ADVERTISEMENT

‘ಮಾಲ್‌ ಸಂಸ್ಕೃತಿ’ಗೆ ಮಾರುಹೋದ ಜನ

ಒಂದೇ ಸೂರಿನಡಿ ಎಲ್ಲವೂ ಲಭ್ಯ; ಯುವಜನ, ಮಕ್ಕಳಿಗೆ ಅಚ್ಚುಮೆಚ್ಚು

ಗೌರಮ್ಮ ಕಟ್ಟಿಮನಿ
Published 8 ಜನವರಿ 2024, 6:03 IST
Last Updated 8 ಜನವರಿ 2024, 6:03 IST
ಗೋಕುಲ ರಸ್ತೆಯಲ್ಲಿರುವ ಅರ್ಬನ್‌ ಓಯಾಸಿಸ್‌ ಮಾಲ್‌
ಪ್ರಜಾವಾಣಿ ಚಿತ್ರ: ಗುರು ಹಬೀಬ
ಗೋಕುಲ ರಸ್ತೆಯಲ್ಲಿರುವ ಅರ್ಬನ್‌ ಓಯಾಸಿಸ್‌ ಮಾಲ್‌ ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಸಾಂಸ್ಕೃತಿಕ ನಗರಿ ಧಾರವಾಡಕ್ಕೆ ಹಲವು ಹೆಸರುಗಳಿವೆ. ಹುಬ್ಬಳ್ಳಿಗೆ ಛೋಟಾ ಬಾಂಬ ಎಂಬ ಹೆಸರು ಉಂಟು. ಎರಡೂ ನಗರಗಳು ಆಧುನಿಕ ಸ್ಪರ್ಶದಿಂದ ಹೊಸ ಸ್ವರೂಪ ಪಡೆಯುತ್ತಿವೆ. ಸ್ಮಾರ್ಟ್‌ ಸಿಟಿ ಯೋಜನೆಯಿಂದ ನಗರ ಸುಂದರಗೊಳ್ಳುತ್ತಿದ್ದರೆ, ‘ಮಾಲ್‌ ಸಂಸ್ಕೃತಿ’ ಕೂಡ ಜನರನ್ನು ಆಕರ್ಷಿಸುತ್ತಿದೆ.

ಹುಬ್ಬಳ್ಳಿ–ಧಾರವಾಡದ ವಿವಿಧೆಡೆ ಇರುವ ಮಾಲ್‌ಗಳು ವರ್ಷಗಳು ಕಳೆದಂತೆ ಆಧುನಿಕ ಸ್ವರೂಪ ಪಡೆಯುತ್ತಿದ್ದು, ಹಿರಿಯರು ಮತ್ತು ಕಿರಿಯರು ಸೇರಿ ಎಲ್ಲರನ್ನೂ ಸೆಳೆಯುತ್ತಿದೆ. ಎಲ್ಲವೂ ಒಂದೇ ಸೂರಿನಡಿ ಖರೀದಿಸುವುದು ಮತ್ತು ಸಿನಿಮಾಗಳನ್ನು ವೀಕ್ಷಿಸುವುದು ಜನರಿಗೆ ಖುಷಿ ಕೊಡುತ್ತಿದೆ.

