ಹಳೇಬೀಡು: ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಕ ಮಹೋತ್ಸವದ 4ನೇ ದಿನವಾದ ಸೋಮವಾರ ತೀರ್ಥಂಕರರ ತಪಕಲ್ಯಾಣಿಕ, ಭಕ್ತಿ ಪ್ರಧಾನದ ಜೊತೆಗೆ ರಾಜ ವೈಭವದಿಂದ ನಡೆಯಿತು. ನಿತ್ಯಾಭಿಷೇಕ, ಶಾಂತಿ ಹೋಮ ಯಾಗ ಮಂಡಲ ವಿಧಾನಗಳು ಶಾಸ್ತ್ರೋಕ್ತವಾಗಿ ನಡೆದವು.
ತೀರ್ಥಂಕರರು ವೈರಾಗ್ಯ ಹೊಂದುವ ಮೊದಲು ಚಕ್ರವರ್ತಿಯಾಗಿದ್ದರು. ಹಾಗಾಗಿ ಪ್ರತಿಷ್ಠಾಪನೆ ಆಗಿರುವ ಮುನಿಸುವ್ರತ ತೀರ್ಥಂಕರ ಮೂರ್ತಿ ಹಾಗೂ ಶೀತಲನಾಥ ತೀರ್ಥಂಕರ ಮೂರ್ತಿಗಳಿಗೆ ರಾಜ ಪೋಷಾಕು ತೊಡಿಸಲಾಗಿತ್ತು.
ಜೈನ ಮುನಿಗಳು ಸಮ್ಮುಖದಲ್ಲಿ ಸೋಂದಾ ಮಠದ ಭಟ್ಟಕಲಂಕ ಭಟ್ಟಾರಕ ಪಟ್ಟಚಾರ್ಯ ಸ್ವಾಮೀಜಿ ತಪಕಲ್ಯಾಣಿಕ ವಿಧಾನ ನೆರವೇರಿಸಿದರು. ಆಚಾರ್ಯ ವಿಶುದ್ಧ ಸಾಗರ ಮುನಿ ಮಹಾರಾಜ್, ಆಚಾರ್ಯ ಚಂದ್ರಪ್ರಭ ಮುನಿ ಮಹಾರಾಜ್, ವೀರಸಾಗರ ಮುನಿ ಮಹಾರಾಜರ ಮಾರ್ಗದರ್ಶನದಂತೆ ವಿಧಾನಗಳನ್ನು ನಡೆಸಲಾಯಿತು.
ದೂರದ ಊರಿನಿಂದ ಬಂದಿದ್ದ ಜಿನ ಭಕ್ತರು ಪೂಜಾ ವಿಧಾನ ಕಣ್ತುಂಬಿಕೊಂಡರು. ಜೈನರು ಮಾತ್ರವಲ್ಲದೇ ಜೈನೇತರರು ಪೂಜಾ ವಿಧಾನಗಳನ್ನು ಭಕ್ತಿ ಭಾವದಿಂದ ವೀಕ್ಷಿಸಿದರು.
ಸೋಂದಾ ಮಠದ ಭಟ್ಟಕಲಂಕ ಭಟ್ಟಾರಕ ಪಟ್ಟಚಾರ್ಯ ಸ್ವಾಮೀಜಿ ಮಾತನಾಡಿ, ಮೊದಲ ತೀರ್ಥಂಕರ ಆದಿನಾಥರಿಗೆ ರಾಜ್ಯಾಭಿಷೇಕ ಮಾಡುವ ವಿಧಾನ ಜೈನರಗುತ್ತಿಯಲ್ಲಿ ಅರ್ಥಪೂರ್ಣವಾಗಿ ನೆರವೇರಿತು. ಊರಿನಿಂದ ದೂರವಿರುವ ಕಾಡಂಚಿನ ಶಿವಪುರದಲ್ಲಿ ಬೃಹತ್ ಪಂಚಕಲ್ಯಾಣ ಯಶಸ್ವಿಯಾಗಿರುವುದು ಸಂತೋಷದ ವಿಚಾರ. ಶ್ರವಣಬೆಳಗೊಳದ ನಂತರ ಹೆಚ್ಚಿನ ಜೈನ ಮುನಿಗಳ ಸಾನ್ನಿಧ್ಯದಲ್ಲಿ ಪಂಚಕಲ್ಯಾಣಕ ನಡೆದಿರುವುದು ಜೈನರಗುತ್ತಿಯಲ್ಲಿ ಮಾತ್ರ ಎಂದು ಹೇಳಿದರು
ಸೋಂದಾ ಸ್ವಾಮೀಜಿಗೆ ಸ್ವಾಗತ
