ADVERTISEMENT

‘ಪ್ರಪಂಚ’ದಲ್ಲಿ ಪುಟ್ಟಜ್ಜನ ಲೋಕದ ಸಾಕ್ಷಾತ್ಕಾರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 9:31 IST
Last Updated 18 ಮಾರ್ಚ್ 2020, 9:31 IST
ಪಾಟೀಲ ಪುಟ್ಟಪ್ಪ
ಪಾಟೀಲ ಪುಟ್ಟಪ್ಪ   

ಕನ್ನಡ ಧ್ವಜದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದ ಸಮಯವದು. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಕರ್ನಾಟಕಕ್ಕೆ ಪ್ರತ್ಯೇಕ ಧ್ವಜದ ಬೇಡಿಕೆಗೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಿದ್ದರು. ಈ ಬೆಳವಣಿಗೆಯ ಹಿಂದೆ ಇದ್ದ ಪ್ರಮುಖ ದನಿ ಕನ್ನಡದ ಕಟ್ಟಾಳು, ಪತ್ರಿಕೋದ್ಯಮದ ಭೀಷ್ಮ ಪಾಟೀಲ ಪುಟ್ಟಪ್ಪ.

ಕನ್ನಡದ ಅಸ್ಮಿತೆಯಾದರೂ ಅಧಿಕೃತ ಅಸ್ತಿತ್ವವಿಲ್ಲದ ನಾಡ ಧ್ವಜವನ್ನು ವಿನ್ಯಾಸಗೊಳಿಸಿ, ಅದಕ್ಕೆ ಕಾನೂನಿನ ಮಾನ್ಯತೆ ನೀಡಬೇಕು ಎಂದು ಪುಟ್ಟಜ್ಜ ಸರ್ಕಾರಕ್ಕೆ ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ, ಸರ್ಕಾರ ಆ ಕುರಿತು ವರದಿ ನೀಡುವಂತೆ ಸಮಿತಿ ರಚಿಸಿತ್ತು. ಈ ವಿಷಯ ಗೊತ್ತಾಗುತ್ತಲೇ, ಪುಟ್ಟಜ್ಜನ ಪ್ರತಿಕ್ರಿಯೆ ಪಡೆಯಲು ಕೆಲ ಮಿತ್ರರೊಂದಿಗೆ ಮೊದಲ ಸಲ ಪಾಪು ಅವರ ‘ಪ್ರಪಂಚ’ಕ್ಕೆ (ಮನೆಗೆ) ದೌಡಾಯಿಸಿದ್ದೆ.

ಇದಕ್ಕೂ ಮುಂಚೆ ಅವರನ್ನು ನೋಡಿದ್ದರೂ, ಆತ್ಮೀಯವಾಗಿ ಅವರೊಂದಿಗೆ ಸಮಯ ಕಳೆಯುವ ಅವಕಾಶ ಸಿಕ್ಕಿರಲಿಲ್ಲ. ಅವರ ಮನೆಯಲ್ಲೇ ಭೇಟಿಯಾಗುವ ಕಾಲ ಕೂಡಿ ಬಂದಿತ್ತು. ಹಾಗಾಗಿ, ನನ್ನೊಳಗಿನ ಎಕ್ಸೈಟ್‌ಮೆಂಟ್ ಹೆಚ್ಚಾಗಿತ್ತು. ಪಾಪು ಬಗ್ಗೆ ಓದಿ, ಕೇಳಿ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದ ‍ಅವರ ವ್ಯಕ್ತಿತ್ವದ ಪ್ರತಿಮೆ ವಿಚಾರಗಳೆಲ್ಲವೂ, ಹೋಗುವಾಗ ತಲೆಯಲ್ಲಿ ಗಿರಕಿ ಹೊಡೆಯಲಾರಂಭಿಸಿದವು.

ADVERTISEMENT

ಅಜ್ಜನ ‘ಪ್ರಪಂಚ’ದ ಅಂಗಳದಲ್ಲಿದ್ದ ಇಂದುಮತಿ ಅಜ್ಜಿಯ ಸಮಾಧಿ ಹಾಗೂ ಪುತ್ಥಳಿ ಅವರ ಜೀವನ ಹಾಗೂ ಸಂಬಂಧಗಳ ಪ್ರೀತಿಯ ದ್ಯೋತಕವಾಗಿಕಾಣುತ್ತಿದ್ದವು. ಮನೆಯೊಳಗಿನ ಗೋಡೆಗಳು ಕಾಣದಂತೆ ಜೋಡಿಸಿಟ್ಟಿದ್ದ ಪುಸ್ತಕಗಳ ಸಾಲು, ಕಣ್ಣು ಹಾಯಿಸಿದಲ್ಲೆಲ್ಲಾಕಾಣುತ್ತಿದ್ದ ಪ್ರಶಸ್ತಿ, ಬಿರುದು, ಸನ್ಮಾನ ಸ್ಮರಣಿಕೆಗಳು ಅವರ ವ್ಯಕ್ತಿತ್ವವನ್ನು ಸಾರುತ್ತಿದ್ದವು. ಅಲ್ಲಲ್ಲಿ ನೇತಾಡುತ್ತಿದ್ದ ಮಹನೀಯರ ಜತೆಗಿನ ಅಜ್ಜನ ಫೋಟೊಗಳು ಕಾಲಘಟ್ಟಗಳ ಕಥೆ ಹೇಳುತ್ತಿದ್ದವು.