ಒಂದು ಕುಟುಂಬ ಹೊರಗಡೆ ಹೋದಾಗ ಬಯಸುವ ಎಲ್ಲ ರೀತಿಯ ಶಾಪಿಂಗ್‌, ಕಿರಾಣಿ ಸಾಮಗ್ರಿ, ಸಿನಿಮಾ ನೋಡಲು ಮಲ್ಟಿಫ್ಲೆಕ್ಸ್‌, ತರಹೇವಾರಿ ತಿಂಡಿ, ಹೆಚ್ಚಾಗಿ ಈಗೀನ ಮಕ್ಕಳು ಬಯಸುವ ಪಿಜ್ಜಾ, ಬರ್ಗರ್‌, ಪಾಪ್‌ ಕಾರ್ನ್‌, ಚಿಕ್ಕ ಮಕ್ಕಳು ಆಟವಾಡಲು ವಿವಿಧ ಆಟಗಳು, ಆನ್‌ಲೈನ್‌ ಗೇಮ್ಸ್‌ ಹಾಗೂ ಲಿಫ್ಟ್‌, ಎಸ್ಕಲಟರ್‌...ಹೀಗೆ ಎಲ್ಲವನ್ನೂ ಮಾಲ್‌ ಒಳಗೊಗೊಂಡಿದೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಎಲ್ಲಿ ನೋಡಿದರೂ ಬೃಹತ್‌ ಕಟ್ಟಡಗಳು ತಲೆ ಎತ್ತುತ್ತಿವೆ. ಜೊತೆಗೆ ಹೆಸರಿನೊಟ್ಟಿಗೆ ʼಮಾಲ್‌ʼ ಎಂಬ ಪದವನ್ನು ಸೇರಿಸಿಕೊಂಡಿವೆ. ಗೋಕುಲ ರಸ್ತೆಯಲ್ಲಿರುವ ಅರ್ಬನ್‌ ಓಯಾಸಿಸ್‌ ಮಾಲ್‌, ಅಪ್ಸರಾ ಟಾಕೀಜ್‌ ಬಳಿ ಇರುವ ಯು ಮಾಲ್‌ ಹಾಗೂ ಲಕ್ಷ್ಮಿ ಮಾಲ್‌ಗಳಲ್ಲಿ ವಾರಾಂತ್ಯಗಳಲ್ಲಿ ಹೆಚ್ಚಿನ ಜನರನ್ನು ಕಾಣಬಹುದು.

‘ಮಾಲ್‌ ಎಂಬುದು ಮೇಲ್ವರ್ಗದವರಿಗೆ ಮಾತ್ರ ಸೀಮಿತ ಎಂಬ ಭಾವ ಹಲವರದ್ದು. ಆದರೆ, ಎಲ್ಲ ವರ್ಗದವರೂ ತಮ್ಮ ಆರ್ಥಿಕತೆಗೆ ತಕ್ಕಂತೆ ಶಾಪಿಂಗ್‌ ಮಾಡಲು ಅನುಕೂಲವಾಗುವಂತ ಮಳಿಗೆಗಳೂ ಇಲ್ಲಿವೆ. ಗುಣಮಟ್ಟಕ್ಕೆ ತಕ್ಕಂತೆ ದರ ಇರುತ್ತದೆ. ಜನ ತಮಗೆ ಇಷ್ಟವಾದ್ದದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗಾಗಿ ಎಲ್ಲ ವರ್ಗದವರೂ ಇತ್ತೀಚಿನ ದಿನಗಳಲ್ಲಿ ಮಾಲ್‌ಗಳತ್ತ ತೆರಳುತ್ತಿದ್ದಾರೆ. ಹಾಗಂತ ಸ್ಥಳೀಯ ಮಾರುಕಟ್ಟೆಗೆ ಹೋಗುವ ಜನರ ಸಂಖ್ಯೆ ಕಡಿಮೆಯಾಗಿಲ್ಲ’ ಎಂದು ಮಾಲ್‌ನಲ್ಲಿ ಮಳಿಗೆ ಹೊಂದಿರುವ ಕಿರಣ್ ತಿಳಿಸಿದರು.

‘ನಗರದ ಗೋಕುಲ ರಸ್ತೆಯಲ್ಲಿರುವ ಅರ್ಬನ್‌ ಓಯಾಸಿಸ್‌ ಮಾಲ್‌ನಲ್ಲಿ 55 ಮಳಿಗೆಗಳಿದ್ದು, 5 ಮಹಡಿಗಳನ್ನು ಹೊಂದಿದೆ. ಕಿರಾಣಿ ಸಾಮಗ್ರಿ ಸೇರಿದಂತೆ ಎಲ್ಲ ರೀತಿಯ ಶಾಪಿಂಗ್‌, ಫುಡ್‌ ಕೋರ್ಟ್‌, ಮಕ್ಕಳಿಗೆ ಮನರಂಜನೆ ನೀಡುವ ಆಟಗಳು ಸೇರಿ ಎಲ್ಲವೂ ಇಲ್ಲಿ ಲಭ್ಯ. ಲಿಫ್ಟ್, ಎಸ್ಕಲೇಟರ್‌ ಸೌಲಭ್ಯವೂ ಇಲ್ಲಿದೆ’ ಎಂದು ಅರ್ಬನ್‌ ಓಯಾಸಿಸ್‌ ಮಾಲ್‌ನ ವ್ಯವಸ್ಥಾಪಕ ರಮೇಶ ಇಂದೂರು ತಿಳಿಸಿದರು.

