ADVERTISEMENT

ಧಾರವಾಡ | ಕೃಷಿ ಕಾಯ್ದೆ ವಿರುದ್ಧ ಜನಜಾಗೃತಿ ಜಾಥಾ: ಹಿರೇಮಠ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 17:06 IST
Last Updated 20 ಜನವರಿ 2022, 17:06 IST
ಎಸ್‌.ಆರ್‌. ಹಿರೇಮಠ
ಎಸ್‌.ಆರ್‌. ಹಿರೇಮಠ   

ಹುಬ್ಬಳ್ಳಿ: ‘ರಾಜ್ಯ ಸರ್ಕಾರ ಕಳೆದ ವರ್ಷ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ, ಬಜೆಟ್ ಅಧಿವೇಶನ ಆರಂಭಕ್ಕೂ ಒಂದು ವಾರ ಮುಂಚೆ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಜನಜಾಗೃತಿ ಜಾಥಾ ನಡೆಸಲಾಗುವುದು’ ಎಂದು ಜನಾಂದೋಲನಗಳ ಮಹಾಮೈತ್ರಿಯ (ಜೆಎಂಎಂ) ಎಸ್‌.ಆರ್. ಹಿರೇಮಠ ಹೇಳಿದರು.

‘ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಜಾನುವಾರು ಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಗಳು ರೈತರ ಪಾಲಿಗೆ ಕರಾಳವಾಗಿವೆ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಈ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಅದಕ್ಕಾಗಿ, ಜನಜಾಗೃತಿ ಜಾಥಾ ನಡೆಸಿ ಜನಾಭಿಪ್ರಾಯ ರೂಪಿಸಲಾಗುವುದು. ಅಧಿವೇಶನ ದಿನಾಂಕ ಪ್ರಕಟವಾದ ಬಳಿಕ ಜಾಥಾ ದಿನವನ್ನು ನಿಗದಿಪಡಿಸಲಾಗುವುದು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬೀದರ್‌ ಜಿಲ್ಲೆಯ ಬಸವಕಲ್ಯಾಣ ಹಾಗೂ ಮಹದೇಶ್ವರ ಬೆಟ್ಟದಿಂದ ಏಕಕಾಲದಲ್ಲಿ ಆರಂಭಗೊಳ್ಳಲಿದೆ. ಸಮಾಜ ಸುಧಾರಕರ ಸ್ತಬ್ಧಚಿತ್ರಗಳನ್ನೊಳಗೊಂಡ ವಾಹನದಲ್ಲಿ ಜಾಥಾ ನಡೆಯಲಿದೆ. ಮಾರ್ಗದುದ್ದಕ್ಕೂ ಸ್ಥಳೀಯರ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬೆಂಗಳೂರು ತಲುಪಿ, ಧರಣಿ ನಡೆಸಲಾಗುವುದು. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ, ಮುಖ್ಯಮಂತ್ರಿ ನಿವಾಸದ ಎದುರು ಮೌನ ಪ್ರತಿಭಟನೆ ನಡೆಸಲಾಗುವುದು’ ಎಂದರು.

ADVERTISEMENT

‘ಜಾಥಾ ನಡೆಸಲು ಸರ್ಕಾರದಿಂದ ಅನುಮತಿ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡೇ ಜಾಥಾ ನಡೆಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ದೆಹಲಿ, ಹರಿದ್ವಾರ ಸೇರಿದಂತೆ ವಿವಿಧೆಡೆ ಮುಸ್ಲಿಮರ ಹತ್ಯೆಗೆ ಹಾಗೂ ಆಯುಧಗಳ ಬಳಕೆಗೆ ಕರೆ ಕೊಡಲಾಗುತ್ತಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಇಂತಹ ದ್ವೇಷ ಭಾಷಣಗಳ ವಿರುದ್ಧ ಸ್ಥಳೀಯ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳದೆ, ಸುಪ್ರೀಂಕೋರ್ಟ್ ನಿರ್ದೇಶನದವರೆಗೆ ಕಾಯಬೇಕಾಗಿದ್ದು ದುರ್ದೈವ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಆಳುವ ಪಕ್ಷಗಳ ಕುಮ್ಮಕ್ಕಿನ ಜೊತೆಗೆ, ಉದ್ದೇಶಪೂರ್ವಕವಾಗಿಯೇ ಇಂತಹ ಕರೆಗಳನ್ನು ನೀಡಲಾಗುತ್ತಿದೆ. ದ್ವೇಷ ಭಾಷಣ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಯಾರೂ ಈ ರೀತಿ ನಾಲಿಗೆ ಹರಿಬಿಡದಂತೆ ಸಂದೇಶ ನೀಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.