ADVERTISEMENT

ನಿಧಿ ಆಸೆ ತೋರಿಸಿ ವಂಚನೆ: ಐದು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 14:26 IST
Last Updated 2 ಸೆಪ್ಟೆಂಬರ್ 2018, 14:26 IST

ಹುಬ್ಬಳ್ಳಿ: ನಿಧಿ ಆಸೆ ತೋರಿಸಿ ಮನೆ ಮಾಲೀಕನಿಂದ ಹಣ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಹಾವೇರಿ ಜಿಲ್ಲೆಯ ಶಿಗ್ಗಾವಿಯ ಐದು ಮಂದಿಯನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜು ಜೋಳದ್, ಮಲ್ಲೇಶಪ್ಪ ಹರಿಜನ, ಶ್ರೀಕಾಂತ ಪುಟ್ಟೇನವರ್, ನಾಗನಗೌಡ ಮುದಿಗೌಡ ಹಾಗೂ ಯಲ್ಲಪ್ಪ ಹಳಕಟ್ಟಿ ಬಂಧಿತರು. ಕೆ.ಬಿ. ನಗರದ ನಿವಾಸಿ ವೃತ್ತಿಯಲ್ಲಿ ಚಾಲಕನಾಗಿರುವ ಮಾರುತಿ ಮುಚಗಿ ಎಂಬುವರಿಂದ ಆರೋಪಿಗಳು ಹಣ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಸ್ವಾಮೀಜಿ ಎಂದು ಹೇಳಿಕೊಂಡು ಓಡಾಡುವ ಬಸವರಾಜ ಎಂಬಾತ ಮಾರುತಿ ಅವರನ್ನು ಸಂಪರ್ಕಿಸಿ ‘ನಿಮ್ಮ ಮನೆಯಲ್ಲಿ ನಿಧಿ ಇರುವ ಬಗ್ಗೆ ಕನಸು ಬಿದ್ದಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣ, ಹಣ ಇದೆ. ಅದನ್ನು ತೆಗೆಯಬೇಕು. ಅದಕ್ಕೂ ಮೊದಲು ವಿಶೇಷ ಪೂಜೆ ಮಾಡಬೇಕು’ ಎಂದು ಹೇಳಿ ಹಣ ಪಡೆದಿದ್ದ. ಆ ನಂತರ ಅವರು ಮನೆಯಲ್ಲಿ ಅಗೆದರೂ ಏನೂ ಸಿಕ್ಕಿರಲಿಲ್ಲ’ ಎಂದು ಇನ್‌ಸ್ಪೆಕ್ಟರ್ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ADVERTISEMENT

‘ಮಾರುತಿ ಅವರು ಬಡವರಾಗಿದ್ದು, ಅವರ ಮೂರು ಹಾಗೂ ಸಹೋದರನ ಆರು ಮಕ್ಕಳ ಜವಾಬ್ದಾರಿಯನ್ನು ಅವರೇ ಹೊತ್ತಿದ್ದರು. ತೀರ ಸಂಕಷ್ಟದಲ್ಲಿದ್ದ ಅವರು, ಆರೋಪಿಗಳ ಮಾತನ್ನು ನಂಬಿ ₹21 ಸಾವಿರ ಹಣ ನೀಡಿದ್ದರು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.