ADVERTISEMENT

ಓದೋದು ಬಿಡಬ್ಯಾಡ್ರಿ, ಬರಿಯೋದ್‌ ಮರೀಬ್ಯಾಡ್ರಿ

ಶಿಸ್ತುಬದ್ಧ ಓದು, ಉತ್ತಮ ಕೈಬರಹ, ಮುಖ್ಯಾಂಶಗಳ ಟಿಪ್ಪಣಿ, ಉಜ್ಜಳನೆಯೇ ಯಶಸ್ಸಿನ ಗುಟ್ಟು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 19:30 IST
Last Updated 6 ಡಿಸೆಂಬರ್ 2019, 19:30 IST
ಧಾರವಾಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಜಾನನ ಮನ್ನಿಕೇರಿ
ಧಾರವಾಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಜಾನನ ಮನ್ನಿಕೇರಿ   

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನು 110 ದಿನಗಳು ಮಾತ್ರ ಇವೆ. ಪರೀಕ್ಷೆ ಬರೆಯುವ ಮಕ್ಕಳಲ್ಲಿ ಒತ್ತಡ, ಗೊಂದಲವಿದ್ದರೆ, ಪಾಲಕರಲ್ಲಿ ಮಕ್ಕಳ ಫಲಿತಾಂಶ ಏನಾಗುತ್ತದೋ ಎಂಬ ಚಿಂತೆ. ಉತ್ತಮ ಫಲಿತಾಂಶ ಪಡೆಯಲು ಅನುಸರಿಸಬೇಕಾದ ಮಾರ್ಗ, ಗೊಂದಲ, ಪರೀಕ್ಷಾ ಭಯ, ಪ್ರಶ್ನೆಪತ್ರಿಕೆ ಸ್ವರೂಪ, ಓದಿದ್ದನ್ನು ಮನನ ಮಾಡಿಕೊಳ್ಳುವ ಬಗೆ... ಎಂಬಿತ್ಯಾದಿ ವಿಷಯಾಧಾರಿತ ಪ್ರಶ್ನೆಗಳಿಗೆ ‘ಪ್ರಜಾವಾಣಿ’ ಹುಬ್ಬಳ್ಳಿ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಜಾನನ ಮನ್ನಿಕೇರಿ ಸಾವಧಾನವಾಗಿ, ಸವಿವರವಾಗಿ ಉತ್ತರಿಸಿದರು.

ಧಾರವಾಡವಲ್ಲದೇ, ಬಾಗಲಕೋಟೆ, ಮಂಡ್ಯ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು, ಪಾಲಕರು ಕರೆ ಮಾಡಿ ತಮ್ಮ ಗೊಂದಲಗಳನ್ನು ಪರಿಹರಿಸಿಕೊಂಡರು. ಫೋನ್‌ ಇನ್‌ ಪ್ರಶ್ನೋತ್ತರ ಹೀಗಿವೆ...

ಆಕಾಶ ಮಾಯ್ಕಾರ, ಆದರ್ಶ ಹೈಸ್ಕೂಲ್‌, ಧಾರವಾಡ: ಈ ಬಾರಿಯೂ ಪರೀಕ್ಷೆಯಲ್ಲಿ 100ಕ್ಕೆ 100 ಅಂಕ ಪಡೆಯಲು ಸಾಧ್ಯವೇ? ಅದಕ್ಕೆ ಯಾವ ರೀತಿ ತಯಾರಿ ನಡೆಸಬೇಕು?

ADVERTISEMENT

ಉತ್ತರ: ಖಂಡಿತ, ಚೆನ್ನಾಗಿ ಓದಿದವರು ಯಾವ ಪರೀಕ್ಷೆಯಲ್ಲಾದರೂ 100ಕ್ಕೆ 100 ಅಂಕ ಪಡೆಯಬಹುದು. ಉತ್ತಮ ವೇಳಾಪಟ್ಟಿಗೆ ಅನುಗುಣವಾದ ಓದು, ಸುಂದರ ಮತ್ತು ವೇಗವಾದ ಕೈಬರಹ, ಎಲ್ಲ ಅಧ್ಯಾಯಗಳ ಸಮಗ್ರ ಓದು ಇದಕ್ಕೆ ಅತ್ಯಗತ್ಯ.