ಸೋಂದಾ ಜೈನ ಮಠದ ಭಟ್ಟಕಲಂಕ ಭಟ್ಟಾರಕ ಪಟ್ಟಚಾರ್ಯ ಸ್ವಾಮೀಜಿ ಅವರನ್ನು ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಪಂಚಕಲ್ಯಾಣಕ ಮಹಾ ಮಂಟಪಕ್ಕೆ ಕರೆತರಲಾಯಿತು. ಕಳಸದೊಂದಿಗೆ ಶ್ವೇತ ವಸ್ತ್ರ ಧರಿಸಿದ ಶ್ರಾವಕಿಯರಾದ ಸುರೇಖಾ ಬ್ರಹ್ಮೇಶ್ ಸುಮನ ಜಯಚಂದ್ರ ವಾಣಿ ರತ್ನಾಕರ್ ಶೀಲಾ ನಾಗರಾಜ್ ಪದ್ಮಿಣಿ ಭದ್ರಿ ಪ್ರಸಾದ್ ಪದ್ಮ ರೋಹಿತ್ ವರ್ಷ ಜ್ವಾಲೇಶ್ ತೇಜಸ್ವಿನಿ ಪುರುಷೋತ್ತಮ ಅವರು ಸ್ವಾಗತಿಸಿ ಸ್ವಾಮೀಜಿಯವರನ್ನು ಜಿನ ಮಂದಿರಕ್ಕೆ ಕರೆತಂದರು.
ತೀರ್ಥಂಕರರ ಬಾಲ್ಯಾವಸ್ಥೆ ಪ್ರಸ್ತುತಿ
ತೀರ್ಥಂಕರರ ಬಾಲ್ಯಾವಸ್ಥೆಯನ್ನು ಪ್ರಸ್ತುತಪಡಿಸುವ ವಿಧಾನಗಳು ಭಕ್ತಿ ಭಾವದೊಂದಿಗೆ ವರ್ಣಮಯವಾಗಿ ನಡೆದವು. ತೀಥಂಕರ ಕುಮಾರಾವಸ್ಥೆಗೆ ಬರುತ್ತಾನೆ. ತೀರ್ಥಂಕರನಾಗುವ ಮಗನಿಗೆ ತಂದೆ ಪ್ರಜಾಪಾಲನೆಯ ಜವಾಬ್ದಾರಿ ಕೊಟ್ಟು ರಾಜ್ಯಾಭಿಷೇಕ ಮಾಡುತ್ತಾನೆ. ರಾಜ್ಯಾಭಿಷೇಕದಲ್ಲಿ ಮಾಂಡಲೀಕರು ಸಾಮಂತರು ಮಾತ್ರವಲ್ಲದೇ 56 ದೇಶದ ಮಹಾರಾಜರು ತೀರ್ಥಂಕರ ಮಹಾರಾಜರಿಗೆ ಕಪ್ಪ ಕಾಣಿಕೆ ಸಲ್ಲಿಸುತ್ತಾರೆ. ನ್ಯಾಯ ಸಮ್ಮತವಾಗಿ ಸಾಮ್ರಾಜ್ಯದಲ್ಲಿ ಕೊರತೆ ಕಾಣದಂತೆ ಪ್ರಜಾಪಾಲನೆ ಮಾಡುತ್ತಾರೆ. ಆದರೂ ತೀರ್ಥಂಕರರಿಗೆ ವೈರಾಗ್ಯ ಬರುತ್ತದೆ. ಶಿಕ್ಷೆಗೆ ಮುಂದಾಗುತ್ತಾರೆ. ರಾಜ ಮಹಾರಾಜರ ಸಮ್ಮುಖದಲ್ಲಿ ದಿಕ್ಷಾ ಕಲ್ಯಾಣ ನಡೆಸಲಾಗುತ್ತಿದೆ. ತೀರ್ಥಂಕರರು ವಸ್ತ್ರ ತ್ಯಜಿಸಿ ತಪಶ್ಚರ್ಯರಾದಾಗ ನಡೆಸಿದ ತಪಕಲ್ಯಾಣ ನಡೆಯುವ ದೃಶ್ಯಾವಳಿಗಳನ್ನು ಮಂತ್ರಘೋಷ ವಾದ್ಯ ವೈಭವ ಹಾಗೂ ಸಂಗೀತಮಯ ಪೂಜೆಯೊಂದಿಗೆ ಪ್ರಸ್ತುತಪಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.