ಕೋಣೆಗಳನ್ನು ದಿಟ್ಟಿಸುತ್ತಲೇ ಅಜ್ಜನ ಕೋಣೆ ಒಕ್ಕಾಗ, ‘ಹೇ ಬರ್ರಿ... ಹೆಂಗದಿರಿ’ ಎಂದು ತೀರಾ ಪರಿಚಿತರು ಎಂಬಂತೆ ಪಕ್ಕಕ್ಕೆ ಕರೆದು, ಹೆಗಲ ಮೇಲೆ ಕೈ ಹಾಕಿ ನೇವರಿಸಿ ಮಾತನಾಡಿಸಿದರು. ಮನೆಯೊಳಗಿದ್ದವರಿಗೆ ಚಹಾ ತರುವಂತೆ ಸೂಚಿಸಿದರು. ಆಗ ನಾವೆಲ್ಲಾ, ‘ನಿಮ್ಮಿಚ್ಛೆಯಂತೆ ಕನ್ನಡ ಧ್ವಜ ಸಾಕಾರವಾಗುವ ಕಾಲ ಹತ್ತಿರ ಬಂದಿದೆ. ಸರ್ಕಾರ ಅದಕ್ಕಾಗಿ ಸಮಿತಿ ರಚನೆ ಮಾಡಿದೆ’ ಎಂದು ಮಾತಿಗೆ ಎಳೆದೆವು.

ಮಾಧ್ಯಮ ಮಂದಿಯ ಬರುವಿಕೆಯನ್ನು ಅಜ್ಜ ಮೊದಲೇ ನಿರೀಕ್ಷಿಸಿದ್ದರು ಅನ್ನಿಸುತ್ತೆ. ‘ಕನ್ನಡ ಧ್ವಜಕ್ಕಾಗಿ ನಮ್ಮ ಆಗ್ರಹ ಇಂದು ನೆನ್ನೆಯದಲ್ಲ. 1965ರಿಂದ ಆರಂಭಗೊಂಡು, ಗೋಕಾಕಚಳವಳಿಯಾದಿಯಾಗಿ ಇಂದಿನವರೆಗೂ ನಡೆದುಕೊಂಡು ಬಂದಿದೆ’ ಎಂದು ಧ್ವಜಕ್ಕಾಗಿ ರಾಜ್ಯದಲ್ಲಿ ನಡೆದ ಹಕ್ಕೊತ್ತಾಯ, ಆಗ್ರಹ ಹಾಗೂ ಆ ಕುರಿತ ಬೆಳವಣಿಗೆಗಳನ್ನು ದಿನಾಂಕ ಸಮೇತ ಬಿಚ್ಚಿಟ್ಟರು. ‘ಅರವತ್ತಾದರೆ ಅರಳು ಮರಳು’ ಎಂಬ ಮಾತನ್ನು ಅಣಕಿಸುವಂತಿತ್ತು, ಶತಕದಂಚಿನಲ್ಲಿದ್ದ ಅಜ್ಜನ ಅಗಾಧ ನೆನಪಿನ ಶಕ್ತಿ.

ಒಂದೊಂದು ಪ್ರಶ್ನೆಗೂ ವಿವರಣಾತ್ಮಕವಾಗಿ ಅದರ ಹಿಂದು–ಮುಂದುಗಳನ್ನು ನಮ್ಮ ಮುಂದೆ ಅರಹುತ್ತಿದ್ದ ಅಜ್ಜನ ಜ್ಞಾನ ಲಹರಿಯನ್ನು ನಾವು ಬೆರಗುಗಣ್ಣುಗಳಿಂದ ಆಲಿಸುತ್ತಿದ್ದೆವು. ಪುಸ್ತಕವೇ ಮಾತನಾಡುತ್ತಿರುವಂತೆಅವರ ಮಾತುಗಳು ಭಾಸವಾಗುತ್ತಿದ್ದವು. ಒಂದೊಂದು ಮಾಹಿತಿಯೂ ಅಷ್ಟೊಂದು ನಿಖರ. ಐದು ನಿಮಿಷದಲ್ಲಿ ಅಜ್ಜನ ಪ್ರತಿಕ್ರಿಯೆ ಪಡೆದು ಬರಬಹುದು ಅಂದುಕೊಂಡು ಹೋದವನಿಗೆ, ಹೋಗಿ ಒಂದು ತಾಸಾಗಿರುವುದು ಗೊತ್ತೇ ಆಗಲಿಲ್ಲ. ಅದುವರೆಗೆ ಕೇಳಿ, ಓದಿಯಷ್ಟೇ ನೋಡಿದ್ದ ಅಜ್ಜನ ಜಗತ್ತಿನ ಸಾಕ್ಷಾತ್ ದರ್ಶನ ಅವರ ‘ಪ್ರಪಂಚ’ಕ್ಕೆ ಹೋದಾಗ ಸಾಕ್ಷಾತ್ಕಾರವಾಯಿತು. ಮರಳುವಾಗ ಅಜ್ಜನ ಬಗ್ಗೆ ನನ್ನಲ್ಲಿದ್ದ ಅಮೂರ್ತ ಸ್ವರೂಪಕ್ಕೆ ಮೂರ್ತ ರೂಪ ಸಿಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.