ಶೋಭಾ, ಅಮೃತೇಶ್ವರ ಪ್ರೌಢಶಾಲೆ, ಅಣ್ಣಿಗೇರಿ: ಓದಿದ ವಿಷಯಗಳು ನೆನಪಿನಲ್ಲಿ ಉಳಿಯುತ್ತಿಲ್ಲ. ಏನು ಮಾಡಲಿ?

ಉತ್ತರ: ಬೆಳಗಿನ ಅವಧಿಯಲ್ಲಿ ಓದಿದ್ದು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ಮಹತ್ವದ ವಿಷಯಾಂಶಗಳಿಗೆ ‘ಅಂಡರ್‌ಲೈನ್‌’ ಮಾಡಿ. ಅವುಗಳನ್ನು ಟಿಪ್ಪಣಿ ರೂಪದಲ್ಲಿ ಬರೆದು ಕಣ್ಣಿಗೆ ಕಾಣುವಂತೆ ಗೋಡೆ ಮೇಲೆ ಅಂಟಿಸಿ. ಮುಖ್ಯಾಂಶಗಳು ಪದೇ ಪದೇ ಕಣ್ಣಿಗೆ ಬೀಳುವುದರಿಂದ ನೆನಪಿನಲ್ಲಿ ಉಳಿಯುತ್ತವೆ. ಇನ್ನು ಕೆಲ ವಿಷಯಗಳನ್ನು ಕಂಠಪಾಠ ಮಾಡುವುದು ಅನಿವಾರ್ಯ.

ಐಶ್ವರ್ಯಾ, ಅಮೃತೇಶ್ವರ ಪ್ರೌಢಶಾಲೆ, ಅಣ್ಣಿಗೇರಿ: 4 ಅಂಕದ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು?

ಉತ್ತರ: ಎಲ್ಲ ವಿಷಯಗಳಲ್ಲೂ 4 ಅಂಕದ ಪ್ರಶ್ನೆಗಳು ಇರಲಿವೆ. 4 ಅಂಕದ ಪ್ರಶ್ನೆಗೆ ಕನಿಷ್ಠ ಅರ್ಧಪುಟದಿಂದ ಮುಕ್ಕಾಲು ಪುಟ ಉತ್ತರ ಬರೆಯಬೇಕು. ಉತ್ತರ ಕ್ರಮಬದ್ಧ (ಪಾಯಿಂಟ್‌ ವೈಸ್‌) ಆಗಿರಬೇಕು.

ಶ್ರೀಕಾಂತ ದೇಯನ್ನವರ, ಹುಬ್ಬಳ್ಳಿ: ನನ್ನ ಮಗಳು ಎಸ್ಸೆಸ್ಸೆಲ್ಸಿ ಓದುತ್ತಿದ್ದಾಳೆ. ಪರೀಕ್ಷೆ ತಯಾರಿ ಹೇಗೆ ಮಾಡಿಕೊಳ್ಳಬೇಕು.

ನಿಮ್ಮ ಮಗಳಿಗೆ ಓದಿನ ವೇಳಾಪಟ್ಟಿ ಸಿದ್ಧಪಡಿಸಿಕೊಡಿ. ಬೆಳಿಗ್ಗೆ 5ಕ್ಕೆ ಎಬ್ಬಿಸಿ, ಇಂಗ್ಲಿಷ್‌, ವಿಜ್ಞಾನ, ಗಣಿತ ಅಧ್ಯಯನ ಮಾಡುವಂತೆ ತಿಳಿಸಿ. ಎಲ್ಲ ವಿಷಯದ ಪ್ರತಿ ಅಧ್ಯಾಯಗಳಲ್ಲಿ 1 ಹಾಗೂ 2 ಅಂಕದ ಪ್ರಶ್ನೋತ್ತರಗಳ ಪಟ್ಟಿ ಮಾಡಿಕೊಂಡು ಮನನ ಮಾಡಿಕೊಳ್ಳಲು ತಿಳಿಸಿ.

ಗೀತಾ, ಆರ್‌ಎನ್‌ಎಸ್‌ ಪ್ರೌಢಶಾಲೆ, ಧಾರವಾಡ: ವಿಜ್ಞಾನದ ಪ್ರಶ್ನೆಗಳು ಪಠ್ಯದಲ್ಲಿದ್ದಂತೆ ಇರುವುದಿಲ್ಲ. ಏಕೆ?

