಿದ್ದಾರೆ. ಅರಿಸಿಣ ಬೇರು ಕಿತ್ತು ಒಣಗಿಸಿ ಪುಡಿ ಮಾಡಿಯೂ ಮಾರಾಟ ಮಾಡುತ್ತಿರುವುದರಿಂದ ಉತ್ತಮ ಆದಾಯ ಬರುತ್ತಿದೆ. ಚೆಂಡು ಹೂ, ಸೇವಂತಿಗೆ (ಬಿಳಿ) ಯನ್ನೂ ತರಕಾರಿ ಬೆಳೆಗಳ ಮಧ್ಯ ಹಾಕಿದ್ದಾರೆ. ಅರಿಸಿಣ ಹಾಗೂ ಹೂಗಳನ್ನು ನಡುನಡುವೆ ಬೆಳೆಯುವುದರಿಂದ ತರಕಾರಿ ಬೆಳೆ ರೋಗಮುಕ್ತವಾಗಿವೆ ಎಂಬುದು ರಾಮಪ್ಪ ಅವರ ಅನುಭವದ ಮಾತು.
ಪಪ್ಪಾಯ ಬೆಳೆಯೂ ಇವರಿಗೆ ಲಾಭದಾಯಕವಾಗಿ ಪರಿಣಮಿಸಿದೆ. ಪುಣೆಯಿಂದ ತಂದ ಹಾಕಿದ ಜೀವಿಲಾಸ ತಳಿಯ 70 ಪೇರಲ ಸಸಿಗಳು ಇವರ ಹೊಲದಲ್ಲಿ ಈಗ ನಳನಳಿಸುತ್ತಿದ್ದು, ಉತ್ತಮ ಫಸಲು ನೀಡುತ್ತಿವೆ. ಬೇಸಿಗೆಯಲ್ಲಿ ಮೆಂತೆ ಸೊಪ್ಪು, ಕೊತ್ತಂಬರಿ ಹಾಗೂ ಸಬ್ಬಸಗಿ ಸಹ ಬೆಳೆಯುತ್ತಿದ್ದಾರೆ.
‘ಒಂದು ಕೊಳವೆಬಾವಿ ಕೊರೆಸಿದ್ದು ನೀರಿಗೆ ಸಮಸ್ಯೆ ಇಲ್ಲ. 8 ಎರೆಹುಳು ತೊಟ್ಟಿಗಳು ಇದ್ದು, ವಾರ್ಷಿಕ 80 ಕ್ವಿಂಟಲ್ ಎರೆಹುಳು ಗೊಬ್ಬರ ತಯಾರಾಗುತ್ತದೆ. ಸ್ವಂತ ಹೊಲಕ್ಕೆ ಸಾಕಾಗಿ ಉಳಿದದ್ದನ್ನು ಮಾರಾಟ ಮಾಡುತ್ತೇನೆ. ಬಯೊ ಟ್ಯಾಂಕ್ ನಿರ್ಮಾಣ ಮಾಡಿದ್ದೇನೆ. ಇದರಲ್ಲಿ ಜೈವಿಕ ಕೀಟನಾಶಕ ಹಾಗೂ ಕೃಷಿಗೆ ಅಗತ್ಯ ಔಷಧಗಳನ್ನು ತಯಾರಿಸಿಕೊಳ್ಳುತ್ತೇನೆ. ಕೃಷಿ ಇಲಾಖೆಯ ಆತ್ಮ ಯೋಜನೆಯ ಅಡಿ ಇದಕ್ಕೆ ಸಹಾಯಧನವೂ ಲಭಿಸಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ನಿರಂತರವಾಗಿ ಮಾರ್ಗದರ್ಶನ ಲಭಿಸುತ್ತಿದೆ’ ಎಂದು ರಾಮಪ್ಪ ತಿಳಿಸಿದರು.
2002ರಿಂದ ಕೃಷಿ ಕಾಯಕ ನಿರತರಾಗಿರುವ ರಾಮಪ್ಪ ಅವರಿಗೆ ಒಂದು ಎಕರೆಯಿಂದ ವಾರ್ಷಿಕ ಕನಿಷ್ಠ ₹ 3 ಲಕ್ಷ ಆದಾಯ ಬರುತ್ತಿದೆ. ಪತ್ನಿ ಹಾಗೂ ನಾಲ್ವರು ಹೆಣ್ಣುಮಕ್ಕಳೂ ಕೃಷಿಯಲ್ಲಿ ರಾಮಪ್ಪ ಅವರೊಂದಿಗೆ ಕೈಜೋಡಿಸುತ್ತಾರೆ. ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪಂಡಿತ ಪ್ರಶಸ್ತಿ, ಕೃಷಿ ಇಲಾಖೆಯಿಂದ ಅತ್ಯುತ್ತಮ ಕೃಷಿಕ ಪ್ರಶಸ್ತಿಗಳೂ ಇವರಿಗೆ ಒಲಿದಿವೆ. ಇವರ ಸಾವಯವ ಹಾಗೂ ಸಮಗ್ರ ಕೃಷಿ ವಿಧಾನ ನೋಡಲು ವಿದ್ಯಾರ್ಥಿಗಳು, ಸಂಶೋಧಕರೂ ಆಗಾಗ ಇವರ ಜಮೀನಿಗೆ ಭೇಟಿ ನೀಡುತ್ತಾರೆ.
ಶುಂಠಿ ಬೆಳೆಯ ನೂತನ ಪ್ರಯೋಗ ವಾರ್ಷಿಕ 80 ಕ್ವಿಂಟಲ್ ಎರೆಹುಳು ಗೊಬ್ಬರ ಉತ್ಪಾದನೆ ಲಾಭ ತಂದ ಪಪ್ಪಾಯ, ಪೇರಲ ಬೇಸಾಯ
ಈಚೆಗೆ ಶಿರಸಿ–ಯಲ್ಲಾಪುರದಲ್ಲಿ ಶುಂಠಿ ಕೃಷಿ ನೋಡಿ ಬಂದಿದ್ದು ನನ್ನ ಹೊಲದಲ್ಲೂ 2 ಗುಂಟೆಯಷ್ಟು ಜಾಗದಲ್ಲಿ ಶುಂಠಿಯನ್ನು ಪ್ರಯೋಗಾರ್ಥವಾಗಿ ಹಾಕಿದ್ದೇನೆರಾಮಪ್ಪ ಶಿವಪ್ಪ ನಂದನವಾಡಿ ರೈತ
ಭತ್ತ ತೊಗರಿಯೂ ಇವೆ 3 ಎಕರೆ ಜಮೀನು ಲೀಸ್‌ಗೆ ಪಡೆದು ಅದರಲ್ಲಿ ಮುಗದ ಸುಗಂಧಿ ಭತ್ತ ಬಾಸುಮತಿ ಭತ್ತ ಗೋವಿನ ಜೋಳ ಕಬ್ಬು ತೊಗರಿ ಕೃಷಿಯನ್ನೂ ಮಾಡುತ್ತಿದ್ದಾರೆ. ಭತ್ತವನ್ನು ಧಾರವಾಡ–ಹಾವೇರಿ–ಗದಗ ಜಿಲ್ಲೆಗಳ ಪ್ರಾಂತೀಯ ಸಹಕಾರಿ ಸಾವಯವ ಕೃಷಿಕರ ಸಂಘಗಳ ಒಕ್ಕೂಟಕ್ಕೆ ಮಾರಾಟ ಮಾಡುತ್ತಾರೆ. ಇದರಿಂದಲೂ ಉತ್ತಮ ಲಾಭ ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.