ADVERTISEMENT

ಯಾವುದೇ ಕಾರಣಕ್ಕೂ ಕಾನೂನು ಚೌಕಟ್ಟನ್ನು ಮೀರದಿರಿ: ಬಡಿಗೇರ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 7:19 IST
Last Updated 2 ಏಪ್ರಿಲ್ 2021, 7:19 IST
   

ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ನೆರವು ಕೋರಿ ಬಂದವರ ಅಳಲು ಆಲಿಸಿ ನಿಷ್ಪಕ್ಷಪಾತವಾಗಿ‌ ಕಾರ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಕಾನೂನು‌ ಚೌಕಟ್ಟು ಮೀರಬಾರದು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಎ.ಆರ್. ಬಡಿಗೇರ ಹೇಳಿದರು.

ನಗರದ ಗೋಕುಲ ಹೊಸ ಸಿ.ಆರ್. ಮೈದಾನದಲ್ಲಿ ಶುಕ್ರವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1992 ರಿಂದ 2000 ವರೆಗೆ ಹುಬ್ಬಳ್ಳಿ ಅತಿ ಸೂಕ್ಷ್ಮ ಪ್ರದೇಶವಾಗಿತ್ತು. ಕೊಮು ಘರ್ಷಣೆಗಳಾಗುತ್ತಿದ್ದ ನಗರದಲ್ಲಿ ಇದೀಗ ಮತ್ತೆಕಾನೂನು ಸುವ್ಯವಸ್ಥೆಯನ್ನು ಸರಿ ದಾರಿಗೆ ತರಲಾಗಿದೆ. ಅವಳಿ ನಗರದ ಪೊಲೀಸರ ಶ್ರಮ‌ವೇ ಇದಕ್ಕೆ ಕಾರಣ ಎಂದರು.

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಶಿಸ್ತು ಅಗತ್ಯ. ಪೊಲೀಸರು ಸಮಯ ಪ್ರಜ್ಞೆಯಿಂದ ವೃತ್ತಿಯಲ್ಲಿ ತೊಡಗಿಕೊಂಡು, ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಬಡವರ ಸಮಸ್ಯೆಗಳನ್ನು ಕಳಕಳಿಯಿಂದ ಬಗೆಹರಿಸಿ ಕಾನೂನು ನೆರವು ನೀಡಿದರೆ, ಜೀವನ ಪೂರ್ತಿ ಅವರು ನಿಮಗೆ ಅಭಾರಿಯಾಗಿರುತ್ತಾರೆ ಎಂದು ಹೇಳಿದರು.

ADVERTISEMENT

ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಉತ್ತಮ ವಾಹನ, ಕಟ್ಟಡ, ಕಂಪ್ಯೂಟರ್ ಸೌಲಭ್ಯಗಳಿವೆ. ವೈದ್ಯರ ಹಾಗೆ ಪೊಲೀಸರು ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ ಸರಿಪಡಿಸಬೇಕು. ಇತ್ತೀಚಿನ ದಿನಗಳಲ್ಲಿ ಪದವಿ‌ ಹಾಗೂ ಸ್ನಾತಕೋತ್ತರ ಪದವಿ ಪಡೆದವರು ಸಹ ಪೊಲೀಸ್ ವೃತ್ತಿಗೆ ಆಗಮಿಸುತ್ತಿದ್ದಾರೆ ಎಂದರು.

ಪೊಲೀಸ್ ಕಮಿಷನರ್ ಲಾಬೂರಾಮ್ ಮಾತನಾಡಿ, ಏಪ್ರಿಲ್ 2 ಮಹತ್ವದ ದಿನ.1965 ರಲ್ಲಿ ಏಪ್ರಿಲ್ 2 ರಂದು ಕರ್ನಾಟಕ ಪೊಲೀಸ್ ಕಾಯ್ದೆಯ ಮೂಲಕ ಕರ್ನಾಟಕ್ಕೆ ಪೊಲೀಸ್ ಇಲಾಖೆಯನ್ನು ಪುನರ್ ರಚಿಸಿ ಅಸ್ತಿತ್ವಕ್ಕೆ ತರಲಾಯಿತು. ಇದರ ನೆನಪಿಗಾಗಿ ಧ್ವಜ ದಿನಾಚರಣೆ ಆಚರಿಸಲಾಗುತ್ತದೆ. ಪೊಲೀಸ್ ಧ್ವಜ ಮಾರಾಟದಿಂದ ಬಂದ ಹಣವನ್ನು ನಿವೃತ್ತ ಸಿಬ್ಬಂದಿಯ ಕಲ್ಯಾಣ ನಿಧಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ 2021 ಸಾಲಿನ ಧ್ವಜ ಬಿಡುಗಡೆ ಮಾಡಲಾಯಿತು. ಸ್ಥಳದಲ್ಲಿ ಸಾಂಕೇತಿಕವಾಗಿ‌‌ ಧ್ವಜ ಮಾರಾಟ ಮಾಡಿ ಪೊಲೀಸ್ ಕಲ್ಯಾಣ ನಿಧಿಗೆ ಹಣ ಸಂಗ್ರಹಿಸಲಾಯಿತು. ಮಾರ್ಚ್ ತಿಂಗಳಲ್ಲಿ ನಿವೃತ್ತರಾದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಸಿ.ಎ.ಆರ್ ತುಕಡಿ, ಉತ್ತರ, ದಕ್ಷಿಣ, ಧಾರವಾಡ,ಮಹಿಳಾ, ಸಂಚಾರ ಉಪವಿಭಾಗದ ಪೊಲೀಸ್ ಸಿಬ್ಬಂದಿಯಿಂದ ಪಥ ಸಂಚಲನ ನಡೆಯಿತು. ನಿವೃತ್ತ ಪೊಲೀಸ್ ಅಧಿಕಾರಿಗಳಾದ ಎಸ್.ಎಂ. ಸಂದಿಗಾವಡ, ರವಿ ಎಚ್. ನಾಯಕ್ ಡಿಸಿಪಿ ಕೆ. ರಾಮರಾಜನ್, ಆರ್.ಬಿ. ಬಸರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.