ಉತ್ತರ: ವಿಜ್ಞಾನದಲ್ಲಿ ಅನ್ವಯಿಕ ಪ್ರಶ್ನೆ ಕೇಳಲಾಗುತ್ತದೆ. ಆಮ್ಲಗಳ ಲಕ್ಷಣದ ಬಗ್ಗೆ ಪ್ರಶ್ನೆ ಕೇಳಿದರೆ ನಿತ್ಯ ಜೀವನದಲ್ಲಿ ನೀವು ಕಾಣುವ ಆಮ್ಲದ ಪ್ರತಿರೂಪ– ಹುಳಿ ಪದಾರ್ಥಗಳಾದ ನಿಂಬೆ, ಹುಣಸೆ, ಮೊಸರು, ಮಜ್ಜಿಗೆಗಳ ಗುಣಲಕ್ಷಣ ನೆನಪಿಸಿಕೊಳ್ಳಬೇಕು.

ಅಲ್ತಾಫ್‌, ದೀಪಾ, ಸಂಗೀತಾ ತಳವಾರ– ಅಣ್ಣಿಗೇರಿ: ಸಮಾ‌ಜ ವಿಜ್ಞಾನದಲ್ಲಿ ಸ್ಕೋರ್‌ ಮಾಡುವುದು ಹೇಗೆ?

ಉತ್ತರ: ಸಮಾಜ ವಿಜ್ಞಾನದಲ್ಲಿ ಐದು ಅಂಕದ ಭಾರತ ನಕ್ಷೆ ಬಿಡಿಸುವ ಪ್ರಶ್ನೆ ಇರುತ್ತದೆ. ಅದನ್ನು ಚೆನ್ನಾಗಿ ರೂಢಿಸಿಕೊಳ್ಳಿ. ಒಂದು ವಾರ ನಿತ್ಯ 10 ನಕ್ಷೆ ಬಿಡಿಸಿ, ಅದರಲ್ಲಿ ಪ್ರಮುಖ ‌ನಗರ, ಅಕ್ಷಾಂಶ, ರೇಖಾಂಶಗಳನ್ನು ಗುರುತಿಸಿ. ಶಾಲೆಯಲ್ಲಿ ನಡೆಯುವ ‘ನಕ್ಷಾ ಸಪ್ತಾಹ’ದಲ್ಲಿ ಭಾಗವಹಿಸಿ. ಪ್ರಮುಖ ಇಸವಿ, ಘಟನಾವಳಿ, ಸ್ಮಾರಕ, ರಾಜಮನೆತನಗಳ ಬಗ್ಗೆ ಬರೆದಿಟ್ಟುಕೊಳ್ಳಿ.

ಐಶ್ವರ್ಯಾ– ಧಾರವಾಡ, ಆಯಿಷಾ ನವಲಗುಂದ– ಉಪ್ಪಿನಬೆಟಗೇರಿ, ಸಾದಿಯಾ– ನವಲೂರು, ಚೇತನಾ ಭಾವಿಕಟ್ಟಿ–‌ ಸೂಳೇಭಾವಿ: ಇಂಗ್ಲಿಷ್ ಮತ್ತು ಗಣಿತ ಕಷ್ಟ ಎನಿಸುತ್ತಿದೆ ಏನು ಮಾಡುವುದು?

ಉತ್ತರ: ಗಣಿತ, ಇಂಗ್ಲಿಷ್‌ ವಿಷಯಗಳೇನೂ ದೆವ್ವ, ಭೂತವಲ್ಲ. ಗಮನ ಕೊಟ್ಟು ಓದಿ, ಮತ್ತೆ– ಮತ್ತೆ ಓದಿ. ಪ್ರಮುಖ ಅಂಶಗಳನ್ನು ಬರೆದು, ಅಭ್ಯಾಸ ಮಾಡಿ. ಗಟ್ಟಿಪಾಠ, ಕಂಠಪಾಠ, ಬರಹಪಾಠ ತಂತ್ರ ಬಳಸಿ.

ವಿಜಯ ಭಾವಿಕಟ್ಟಿ, ಶ್ರೀರಾಮಯ್ಯ ಸ್ವಾಮಿ ಪ್ರೌಢಶಾಲೆ, ಸೂಳೆಭಾವಿ: ಶಿಕ್ಷಕರು ಗಣಿತದ ವಿಷಯಗಳನ್ನು ಬೋರ್ಡ್‌ ಮೇಲೆ ಬರೆದಾಗ ಮನದಟ್ಟಾಗುತ್ತದೆ. ಮನೆಗೆ ಹೋಗಿ ಬಿಡಿಸಲು ಪ್ರಯತ್ನಿಸಿದರೆ ಎಲ್ಲವೂ ಮರೆತು ಹೋಗುತ್ತದೆ.

