ADVERTISEMENT

'ನಿರ್ಮಲಾ‌ ಸೀತಾರಾಮನ್ ಹೇಳಿಕೆ ಸತ್ಯಕ್ಕೆ ದೂರ’

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 15:29 IST
Last Updated 31 ಜುಲೈ 2024, 15:29 IST
ಡಾ.ಜಿ.ಪರಮೇಶ್ವರ್‌
ಡಾ.ಜಿ.ಪರಮೇಶ್ವರ್‌   

ಹುಬ್ಬಳ್ಳಿ/ಬಾಗಲಕೋಟೆ: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಉದ್ಯಮಿಗಳು ರಾಜ್ಯದಿಂದ ಹೊರಹೋಗುತ್ತಿದ್ದಾರೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು ಸತ್ಯಕ್ಕೆ ದೂರವಾಗಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಭದ್ರವಾಗಿದೆ. ಉದ್ಯಮಿಗಳು ಹೊರಹೋಗುವುದಾಗಿ ಹೇಳಿಲ್ಲ. ಇಲ್ಲಿ ಹೂಡಿಕೆ ಮಾಡಲು ಯಾರೂ ಹಿಂಜರಿದಿಲ್ಲ. ಅಲ್ಲಲ್ಲಿ ಕೊಲೆ, ಕಳವು ಪ್ರಕರಣಗಳು ನಡೆದಿವೆ. ಹಿಂದಿನ ಬಿಜೆಪಿ ಸರ್ಕಾರದಲ್ಲೂ  ನಡೆದಿದ್ದವು. ಆಗ ಹೋಲಿಸಿದರೆ ಈಗ ಕಡಿಮೆ ಆಗಿವೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿ, ಜೆಡಿಎಸ್‌ನಲ್ಲಿ ಒಡಕು:

ADVERTISEMENT

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ‘ಪಾದಯಾತ್ರೆಗೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್ ನಡುವೆ ಒಡಕು ಉಂಟಾಗಿದೆ. ಬಿಜೆಪಿ ಜೊತೆಗಿದ್ದ ಜೆಡಿಎಸ್‌ ನಮ್ಮೊಂದಿಗೆ ಬಂದು, ಪುನಃ ಬಿಜೆಪಿ ಕಡೆ ಹೋಗಿದೆ. ಎರಡೂ ಪಕ್ಷಗಳ ಹೊಂದಾಣಿಕೆ ಎಷ್ಟು ದಿನ ಇರಲಿದೆ ಎಂಬುದನ್ನು ಕಾದು ನೋಡಬೇಕು’ ಎಂದರು.

‘ರಾಜ್ಯಪಾಲರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಅದನ್ನು ಮೀರಿದರೆ ಅನುಮಾನ ಶುರುವಾಗುತ್ತದೆ. ಮುಖ್ಯಮಂತ್ರಿ ಅವರಿಗೆ ರಾಜ್ಯಪಾಲರು ಷೋಕಾಸ್ ನೋಟಿಸ್ ನೀಡಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ’ ಎಂದರು.

‘ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ’ ಎಂದು ಸಚಿವ ದಿನೇಶ ಗುಂಡೂರಾವ್ ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.