‘400 ಕಾರು ಹಾಗೂ 300 ದ್ವಿಚಕ್ರ ವಾಹನ ನಿಲುಗಡೆಗೆ ಪಾರ್ಕಿಂಗ್‌ ವ್ಯವಸ್ಥೆ ಇದೆ. ನಿತ್ಯ ಮೂರುವರೆ ಸಾವಿರ ಜನ ಹಾಗೂ ವಾರಾಂತ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಜನ ಬರುತ್ತಾರೆ’ ಎಂದರು.

‘ಕೊಪ್ಪಿಕರ್‌ ರಸ್ತೆಯಲ್ಲಿರುವ ಯು ಮಾಲ್‌ನಲ್ಲಿ 50 ಕ್ಕೂ ಹೆಚ್ಚು ದೊಡ್ಡ ಮಳಿಗೆಗಳಿವೆ. ವಿವಿಧ ಬಟ್ಟೆ ಮಳಿಗೆ, ಫುಡ್‌ ಕೋರ್ಟ್‌, ಗೇಮಿಂಗ್‌ ಝೋನ್‌ ಎಲ್ಲವೂ ಎಲ್ಲರನ್ನೂ ಆಕರ್ಷಿಸುತ್ತಿವೆ. ಲಿಫ್ಟ್‌, ಎಸ್ಕಲೆಟರ್‌, ಶೌಚಾಲಯ ವ್ಯವಸ್ಥೆ ಇದೆ. 300ಕ್ಕೂ ಹೆಚ್ಚು ಕಾರು ಹಾಗೂ 200ಕ್ಕೂ ಹೆಚ್ಚು ದ್ವಿಚಕ್ರ ವಾಹನ ನಿಲುಗಡೆಯ ಪಾರ್ಕಿಂಗ್‌ ವ್ಯವಸ್ಥೆ ಇದೆ’ ಎಂದು ಯು ಮಾಲ್‌ ಮಾಲೀಕ ಶ್ಯಾಮ್‌ಆಜ್‌ ಉಮಚಗಿ ಹೇಳಿದರು.

ಆಯ್ಕೆಗೆ ಮುಕ್ತ ಅವಕಾಶ:

‘ಸ್ಥಳೀಯ ಮಾರುಕಟ್ಟೆಗೂ ಮಾಲ್‌ಗಳಿಗೂ ದರದಲ್ಲಿ ದೊಡ್ಡ ವ್ಯತ್ಯಾಸ ಇಲ್ಲ, ಹತ್ತಿಪ್ಪತ್ತು ಹೆಚ್ಚು ಕಮ್ಮಿ ಆಗುತ್ತದೆ. ಆದರೆ ಇಲ್ಲಿ ನಮ್ಮ ಆಯ್ಕೆಗಳಿಗೆ ಮುಕ್ತ ಅವಕಾಶಗಳಿದೆ. ಗುಣಮಟ್ಟವೂ ಚೆನ್ನಾಗಿರುತ್ತದೆ. ಬೇಕಾದರೆ ತಗೊಬಹುದು, ಇಲ್ಲದಿದ್ರೆ ಬಿಡಬಹುದು. ಎಲ್ಲ ವರ್ಗದವರೂ ಬರಬಹುದು. ವಾತಾವರಣವೂ ಶಾಂತವಾಗಿರುತ್ತದೆ. ಮಾರುಕಟ್ಟೆಯಲ್ಲಿ ವಾಹನಗಳ ಸದ್ದು ಕಿರಿಕಿರಿ ಉಂಟು ಮಾಡುತ್ತದೆ. ಸ್ಥಳೀಯ ಮಾರುಕಟ್ಟೆಗಿಂತ ಮಾಲ್‌ ಹೆಚ್ಚು ಉತ್ತಮ ಎನಿಸುತ್ತದೆ’ ಎಂದು ಹುಬ್ಬಳ್ಳಿಯ ನಿವಾಸಿ ಸಚಿನಾ ದೇಸಾಯಿ ತಿಳಿಸಿದರು.

