ADVERTISEMENT

ಕೆಟ್ಟು ಹೋದ ರಸ್ತೆಗಳ ಫೋಟೊ ಅಲ್ಬಂ ನೀಡಿ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 13:05 IST
Last Updated 6 ಸೆಪ್ಟೆಂಬರ್ 2020, 13:05 IST
ಹುಬ್ಬಳ್ಳಿಯಲ್ಲಿ ಭಾನುವಾರ ಆಪ್‌ ಕಾರ್ಯಕರ್ತರು ಸಚಿವ ಬೈರತಿ ಬಸವರಾಜ ಅವರಿಗೆ ಕೆಟ್ಟು ಹೋದ ರಸ್ತೆಗಳ ಫೋಟೊ ಅಲ್ಬಂ ನೀಡಿದರು
ಹುಬ್ಬಳ್ಳಿಯಲ್ಲಿ ಭಾನುವಾರ ಆಪ್‌ ಕಾರ್ಯಕರ್ತರು ಸಚಿವ ಬೈರತಿ ಬಸವರಾಜ ಅವರಿಗೆ ಕೆಟ್ಟು ಹೋದ ರಸ್ತೆಗಳ ಫೋಟೊ ಅಲ್ಬಂ ನೀಡಿದರು   

ಹುಬ್ಬಳ್ಳಿ: ನಗರದಲ್ಲಿ ಕೆಟ್ಟು ಹೋದ ರಸ್ತೆಗಳ ಫೋಟೊಗಳನ್ನು ಅಲ್ಬಂ ಮಾಡಿರುವ ಅಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಭಾನುವಾರ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರಿಗೆ ಅದನ್ನು ನೀಡಿ ರಸ್ತೆ ದುರಸ್ತಿಗೆ ಆಗ್ರಹಿಸಿದರು.

ತೆರಿಗೆ ಪಾವತಿಸಿದರೂ ಇಲ್ಲಿಯ ಜನರಿಗೆ ಉತ್ತಮ ರಸ್ತೆಗಳ ಭಾಗ್ಯವಿಲ್ಲ. ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಹುಬ್ಬಳ್ಳಿ ಪ್ರಮುಖ ಪ್ರದೇಶವಾದರೂ ಕೆಟ್ಟ ರಸ್ತೆಗಳಿಂದ ಟೀಕೆಗೆ ಗುರಿಯಾಗುತ್ತಿದೆ. ಆದ್ದರಿಂದ ತುರ್ತಾಗಿ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಮನವಿ ಮಾಡಿದರು.

ಪಕ್ಷದ ಜಿಲ್ಲಾ ಘಟಕದ ಸಂಯೋಜಕ ವಿಕಾಸ ಸೊಪ್ಪಿನ, ಕಾರ್ಯಕರ್ತರಾದ ಶಶಿಕುಮಾರ ಸುಳ್ಳದ, ಶಿವಕುಮಾರ ಬಾಗಲಕೋಟ, ಮಹಬೂಬ ಹರವಿ, ಭೀಮಸಿ ಪೂಜಾರ, ಗಣೇಶ ಇದ್ದರು.

ADVERTISEMENT

ಪ್ರತಿಭಟನೆ: ನಗರದ ಸರ್ಕಿಟ್‌ ಹೌಸ್‌ ಮುಂಭಾಗದಲ್ಲಿ ಕರ್ನಾಟಕ ಸಂಗ್ರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪಾದಾಚಾರಿ ರಸ್ತೆಯನ್ನು ಅತಿಕ್ರಮಣ ಮಾಡಲಾಗಿದ್ದು, ಸ್ಥಳೀಯ ಅಧಿಕಾರಿಗಳು ತೆರವು ಮಾಡುತ್ತಿಲ್ಲ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ಸದಸ್ಯರು ಕೂಡ ಪ್ರತಿಭಟನೆ ಮಾಡಿ ’ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ 51 ಆಟೊ ಟಿಪ್ಪರ್‌ ಚಾಲಕರಿಗೆ ಕೆಲಸ ನಿರಾಕರಿಸಲಾಗಿದೆ. ಪೌರ ಕಾರ್ಮಿಕರಿಗೆ ಬರಬೇಕಿರುವ ಬಾಕಿ ಪಿಂಚಣಿ ಹಣ ಬಂದಿಲ್ಲ. ಇದಕ್ಕೆ ತಕ್ಷಣ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು. ಎರಡೂ ಸಂಘದವರಿಂದ ಮನವಿ ಸ್ವೀಕರಿಸಿದ ಸಚಿವರು ಕ್ರಮ ತಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.