ಶಾಲೆಯಲ್ಲಿ ಕಲಿತದ್ದನ್ನು ಅದೇ ದಿನ ಸಂಜೆ ಅಭ್ಯಾಸ ಮಾಡಿರಿ. ಗೊಂದಲವಾದರೆ ಮರುದಿನ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ. ಮನೆಯಲ್ಲಿನ ಅಕ್ಕ– ಅಣ್ಣ, ಸಹಪಾಠಿಗಳೊಂದಿಗೆ ಚರ್ಚಿಸಿ, ಆಗ ಕಲಿಕೆ ಸುಲಭವಾಗುತ್ತದೆ.

ನದೀಂ ಶೇಖ್‌–ಧಾರವಾಡ, ಸುದೀಪ್‌ ಗಾಣಿಗೇರ– ಮದರಮಡ್ಡಿ: ಗಣಿತದಲ್ಲಿ ಯಾವ ಪ್ರಮೇಯ ಕಲಿಯಬೇಕು? ಸಮಾಜ ಮತ್ತು ವಿಜ್ಞಾನ ವಿಷಯದಲ್ಲಿ ಯಾವ ಚಿತ್ರ ಹಾಗೂ ನಕ್ಷೆ ಮುಖ್ಯವಾದುದು?

ಉತ್ತರ: ಪರೀಕ್ಷೆಯಲ್ಲಿ ಇದೇ ಪ್ರಮೇಯ, ಚಿತ್ರ, ನಕ್ಷೆ ಬರುತ್ತದೆ ಎಂದು ಹೇಳಲಾಗದು. ಯಾವುದಾದರೂ ಬರಬಹುದು. ಹೀಗಾಗಿ, ಗಣಿತದಲ್ಲಿರುವ ಐದೂ ಪ್ರಮೇಯ ಹಾಗೂ ವಿಜ್ಞಾನ, ಸಮಾಜ ವಿಷಯದಲ್ಲಿ ಬರುವ ಎಲ್ಲ ಚಿತ್ರ, ನಕ್ಷೆ ಬಿಡಿಸುವುದನ್ನು ನೀವು ಕಲಿಯಲೇಬೇಕು.

ಪ್ರಶ್ನೆಪತ್ರಿಕೆ ಊಟದ ತಟ್ಟೆ ಇದ್ದಂತೆ

ಪರೀಕ್ಷೆ ಎಂಬುದು ಫುಲ್‌ಮೀಲ್‌ ಊಟದ ಬಟ್ಟಲಿನಂತೆ. ಅದರಲ್ಲಿ ಉಪ್ಪಿನಕಾಯಿ ಮಾತ್ರ ಇಷ್ಟ; ಅದಷ್ಟೇ ಸಾಕು, ಅದನ್ನಷ್ಟೇ ತಿನ್ನುವೆ ಎನ್ನುವಂತಿಲ್ಲ. ಬಟ್ಟಲಿನಲ್ಲಿ ಇರುವ ಎಲ್ಲ ಪದಾರ್ಥಗಳನ್ನೂ ತಿಂದಾಗ ಮಾತ್ರ ಊಟ ಮುಗಿಸಿದಂತೆ. ಅದೇ ರೀತಿ ಪಠ್ಯ ವಿಷಯವನ್ನು ಸಮಗ್ರವಾಗಿ, ಪರಿಪೂರ್ಣವಾಗಿ ಓದಿದರೆ ಮಾತ್ರ ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆದು ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.

ಭಯ ಇಲ್ಲದೆ ಪರೀಕ್ಷೆ ಎದುರಿಸುವುದು ಹೇಗೆ?