‘ನಾವೆಲ್ಲಾ ಹಳೆ ಕಾಲದವರು, ಮಕ್ಕಳು ಸಣ್ಣವರಿದ್ದಾಗ ಮಾರ್ಕೆಟ್‌ನಲ್ಲಿ ಬಟ್ಟೆ ಖರೀದಿಸುತ್ತಿದ್ದೆವು. ಆದರೆ, ಈಗ ಮಾಲ್‌ಗೆ ಬಂದರೆ, ಇನ್ನೂ ಹೆಚ್ಚು ಖುಷಿಯಾಗುತ್ತದೆ. ಅತ್ಯಾಧುನಿಕ ಸೌಲಭ್ಯಗಳು, ಮಕ್ಕಳಿಗೂ ಸೇರಿ ಎಲ್ಲರೂ ಇಷ್ಟವಾಗುವುದನ್ನು ಖರೀದಿಸಬಹುದು. ಸಿನಿಮಾ ನೋಡಬಹುದು. ಭರ್ಜರಿ ಖರೀದಿಯೂ ಮಾಡಬಹುದು’ ಎಂದು ರಾಯನಾಳದ ನಿವಾಸಿ ಸುನಂದಾ ಶೆಟ್ಟರ್ ತಿಳಿಸಿದರು.

ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿರುವ ಯು ಮಾಲ್‌ ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಅಪ್ಸರಾ ಟಾಕೀಜ್‌ ಬಳಿಯಿರುವ ಲಕ್ಷ್ಮಿ ಮಾಲ್‌ ಪ್ರಜಾವಾಣಿ ಚಿತ್ರ: ಗುರು ಹಬೀಬ
ಕೋವಿಡ್‌ ನಂತರ ಮಾರುಕಟ್ಟೆ ಸುಧಾರಿಸುತ್ತಿದೆ. ಯು ಮಾಲ್‌ನಲ್ಲೂ ಮಲ್ಟಿಫ್ಲೆಕ್ಸ್‌ ಸೌಲಭ್ಯ ಒದಗಿಸುವ ಯೋಜನೆ ಇದೆ. ಶೀಘ್ರದಲ್ಲಿ ಸ್ಕ್ರೀನ್‌ಗಳು ಬರಲಿವೆ
ಶ್ಯಾಮ್‌ಆಜ್‌ ಉಮಚಗಿ ಮಾಲೀಕ ಯು ಮಾಲ್‌
ಅರ್ಬನ್‌ ಓಯಾಸಿಸ್‌ ಮಾಲ್‌ನಲ್ಲಿ ಬೃಹತ್‌ ಹೋಟೆಲ್‌ ಆರಂಭವಾಗಲಿದೆ. ಕಟ್ಟಡ ಕಾಮಗಾರಿ ಮುಗಿದಿದ್ದು ಏಪ್ರಿಲ್‌ನಲ್ಲಿ ಜನರಿಗೆ ಸೇವೆ ನೀಡಲಿದೆ
ರಮೇಶ ಇಂದೂರು ಮ್ಯಾನೇಜರ್‌ ಅರ್ಬನ್‌ ಓಯಾಸಿಸ್‌ ಮಾಲ್‌
ಲಕ್ಷ್ಮಿ ಮಾಲ್‌ ನವೀಕರಣ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಇನ್ನು ಎರಡ್ಮೂರು ತಿಂಗಳಲ್ಲಿ ಆಧುನಿಕ ಸೌಕರ್ಯ ಒಳಗೊಂಡ ಮಾಲ್‌ ಜನರಿಗೆ ಲಭ್ಯವಾಗಲಿದೆ
ಈರಣ್ಣ ಪುರತಗೇರಿ ಮ್ಯಾನೇಜರ್‌ ಲಕ್ಷ್ಮಿ ಮಾಲ್‌
ನಿತ್ಯ ವ್ಯಾಪಾರ ಸಾಧಾರಣವಾಗಿರುತ್ತದೆ. ವಾರಾಂತ್ಯದಲ್ಲಿ ಸಿನಿಮಾ ನೋಡಲು ಶಾಂಪಿಂಗ್‌ಗೆ ಬರುವ ಜನ ಹೆಚ್ಚು. ಆಗ ಉತ್ತಮ ವ್ಯಾಪಾರವಾಗುತ್ತದೆ
ಮಂಜುನಾಥ ಹಿರೇಮಠ ವ್ಯಾಪಾರಿ ಫುಡ್‌ಕೋರ್ಟ್‌ ಅರ್ಬನ್‌ ಓಯಾಸಿಸ್‌ ಮಾಲ್‌

