ADVERTISEMENT

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಪೊಲೀಸರಿಗೆ ವಿಶೇಷ ಕಿಟ್

ಅವಳಿ– ನಗರದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲಿರುವ 3 ಸಾವಿರ ಪೊಲೀಸ್– ಗೃಹ ರಕ್ಷಕರು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 16:07 IST
Last Updated 21 ಏಪ್ರಿಲ್ 2019, 16:07 IST
ಚುನಾವಣಾ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಕಮಿಷನರ್ ಎಂ.ಎನ್. ನಾಗರಾಜ ಅಗತ್ಯ ವಸ್ತುಗಳನ್ನು ಒಳಗೊಂಡಿರುವ ಕಿಟ್  ವಿತರಿಸಿದರು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ಶಿವಕುಮಾರ ಇದ್ದಾರೆ–
ಚುನಾವಣಾ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಕಮಿಷನರ್ ಎಂ.ಎನ್. ನಾಗರಾಜ ಅಗತ್ಯ ವಸ್ತುಗಳನ್ನು ಒಳಗೊಂಡಿರುವ ಕಿಟ್  ವಿತರಿಸಿದರು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ಶಿವಕುಮಾರ ಇದ್ದಾರೆ–   

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಅವಳಿ ನಗರಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಸುಮಾರು 3 ಸಾವಿರ ಸಿಬ್ಬಂದಿಗೆ ಕಮಿಷನರ್ ಎಂ.ಎನ್. ನಾಗರಾಜ ಅವರು ಅಗತ್ಯ ವಸ್ತುಗಳನ್ನು ಒಳಗೊಂಡಿರುವ ಕಿಟ್ ಭಾನುವಾರ ವಿತರಿಸಿದರು. ಟೂತ್‌ಪೇಸ್ಟ್– ಬ್ರಶ್, ಸೋಪು, ರೇಸರ್‌, ಬಿಸ್ಕತ್, ಕೊಬ್ಬರಿ ಎಣ್ಣೆ, ಶಾಂಪೂ, ಸೊಳ್ಳೆ ಬತ್ತಿಯನ್ನು ಈ ಕಿಟ್ ಒಳಗೊಂಡಿದೆ.‌

‘ಕರ್ತವ್ಯದ ಸ್ಥಳದಲ್ಲಿ ಸಿಬ್ಬಂದಿಗೆ ಯಾವುದೇ ರೀತಿಯ ಕೊರತೆ ಆಗಬಾರದು ಎಂಬ ಕಾರಣಕ್ಕೆ ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್ ವಿತರಣೆ ಮಾಡಲಾಗಿದೆ. ಪೊಲೀಸ್, ಅರೆ ಸೇನಾ ಪಡೆ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಕಿಟ್ ಪಡೆದುಕೊಂಡಿದ್ದಾರೆ. ಇದೊಂದು ಹೊಸ ಪ್ರಯತ್ನವಾಗಿದೆ’ ಎಂದು ಎಂ.ಎನ್. ನಾಗರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಯಾವ ಸಿಬ್ಬಂದಿ ಎಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಈಗಾಗಲೇ ನಿಯೋಜನೆ ಯೋಜನೆ ರೂಪಿಸಲಾಗಿದೆ. 1,106 ಪೊಲೀಸ್ ಸಿಬ್ಬಂದಿ, 8 ಡಿವೈಎಸ್ಪಿ, 21 ಇನ್‌ಸ್ಪೆಕ್ಟರ್‌ಗಳು ಹಾಗೂ 81 ಎಸ್‌ಐಗಳು, 600 ಗೃಹ ರಕ್ಷಕ ಸಿಬ್ಬಂದಿ, ಅರೆ ಸೇನಾಪಡೆಯ ಸಿಬ್ಬಂದಿ ಮತಗಟ್ಟೆ ಭದ್ರತೆ ನೀಡಲಿದ್ದಾರೆ. ಚಿಕ್ಕಮಂಗಳೂರು, ಬೆಂಗಳೂರಿನಿಂದಲೂ ಪೊಲೀಸರು ಬಂದಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಕೆಲಸದ ಒತ್ತಡದಲ್ಲಿ ಕೆಲವೊಮ್ಮೆ ಅಗತ್ಯ ವಸ್ತುಗಳನ್ನು ಸಹ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಹಣ ನೀಡಿ ಖರೀದಿಸಬೇಕು ಎಂದರೂ ಕೆಲವು ಕಡೆ ಅಂಗಡಿಗಳಿರುವುದಿಲ್ಲ. ಈ ಬಾರಿ ಕಮಿಷನರ್ ಅವರೇ ಕಿಟ್ ನೀಡಿರುವುದರಿಂದ ತುಂಬ ಅನುಕೂಲವಾಗಿದೆ. ನಮಗೆ ಬೇಕಾದ ಎಲ್ಲ ವಸ್ತುಗಳು ಅದರಲ್ಲಿವೆ. ಬಿಸ್ಕತ್ ಪ್ಯಾಕೇಟ್ ಸಹ ಇದ್ದು, ಊಟ ಮಾಡುವುದು ತಡವಾದರೂ ತಾತ್ಕಾಲಿಕವಾಗಿ ಹಸಿವು ನೀಗಿಸಿಕೊಳ್ಳಬಹುದು ಎಂದು ಕಿಟ್ ಪಡೆದ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.