ADVERTISEMENT

ಅಖಾಡದಲ್ಲಿ ‘ಪೈಲ್ವಾನ್‌ ಪೊಲೀಸರು’

ನಿರ್ಣಾಯಕರಾಗಿ ಕೆಲಸ ಮಾಡುತ್ತಿರುವ ಜಿಲ್ಲೆಯ ಅಧಿಕಾರಿಗಳು

ಪ್ರಮೋದ್
Published 24 ಫೆಬ್ರುವರಿ 2020, 8:49 IST
Last Updated 24 ಫೆಬ್ರುವರಿ 2020, 8:49 IST
ಧಾರವಾಡದಲ್ಲಿ ನಡೆಯುತ್ತಿರುವ ಕುಸ್ತಿ ಹಬ್ಬದಲ್ಲಿ ನಿರ್ಣಾಯಕರಾಗಿ ಪಾಲ್ಗೊಂಡಿರುವ ಜಿಲ್ಲೆಯ ಪೊಲೀಸ್ ಪೈಲ್ವಾನರು
ಧಾರವಾಡದಲ್ಲಿ ನಡೆಯುತ್ತಿರುವ ಕುಸ್ತಿ ಹಬ್ಬದಲ್ಲಿ ನಿರ್ಣಾಯಕರಾಗಿ ಪಾಲ್ಗೊಂಡಿರುವ ಜಿಲ್ಲೆಯ ಪೊಲೀಸ್ ಪೈಲ್ವಾನರು   

ಹುಬ್ಬಳ್ಳಿ: ಪೇಡಾನಗರಿಯಲ್ಲಿ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ಗಣ್ಯರು ಪಾಲ್ಗೊಂಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕುಸ್ತಿ ಕ್ರೀಡಾಕೂಟದಲ್ಲಿ ಪದಕ ಗೆದ್ದು ಪೊಲೀಸ್‌ ಇಲಾಖೆಯಲ್ಲಿ ನೌಕರಿಗೆ ಸೇರಿರುವ ಧಾರವಾಡ ಜಿಲ್ಲೆಯ ಹಿರಿಯ ಪೈಲ್ವಾನರೂ ಅಖಾಡದಲ್ಲಿ ಮಿಂಚುತ್ತಿದ್ದಾರೆ.

ಕಲಘಟಗಿ ಪೊಲೀಸ್‌ ಠಾಣೆಯ ಎಎಸ್‌ಐ ಗಂಗಾಧರ ಉಡಚ್ಚಣ್ಣವರ, ಅಳ್ನಾವರ ಠಾಣೆಯ ಎಎಸ್‌ಐ ಕಲ್ಮೇಶ ಗುಡಗೇರಿ, ಸಶಸ್ತ್ರ ಮೀಸಲು ಪಡೆಯ ಆರ್‌.ಜಿ. ಬಾಗಲಕೋಟಿ, ಎ.ಎನ್‌. ಚಿಕಣಿ, ಸುರೇಶ ಕಾಮಣ್ಣವರ, ಬಸನಗೌಡ ಪಾಟೀಲ, ಶಿವರುದ್ರ ಗಂಡಲಟ್ಟಿ, ಗರದ ಠಾಣೆಯ ಎಎಸ್‌ಐ ಶಿವಾನಂದ ಗಂಡಲಟ್ಟಿ, ಸಂಚಾರಿ ಉತ್ತರ ವಲಯದ ಹೆಡ್‌ ಕಾನ್‌ಸ್ಟೆಬಲ್‌ ಹಸನ್ ಎಸ್‌. ನದಾಫ್‌, ಎಂ.ಎಂ. ನದಾಫ್‌, ಎಎಸ್‌ಐ ಸಿದ್ದಪ್ಪ ಮರಿಕೆಂಚಣ್ಣನವರ, ಹುಬ್ಬಳ್ಳಿ ಕಮರಿಪೇಟೆ ಠಾಣೆಯ ಆರ್‌.ಎಚ್‌. ನದಾಫ್‌ ಮತ್ತು ಜಿ.ಎಂ. ಮಧು ಚೆನ್ನಣ್ಣನವರ ಪಾಲ್ಗೊಂಡಿದ್ದಾರೆ.

ಇವರೆಲ್ಲ ಪೊಲೀಸ್‌ ಇಲಾಖೆಯ ವಿವಿಧ ಕುಸ್ತಿ ಕ್ರೀಡಾಕೂಟಗಳಲ್ಲಿ ಇಲಾಖೆಯನ್ನು ಪ್ರತಿನಿಧಿಸಿದ್ದರು. ಕುಸ್ತಿ ಹಬ್ಬದಲ್ಲಿ ನಿರ್ಣಾಯಕರಾಗಿ ಮತ್ತು ಕ್ರೀಡಾಧಿಕಾರಿಗಳಾಗಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಅನೇಕ ಪೊಲೀಸರು ವಿವಿಧ ಗರಡಿ ಮನೆಗಳಲ್ಲಿ ತರಬೇತಿ ನೀಡುತ್ತಿದ್ದಾರೆ.

ADVERTISEMENT

ಕುಸ್ತಿ ಹಬ್ಬದ ಬಗ್ಗೆ ಸಂತಸ ವ್ಯಕ್ತಪಡಿಸಿದ ಕಮರಿಪೇಟೆ ಠಾಣೆಯ ಸಿಬ್ಬಂದಿ ಆರ್‌.ಎಚ್‌. ನದಾಫ್‌ ‘ತವರಿನಲ್ಲಿ ನಡೆಯುತ್ತಿರುವ ಹಬ್ಬದಲ್ಲಿ ಕೆಲಸ ನಿರ್ವಹಿಸಲು ಸಂತಸವೆನಿಸುತ್ತಿದೆ. ಇಲಾಖೆಯ ಕ್ರೀಡಾಕೂಟದಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸಿದ್ದೆ. ಈಗ ಬಿಡುವಿನ ಸಮಯದಲ್ಲಿ ಧಾರವಾಡದಲ್ಲಿ ಜ್ಯೋತಿ ತಾಲೀಮಿನಲ್ಲಿ ‌ಯುವ ಪೈಲ್ವಾನರಿಗೆ ಕುಸ್ತಿ ಹೇಳಿಕೊಡುತ್ತೇನೆ. ನಿವೃತ್ತಿಯಾದ ಬಳಿಕವೂ ಕುಸ್ತಿ ಕಲಿಸುವ ಆಸೆಯಿದೆ’ ಎಂದರು.

‘ಕುಸ್ತಿ ಹಬ್ಬದಲ್ಲಿ ಹೆಸರಾಂತ ಪೈಲ್ವಾನರು ಪಾಲ್ಗೊಂಡಿದ್ದಾರೆ. ಸ್ಥಳೀಯ ಮಕ್ಕಳು ಇದರ ಅನುಕೂಲ ಪಡೆದುಕೊಳ್ಳಬೇಕು. ಆಗ ಅವರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕೌಶಲಗಳನ್ನು ಕಲಿತುಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.