ಮತ್ತೊಂದು ಮಾಲ್‌ ಆರಂಭ ಶೀಘ್ರ ಅಪ್ಸರಾ ಟಾಕೀಜ್‌ ಬಳಿಯಿರುವ ಲಕ್ಷ್ಮಿ ಮಾಲ್‌ ಸದ್ಯ ಸಪ್ನಾ ಬುಕ್‌ ಹೌಸ್‌ ಡೊಮಿನೊಸ್‌ ಎನ್‌.ಪಿ.ಜೆ.ಲಕ್ಕಿಸ್ಟೋನ್‌ ಹಾಗೂ ಎರಡು ಬ್ಯಾಂಕ್ವೆಟ್‌ ಹಾಲ್‌ ಹೊಂದಿದ್ದು ಕಟ್ಟಡ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಕಿರಾಣಿ ಸಾಮಗ್ರಿ ಶಾಪಿಂಗ್‌ ಮಳಿಗೆಗಳು ರೆಸ್ಟೊರೆಂಟ್‌ ಮಕ್ಕಳ ಆಟಿಕೆಗಳು ಫುಡ್‌ ಕೋರ್ಟ್‌ ಆರಂಭವಾಗಲಿದೆ. ಪ್ಯಾಸೆಂಜರ್‌ ಲಿಫ್ಟ್‌ ಎಸ್ಕಲೆಟರ್‌ ಸೌಲಭ್ಯ ಇರಲಿದೆ. ನಿತ್ಯ ಸಪ್ನಾಗೆ ಸಾವಿರ ಜನ ಹಾಗೂ ವಾರಾಂತ್ಯದಲ್ಲಿ 1500ಕ್ಕೂ ಹೆಚ್ಚು ಜನ ಹಾಗೂ ಪಿವಿಆರ್‌ಗೆ 5 ಸಾವಿರಕ್ಕೂ ಹೆಚ್ಚು ಜನ ಬರುತ್ತಾರೆ. 300 ಕಾರು ನಿಲ್ಲುವ ಸಾಮರ್ಥ್ಯದ ಪಾರ್ಕಿಂಗ್‌ ವ್ಯವಸ್ಥೆ ಇದೆ ಎಂದು ಲಕ್ಷ್ಮಿ ಮಾಲ್‌ ವ್ಯವಸ್ಥಾಪಕ ಈರಣ್ಣ ಪುರತಗೇರಿ ಮಾಹಿತಿ ನೀಡಿದರು. ಮೊದಲು ಲಕ್ಷ್ಮಿ ಶಕ್ತಿ ಹಾಗೂ ಲಕ್ಷ್ಮಿಮಾತಾ ಸಿನಿಮಾ ಟಾಕೀಸ್‌ ಇದ್ದ ಸ್ಥಳದಲ್ಲಿ 2013ರಲ್ಲಿ ಕಾಶೀನಾಥ ಆರ್‌ ಚಾಟ್ನಿ ಆ್ಯಂಡ್‌ ಬ್ರದರ್ಸ್‌ ಲಕ್ಷ್ಮಿ ಮಾಲ್‌ ಆರಂಭಿಸಿದರು ಎಂದು ಅವರು ಹೇಳಿದರು.

