ಹುಬ್ಬಳ್ಳಿ: ‘ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮಾಜದವರು ಜಾತಿ, ಧರ್ಮದ ಕಾಲಂನಲ್ಲಿ ಏನು ನಮೂದಿಸಬೇಕು ಎಂದು ಸೆ. 17ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ನಿರ್ಧರಿಸಲಾಗುವುದು’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
‘14 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಭಕ್ತರು, ಮುಖಂಡರು, ಶಿಕ್ಷಣ ತಜ್ಞರ ಜತೆ ಚರ್ಚಿಸಿದ್ದೇವೆ. ಲಿಂಗಾಯತರಲ್ಲಿ ಶೇ 80ರಷ್ಟು ಪಂಚಮಸಾಲಿ ಸಮಾಜದವರು ಇದ್ದಾರೆ. ಹರಿಹರ, ಕೂಡಲಸಂಗಮ, ಜಮಖಂಡಿಯಲ್ಲಿ ಪೀಠಗಳಿವೆ. ಈ ಪೀಠಗಳ ಮಠಾಧೀಶರು, ಪಂಚಮಸಾಲಿ ಸಂಘದವೀ ನಿರ್ಣಯವನ್ನು ಸಮಾಜದವರು ಕೇಳಬೇಕು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಬಸವ ಸಂಸ್ಕೃತಿ ಯಾತ್ರೆ ಸ್ವಾಗತಾರ್ಹ. ಅದರಲ್ಲಿ ಸ್ವಾಮೀಜಿಗಳು ಬಸವಣ್ಣನವರ ವಿಚಾರ, ತತ್ವ, ಸಿದ್ಧಾಂತ ತಿಳಿಸಬೇಕು. ಸಮಾಜವನ್ನು ಒಡೆಯುವ ಹೇಳಿಕೆ ನೀಡಬಾರದು’ ಎಂದು ಹೇಳಿದರು.
‘ವಚನಾನಂದ ಸ್ವಾಮೀಜಿ ಅವರನ್ನು ಪಂಚಮಸಾಲಿ ಪೀಠಕ್ಕೆ ತಂದಿದ್ದು ನಾನು’ ಎಂಬ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸುವಂತೆ ಕೋರಲು ನಮ್ಮ ಮಠಕ್ಕೆ ಬಂದಿದ್ದರು. ಅವರ ಹೇಳಿಕೆಗೆ ಮಹತ್ವ ಕೊಡುವ ಅಗತ್ಯ ಇಲ್ಲ’ ಎಂದರು.
‘ಹುಬ್ಬಳ್ಳಿಯಲ್ಲಿ ಸೆ.19ರಂದು ನಡೆಯುವುದು ವೀರಶೈವ ಲಿಂಗಾಯತ ಏಕತೆ ಸಮಾವೇಶವಲ್ಲ. ಬೇಡ ಜಂಗಮ ಸಮಾವೇಶ. ಪಂಚಮಸಾಲಿ ಸಮಾಜದವರು ಹೋಗಬಾರದು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.