ADVERTISEMENT

ಹುಬ್ಬಳ್ಳಿ: ಪಂಚರಾತ್ರೋತ್ಸವಕ್ಕೆ ಚಾಲನೆ

ರಾಘವೇಂದ್ರಸ್ವಾಮಿಗಳ 351ನೇ ಆರಾಧನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:53 IST
Last Updated 12 ಆಗಸ್ಟ್ 2022, 5:53 IST
ಹುಬ್ಬಳ್ಳಿಯ ಭವಾನಿ ನಗರದ ನಂಜನಗೂಡು ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಅಂಗವಾಗಿ ಗುರುವಾರ ಪ್ರಾಕಾರೋತ್ಸವ ನಡೆಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವೇಣುಗೋಪಾಲಾಚಾರ್‌ ಇತರರು ಇದ್ದಾರೆ
ಹುಬ್ಬಳ್ಳಿಯ ಭವಾನಿ ನಗರದ ನಂಜನಗೂಡು ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಅಂಗವಾಗಿ ಗುರುವಾರ ಪ್ರಾಕಾರೋತ್ಸವ ನಡೆಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವೇಣುಗೋಪಾಲಾಚಾರ್‌ ಇತರರು ಇದ್ದಾರೆ   

ಹುಬ್ಬಳ್ಳಿ: ಇಲ್ಲಿನ ಭವಾನಿ ನಗರದ ನಂಜನಗೂಡು ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಪಂಚರಾತ್ರೋತ್ಸವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ದೊರೆಯಿತು.

ಕಾರ್ಯಕ್ರಮದ ಅಂಗವಾಗಿ ಮಠವನ್ನು ವಿವಿಧ ಹೂಗಳಿಂದ ಸಿಂಗರಿಸಿ, ದೀಪಾಲಂಕಾರ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಬಂದು ಶ್ರೀಗಳ ದರ್ಶನ ಪಡೆದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಗುರುವಾರ ಸಂಜೆ ಪ್ರಾರ್ಥನೋತ್ಸವ, ಧ್ವಜಾರೋಹಣ, ಕಂಕಣಬಂಧನ, ಗೋಪೂಜೆ, ಧನ ಧಾನ್ಯ ಪೂಜೆ, ಲಕ್ಷ್ಮಿ ಪೂಜೆ, ಪ್ರಾಕಾರೋತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳರಾತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ವಿವಿಧ ಭಜನಾ ಮಂಡಳಿಗಳ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ADVERTISEMENT

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದಂಪತಿ ಮಠಕ್ಕೆ ಬಂದು ದರ್ಶನ ಪಡೆದರು. ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಲಾಯಿತು.

ಮಠದ ವ್ಯವಸ್ಥಾಪಕ ವೇಣುಗೋಪಾಲಾಚಾರ್‌ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಅವಕಾಶ ಇರಲಿಲ್ಲ. ಈ ವರ್ಷ ಕೋವಿಡ್‌ ಆತಂಕ ಇಲ್ಲ. ಹೀಗಾಗಿ ವಿಜೃಂಭಣೆಯಿಂದ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಆಗಸ್ಟ್ 12ರಂದು ಪೂರ್ವಾರಾಧನೆ, ಆ.13ರಂದು ಮಧ್ಯಾರಾಧನೆ, ಆ.14ರಂದು ಉತ್ತರಾರಾಧನೆ ಅಂಗವಾಗಿ ಮಹಾರಥೋತ್ಸವ, ಆ.15ರಂದು ಸುಜ್ಞಾನೇಂದ್ರತೀರ್ಥರ ಆರಾಧನೆ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ಪಂಚಾಮೃತ, ಅಷ್ಟೋತ್ತರ ಪಾರಾಯಣ, ಹಸ್ತೋದಕ ಮಹಾಮಂಗಳಾರತಿ, ಭಜನೆ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಮಠದ ಧರ್ಮಾಧಿಕಾರಿ ರಾಘವೇಂದ್ರ ಆಚಾರ್‌, ವಿಚಾರಕರ್ತೃ ರಘೋತ್ತಮರಾವ್, ಪ್ರಧಾನ ಅರ್ಚಕ ಗುರುರಾಜ ಆಚಾರ್‌ ಸಾಮಘ, ರಘುವೀರ ಆಚಾರ್‌, ಬಿಂದು ಮಾಧವ ಪುರೋಹಿತ, ಎ.ಸಿ.ಗೋಪಾಲ, ಗೋವಿಂದ ಜೋಶಿ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.