
ಹುಬ್ಬಳ್ಳಿ: ಕುಷ್ಠರೋಗ ನಿರ್ಮೂಲನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೂ ಸಂಪೂರ್ಣವಾಗಿ ನಿರೀಕ್ಷಿತ ಮಟ್ಟದಲ್ಲಿ ಫಲಪ್ರದವಾಗಿಲ್ಲ. ರಾಜ್ಯದಲ್ಲಿ ಒಟ್ಟು 1,922 ಮಂದಿ ಕುಷ್ಟರೋಗ ಪೀಡಿತರು ಇದ್ದಾರೆ.
ಕುಷ್ಠ ರೋಗದ ಪ್ರಭಾವ 293 ಜನರಲ್ಲಿ ಸಾಧಾರಣವಾಗಿದ್ದರೆ, 1,318 ಜನರಲ್ಲಿ ಗಂಭೀರ ಸ್ವರೂಪದಲ್ಲಿದೆ. ರಾಜ್ಯದಾದ್ಯಂತ 12 ವರ್ಷದೊಳಗಿನ 50 ಮಕ್ಕಳು ಕೂಡ ಈ ರೋಗದಿಂದ ಬಳಲುತ್ತಿದ್ದಾರೆ.
‘ಚರ್ಮದ ಮೇಲೆ ತಿಳಿ, ಬಿಳಿ, ತಾಮ್ರ ಬಣ್ಣದ ಮಚ್ಚೆ, ದಪ್ಪನಾದ ಎಣ್ಣೆ ಪಸರಿಸಿದಂತಹ ಹೊಳೆಯುವ ಚರ್ಮ, ದೇಹದ ಮೇಲಿನ ಗಂಟು, ಕಣ್ಣಿನ ರೆಪ್ಪೆಗಳನ್ನು ಮುಚ್ಚುವಲ್ಲಿ ತೊಂದರೆ, ವಾಸಿಯಾಗದ ಗಾಯ, ಬೆರಳು ಮಡಚಿಕೊಂಡಿರುವುದು ಕುಷ್ಠರೋಗದ ಲಕ್ಷಣಗಳಾಗಿವೆ. ಇದು ಎಲ್ಲರಿಗೂ ಕಾಡುತ್ತದೆ’ ಎಂದು ಧಾರವಾಡ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಶಶಿಧರ ಕಳಸೂರಮಠ ತಿಳಿಸಿದರು.
‘ಕುಷ್ಠರೋಗದ ಬಗ್ಗೆ ಅನೇಕ ಜನರಲ್ಲಿ ಮೂಢನಂಬಿಕೆ ಇದೆ. ಈ ರೋಗಕ್ಕೆ ತುತ್ತಾದವರು ಶಾಪಗ್ರಸ್ಥರು ಎಂದು ದೂಷಿಸುತ್ತಾರೆ. ಆದರೆ, ಇದು ‘ಮೈಕೋ ಬ್ಯಾಕ್ಟೀರಿಯಂ ಲೆಪ್ರೆ’ ಎಂಬ ರೋಗಾಣುವಿನಿಂದ ಬರುತ್ತದೆ. ಕೆಲವರಿಗೆ ಇದರ ಬಗ್ಗೆ ಅರಿವಿನ ಕೊರತೆಯಿದೆ. ಚಿಕಿತ್ಸೆ ಪಡೆಯಲು ರೋಗಿಗಳು ಹಿಂಜರಿಯುವ ಕಾರಣ ಪ್ರಕರಣಗಳು ಹೆಚ್ಚುತ್ತಿದೆ’ ಎಂದು ಅವರು ತಿಳಿಸಿದರು.
‘ಕುಷ್ಠರೋಗ ಸಾಂಕ್ರಾಮಿಕವಲ್ಲ. ಹೀಗಾಗಿ ಕುಷ್ಟರೋಗಿಗಳನ್ನು ದೂರ ಇಡುವುದು, ಕೀಳಾಗಿ ಕಾಣುವುದು ಸರಿಯಲ್ಲ. ಅನುವಂಶಿಕವಾಗಿ ಮತ್ತು ಸೋಂಕಿತ ವ್ಯಕ್ತಿಯೊಂದಿಗೆ ದೀರ್ಘಕಾಲದ, ನಿಕಟ ಸಂಪರ್ಕದಿಂದ ಈ ರೋಗ ಹರಡುತ್ತದೆ. ಈ ರೋಗಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಔಷಧದ ಲಭ್ಯ ಇದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.