– ಪರೀಕ್ಷೆಗೆ ಇನ್ನೂ 110 ದಿನಗಳಿವೆ. ಈಗಿನಿಂದಲೇ ಟಿ.ವಿ, ಮೊಬೈಲ್‌ನಿಂದ ದೂರವಿರಿ. ಜಾತ್ರೆ, ಮದುವೆ, ಹಬ್ಬ–ಹರಿದಿನಗಳನ್ನು ಬಿಡಿ. ಹೆಚ್ಚುವರಿ ತರಗತಿಗಳಿಗೆ ತಪ್ಪದೇ ಹಾಜರಾಗಿ. ಸಾಧನೆ ಮಾಡುತ್ತೇನೆಂಬ ಛಲ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಇದರಿಂದ ಭಯ ತಂತಾನೇ ದೂರವಾಗುತ್ತದೆ. ಪೋಷಕರು ಕೂಡ ಮನೆಗಳಲ್ಲಿ ಓದಿನ ವಾತಾವರಣ ಕಲ್ಪಿಸಬೇಕು.

(ಪ್ರಶ್ನೆ ಕೇಳಿದವರು: ಮಂಜುನಾಥ ನಾಡಗೇರ– ಹುಬ್ಬಳ್ಳಿ)

**
ಪ್ರಶ್ನೆ ಪತ್ರಿಕೆಯಲ್ಲಿ ಏನೆಲ್ಲಾ ಬದಲಾಗಿದೆ?

– ಪ್ರಶ್ನೆ ಪತ್ರಿಕೆ ಸ್ವರೂಪ ಸಂಪೂರ್ಣ ಬದಲಾಗಿಲ್ಲ. ಒಂದು, ಎರಡು ಮತ್ತು ಮೂರು ಅಂಕಗಳ ಪ್ರಶ್ನೆಗಳ ಜತೆ ಐದು ಅಂಕಗಳ ಪ್ರಶ್ನೆಗಳು ಸೇರ್ಪಡೆಯಾಗಿವೆ. ನೀವು ಪ್ರಶ್ನೆ ಪತ್ರಿಕೆಯ ಕುರಿತು ತಲೆಕೆಡಿಸಕೊಳ್ಳದೇ ಓದಿನತ್ತ ಗಮನಹರಿಸಿ. (ಪ್ರಶ್ನೆ ಕೇಳಿದವರು: ಲಕ್ಷ್ಮಿ ಚಿನ್ನಾಪುರ, ಸೃಷ್ಟಿ ರಾಮದುರ್ಗ, ಶ್ರೀರಾಮಯ್ಯಸ್ವಾಮಿ ಪ್ರೌಢಶಾಲೆ, ಸೂಳೇಭಾವಿ, ಹುನಗುಂದ ತಾಲ್ಲೂಕು, ಬಾಗಲಕೋಟೆ)

ರೇಡಿಯೊ ಪಾಠ ಮತ್ತು ಫೋನ್‌–ಇನ್
ಎಸ್ಸೆಸ್ಸೆಲ್ಸಿ ಮಕ್ಕಳಿಗೆಂದೇ ಪ್ರತಿ ಮಂಗಳವಾರ ಮಧ್ಯಾಹ್ನ 2.30ರಿಂದ 3.15ರವರೆಗೆ ರಾಜ್ಯದಾದ್ಯಂತ ರೇಡಿಯೊ ಪಾಠ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇದಲ್ಲದೇ, ಮಕ್ಕಳ ಮತ್ತು ಪೋಷಕರ ಸಮಸ್ಯೆ ನಿವಾರಣೆಗೆಂದೇ ಪ್ರತಿ ಸೋಮವಾರ ಸಂಜೆ 6ರಿಂದ 8ರವರೆಗೆ ಫೋನ್‌ ಇನ್ ಕಾರ್ಯಕ್ರಮ ಇರುತ್ತದೆ (ಟೋಲ್‌ ಫ್ರೀ ಸಂಖ್ಯೆ: 1800–42–55540). ಇವುಗಳ ಸದುಪಯೋಗ ಪಡೆದುಕೊಳ್ಳಬಹುದು.

ಈ ಬಾರಿ ನೀಲನಕ್ಷೆ ಏಕೆ ಕೊಟ್ಟಿಲ್ಲ?