ಮಾಲ್‌ಗಳಲ್ಲಿ ಮಕ್ಕಳು ಸುರಕ್ಷತೆ ಮಾರ್ಕೆಟ್‌ಗೆ ಹೋದರೆ ಮಕ್ಕಳ ಕೈ ಹಿಡಿದುಕೊಂಡೆ ಇರಬೇಕು. ಇಲ್ಲದಿದ್ದರೆ ಮಕ್ಕಳು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು. ವಾಹನಗಳ ಸದ್ದು ಕಿರಿದಾದ ರಸ್ತೆಗಳು ಕಿರಿಕಿರಿ ಉಂಟು ಮಾಡುತ್ತವೆ. ಮಕ್ಕಳಿಗೂ ಹಿಂಸೆ ಅನಿಸುತ್ತದೆ. ಮಾಲ್‌ಗೆ ಬಂದರೆ ಮಕ್ಕಳನ್ನು ಬಿಟ್ಟು ಆರಾಮವಾಗಿ ಶಾಪಿಂಗ್‌ ಮಾಡಬಹುದು. ಮಕ್ಕಳು ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳುತ್ತಾರೆ. ಗಂಟೆಗಟ್ಟಲೆ ಆದರೂ ಮಕ್ಕಳು ಸುರಕ್ಷಿತವಾಗಿ ಮಾಲ್‌ ಆವರಣದಲ್ಲೆ ಆಟವಾಡಿಕೊಂಡು ಇರುತ್ತಾರೆ ಆದ್ದರಿಂದ ಮಾಲ್‌ಗಳೆ ಹೆಚ್ಚು ಸೂಕ್ತ ಎನ್ನುತ್ತಾರೆ ಯು ಮಾಲ್‌ಗೆ ಬಂದಿದ್ದ ಗ್ರಾಹಕಿ ಅನಿತಾ.

ಯುವಜನರ ಆಕರ್ಷಣೆ ಮಕ್ಕಳು ಯುವಜನತೆ ಇಂದಿನ ದಿನಗಳಲ್ಲಿ ಮಾಲ್‌ಗಳಿಗೆ ಹೋಗಲು ಹೆಚ್ಚು ಇಷ್ಟಪಡುತ್ತಾರೆ. ನಮ್ಮ ಹಿರಿಯರು ಅವರು ಕಾಯಂ ಆಗಿ ಖರೀದಿಸುವ ಅಂಗಡಿಗಳಿಗೆ ಹೋಗಲು ಬಯಸುತ್ತಾರೆ.  ಶಾಪಿಂಗ್‌ ಸಿನಿಮಾ ತಿನ್ನಲು ಚಾಟ್ಸ್‌ ಆಟಗಳು ಎಲ್ಲವೂ ಒಂದೆಡೆ ಸಿಗುವುದರಿಂದ ಮಕ್ಕಳು ಯುವಜನರು ಮಾಲ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಚೌಕಾಸಿಗೆ ಅವಕಾಶವಿರುತ್ತದೆ. ಮಾಲ್‌ಗಳಲ್ಲಿ ಅದಕ್ಕೆ ಅವಕಾಶವಿರಲ್ಲ. ಅದೊಂದು ಅನಾನುಕೂಲತೆ ಇಲ್ಲಿ ಕಾಡುತ್ತದೆ. ಆದರೂ ಈಗಿನ ಮಕ್ಕಳಿಗೆ ಮಾಲ್‌ಗೆ ಅಚ್ಚುಮೆಚ್ಚು ಎಂದು ಅರ್ಬನ್‌ ಓಯಾಸಿಸ್‌ ಮಾಲ್‌ಗೆ ಬಂದಿದ್ದ ವಿಜಯಪುರ ನಿವಾಸಿ ಸ್ನೇಹಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.