ADVERTISEMENT

ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅಗತ್ಯ: ಕೆ.ಜಿ.ಶಾಂತಿ

ಪೊಲೀಸ್ ಹುತಾತ್ಮರ ದಿನ: ಜಿಲ್ಲಾ ನ್ಯಾಯಾಧೀಶೆ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 5:16 IST
Last Updated 22 ಅಕ್ಟೋಬರ್ 2022, 5:16 IST
ಧಾರವಾಡ ಡಿಎಆರ್ ಮೈದಾನದಲ್ಲಿರುವ ಪೊಲೀಸ್ ಸ್ಮಾರಕಕ್ಕೆ ಕೆ.ಜಿ.ಶಾಂತಿ ಶುಕ್ರವಾರ ಗೌರವ ಸಮರ್ಪಿಸಿದರು
ಧಾರವಾಡ ಡಿಎಆರ್ ಮೈದಾನದಲ್ಲಿರುವ ಪೊಲೀಸ್ ಸ್ಮಾರಕಕ್ಕೆ ಕೆ.ಜಿ.ಶಾಂತಿ ಶುಕ್ರವಾರ ಗೌರವ ಸಮರ್ಪಿಸಿದರು   

ಧಾರವಾಡ: ‘ಸಮಾಜದ ಶಾಂತಿ, ಸುವ್ಯವಸ್ಥೆ ಮತ್ತು ಕಾನೂನು ಪಾಲನೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ.ನಾಗರಿಕರ ಸಂರಕ್ಷಣೆ ಮತ್ತು ಸಾರ್ವಜನಿಕ ಆಸ್ತಿಯ ರಕ್ಷಕರಾದ ಪೊಲೀಸ್ ವ್ಯವಸ್ಥೆಗೆ ಸಾರ್ವಜನಿಕರ ಸಹಕಾರ ಮುಖ್ಯ’ ಎಂದು ಜಿಲ್ಲಾ ನ್ಯಾಯಾಧೀಶೆ ಕೆ.ಜಿ.ಶಾಂತಿ ಹೇಳಿದರು.

ಇಲ್ಲಿನ ಡಿಎಆರ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಸ್ಮಾರಕಕ್ಕೆ ಗೌರವ ಸಮರ್ಪಿಸಿ ಅವರು ಮಾತನಾಡಿದರು.

‘ಪೊಲೀಸ್ ಇಲಾಖೆ ಶಾಂತಿ, ಸುವ್ಯವಸ್ಥೆ ಕಾಪಾಡುವುದರೊಂದಿಗೆ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ತಮ್ಮ ಜೀವ ಪಣಕ್ಕಿಟ್ಟು ಸಾರ್ವಜನಿಕರನ್ನು ಮತ್ತು ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಕೆಲಸ ಮಾಡುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಮತ್ತು ಆಧುನಿಕ ಆಯುಧಗಳನ್ನು ಪೂರೈಸುವ ಅಗತ್ಯವಿದೆ’ ಎಂದರು.

ADVERTISEMENT

‘ಸಾರ್ವಜನಿಕರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುವಾಗ ಪ್ರಾಣ ಕಳೆದುಕೊಂಡ ಪೊಲೀಸ್ ಸಿಬ್ಬಂದಿಗೆ ಆರ್ಥಿಕ ನೆರವು ನೀಡುವುದು ಮಾತ್ರ ಪರಿಹಾರವಲ್ಲ. ಪ್ರಾಣ ಕಳೆದುಕೊಂಡ ಯೋಧನ ಕುಟುಂಬಕ್ಕೆ ಆಸರೆಯಾಗುವುದು ನಮ್ಮೆಲ್ಲರ ಕರ್ತವ್ಯ’ ಎಂದು ನ್ಯಾಯಾಧೀಶೆ ಶಾಂತಿ ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಮಾತನಾಡಿ, ‘ಪ್ರಸಕ್ತ ಸಾಲಿನಲ್ಲಿ ದೇಶದ ಆಂತರಿಕ ಸುರಕ್ಷತೆ ಕಾಪಾಡುವಲ್ಲಿ 264 ಪೊಲೀಸ್ ಅಧಿಕಾರಿಗಳು ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿದ್ದಾರೆ. ಇವರಲ್ಲಿ ಧಾರವಾಡದ ಒಬ್ಬರು ಸೇರಿ ಕರ್ನಾಟಕದ 11 ಪೊಲೀಸರು ಇದ್ದಾರೆ’ ಎಂದರು.

ಅರಣ್ಯ ಸಂರಕ್ಷಣಾಧಿಕಾರಿ ಮನೋಜ ತ್ರಿಪಾಠಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೌರಭಕುಮಾರ್ ಇದ್ದರು. ಜಿಲ್ಲೆಯ ಹುತಾತ್ಮ ಕಾನ್‌ಸ್ಟೆಬಲ್‌ ಪಂಡಿತ್ ಕಾಸರ್ ಅವರ ತಂದೆ ಅಮೃತ ಕಾಸರ್ ಹಾಗೂ ತಾಯಿ ಚನ್ನಕ್ಕ ಕಾಸರ್,ಕೈಗಾರಿಕಾ ಭದ್ರತಾ ಪಡೆಯ ಧಾರವಾಡ ಘಟಕದ ಉಪ ಕಮಾಂಡೆಂಟ್ ಗಂಗಯ್ಯ, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಬಿ. ಸುಂಕದ, ಚಂದ್ರಕಾಂತ ಪೂಜಾರ, ಶಿವಾನಂದ ಜಿ. ಚನ್ನಬಸಪ್ಪನವರ, ಸಹಾಯಕ ಆಡಳಿತಾಧಿಕಾರಿ ಮಹಾಂತೇಶ ಎಸ್. ಹಿರೇಮಠ ಇದ್ದರು.

ನಂತರ ಡಿಎಆರ್ ಆರ್‌ಪಿಐ ಎನ್‌.ಎಸ್.ಪಾಟೀಲ ನೇತೃತ್ವದಲ್ಲಿ ಗೌರವ ರಕ್ಷೆ ಜರುಗಿತು. ಡಿಎಆರ್ ಡಿವೈಎಸ್‌ಪಿ ಜಿ.ಸಿ.ಶಿವಾನಂದ, ಡಾ. ವೈ.ಪಿ.ಕಲ್ಲನಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.