ಇಲ್ಲ, ಇನ್ನು ಮುಂದೆ ಪ್ರಶ್ನೆ ಪತ್ರಿಕೆಯ ನೀಲನಕ್ಷೆ ಕೊಡುವುದಿಲ್ಲ. ಮಕ್ಕಳು ನಿರ್ದಿಷ್ಟ ಪಾಠಗಳನ್ನು ಮಾತ್ರ ಓದದೇ, ಸಮಗ್ರ ಅಧ್ಯಯನ ಮಾಡಬೇಕು. ಶಿಕ್ಷಕರೂ ಅಷ್ಟೇ ಸಮಗ್ರ ಓದಿಗೆ ಮಕ್ಕಳನ್ನು ಪ್ರೇರೇಪಿಸಬೇಕು. ಎಸ್ಸೆಸ್ಸೆಲ್ಸಿ ಮಕ್ಕಳ ಪರೀಕ್ಷಾ ತಯಾರಿಗಾಗಿ ‘ದೀವಿಗೆ’ ಎಂಬ ಕೈಪಿಡಿ ನೀಡಲಾಗುತ್ತಿದೆ. ಶೀಘ್ರವೇ ಅದು ನಿಮ್ಮ ಶಾಲೆ ತಲುಪಲಿದೆ. (ಪ್ರಶ್ನೆ ಕೇಳಿದವರು ಚೇತನ, ಶಿಕ್ಷಕ, ಮಂಡ್ಯ)

ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳು

* ನಸುಕಿನ ಓದು ಪರಿಣಾಮಕಾರಿ ಎಂಬುದನ್ನು ನೆನಪಿಡಿ

* ಪ್ರತಿನಿತ್ಯ 10 ನಿಮಿಷ ಯೋಗ, ಪ್ರಾಣಾಯಾಮ ಮಾಡಿ

* ಓದಿದ್ದನ್ನು ಮತ್ತೆ ಮತ್ತೆ ಓದಿ, ಮನನ ಮಾಡಿಕೊಳ್ಳಿ

* ವಿಷಯಗಳನ್ನು ಆಸಕ್ತಿಯಿಂದ ಅರ್ಥೈಸಿಕೊಂಡು ಓದಿ

* ಓದಿರುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಂಕ್ಷೇಪಾಕ್ಷರ, ಕೀ ನೋಟ್‌ನಂಥ ತಂತ್ರ ಬಳಸಿ

* ಪಾಠದ ಮುಖ್ಯಾಂಶಗಳನ್ನು ಬರೆದು, ಕಣ್ಣೆದುರು ಕಾಣುವಂತೆ ಗೋಡೆ ಮೇಲೆ ಅಂಟಿಸಿ

* ಗಣಿತ, ವಿಜ್ಞಾನ, ವ್ಯಾಕರಣ ಸೂತ್ರಗಳು ನಿತ್ಯವೂ ಕಣ್ಣಿಗೆ ಕಾಣುವಂತಿರಲಿ

* ಸುಂದರವಾಗಿ, ವೇಗವಾಗಿ ಬರೆಯುವ ಕೌಶಲ ರೂಢಿಸಿಕೊಳ್ಳಿ. ದಿನಕ್ಕೆ ಕನಿಷ್ಠ 12 ಪುಟ ಬರೆಯುವುದನ್ನು ರೂಢಿಸಿಕೊಳ್ಳಿ

* ಗೊಂದಲಗಳಿದ್ದಲ್ಲಿ ಗುರುಗಳೊಂದಿಗೆ, ಸಹಪಾಠಿಗಳೊಂದಿಗೆ, ಅಕ್ಕ–ಅಣ್ಣನೊಂದಿಗೆ ಚರ್ಚಿಸಿ

* ನಿತ್ಯದ ಹಾಗೂ ಭಾನುವಾರದ ವಿಶೇಷ ತರಗತಿಗಳಿಗೆ ತಪ್ಪದೇ ಹಾಜರಾಗಿ

* ಪಾಲಕರು ಮಕ್ಕಳ ಓದಿನ ಜತೆ– ನಿದ್ರೆ, ನೀರಡಿಕೆ, ಊಟ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಫೋನ್‌ ಇನ್‌ ನಿರ್ವಹಣೆ: ಬಿ.ಎನ್‌. ಶ್ರೀಧರ, ಆರ್‌. ಮಂಜುನಾಥ್‌, ಬಸವರಾಜ ಸಂಪಳ್ಳಿ, ಕೃಷ್ಣಿ, ರವಿ ಬಳೂಟಗಿ, ಚನ್ನಬಸಪ್ಪ ರೊಟ್ಟಿ, ಚಂದ್ರಪ್ಪ, ಬಸೀರಅಹ್ಮದ್‌ ನಗಾರಿ. ವಿನ್ಯಾಸ: ಡಿ.ವಿ. ಸಾಂಗಳೇಕರ. ಚಿತ್ರ: ತಾಜುದ್ದೀನ್‌ ಆಜಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.