ಹುಬ್ಬಳ್ಳಿ: ‘ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 65 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಬೊಜ್ಜು ಕರಗಿಸುವ ತರಬೇತಿ ನೀಡಲಾಗುತ್ತಿದೆ. ಅವರಲ್ಲಿ ಕೆಲವರು 4 ರಿಂದ 11 ಕೆ.ಜಿವರೆಗೂ ತೂಕ ಇಳಿಸಿಕೊಂಡಿದ್ದಾರೆ’ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.
ನಗರದ ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನದಲ್ಲಿ ಹಮ್ಮಿಕೊಂಡಿರುವ ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ‘ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಪರೀಕ್ಷೆ ಮೂಲಕ ಸ್ಥೂಲಕಾಯದವರನ್ನು ಪತ್ತೆ ಹಚ್ಚಿ, ಅವರಿಗೆ ಜೂನ್ 9ರಿಂದ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. 28 ದಿನದ ತರಬೇತಿಯಲ್ಲಿ ಬಹುತೇಕರು ವ್ಯಾಯಾಮ, ಶ್ರಮ ಹಾಗೂ ಪಥ್ಯಾಹಾರದ ಮೂಲಕ ತೂಕ ಇಳಿಸಿಕೊಂಡಿದ್ದಾರೆ. ಇನ್ನೊಂದು ವಾರ ಶಿಬಿರ ಮುಂದುವರಿಯಲಿದೆ’ ಎಂದರು.
‘ನೇಮಕಾತಿ ಸಂದರ್ಭದಲ್ಲಿ ಎತ್ತರ, ತೂಕ, ಎದೆ ಸುತ್ತಳತೆ, ಓಟ, ಗುಂಡು ಎಸೆತ, ಎತ್ತರ ಜಿಗಿತ ಪರೀಕ್ಷೆ ನಡೆಸಲಾಗುತ್ತದೆ. ನೇಮಕವಾದ ನಂತರ ಅವರು ದೈಹಿಕ ಸದೃಢತೆ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಸಿನಿಮಾದಲ್ಲಿ ತೋರಿಸುವಂತೆ ಪೊಲೀಸರಿಗೆ ಬೊಜ್ಜು ಇರುವುದಿಲ್ಲ. ಆರೋಗ್ಯದ ಸಮಸ್ಯೆಯಿಂದಾಗಿ ಕೆಲವರಿಗೆ ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ತಿಳಿಸಿದರು.
‘40 ವರ್ಷ ಮೇಲ್ಪಟ್ಟವರು ಮಾತ್ರ ತರಬೇತಿಯಲ್ಲಿದ್ದು, ಅದರ ಖರ್ಚನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಬೊಜ್ಜು ಇರುವವರನ್ನು ಮತ್ತೊಮ್ಮೆ ಗುರುತಿಸಿ, ತರಬೇತಿ ನೀಡಲಾಗುವುದು. ಸಿಬ್ಬಂದಿಯ ಕುಟುಂಬವರಿಗೂ ಇದೇ ರೀತಿಯ ತರಬೇತಿ ನೀಡುವ ಕುರಿತು ಚಿಂತಿಸಲಾಗುತ್ತಿದೆ’ ಎಂದು ಕಮಿಷನರ್ ತಿಳಿಸಿದರು.
ಡಿಸಿಪಿ ಮಹಾನಿಂಗ ನಂದಗಾವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.