ಹುಬ್ಬಳ್ಳಿ: ನಗರದ ಕಾರವಾರ ರಸ್ತೆ ಎಂ.ಟಿ. ಮಿಲ್‌ನ ಖಾಲಿ ಜಾಗದ ಬಳಿ ಶುಕ್ರವಾರ ಬೆಳಿಗ್ಗೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ದರೋಡೆ ಪ್ರಕರಣದ ಆರೋಪಿ, ಸ್ಥಳೀಯ ನಿವಾಸಿ ಅರುಣ್ ಮೇಲೆ ಪೊಲೀಸರು ಗುಂಡು ಹಾರಿಸಿದರು.
ಘಟನೆಯಲ್ಲಿ ಉಪನಗರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಡಿ.ಆರ್. ಪಮ್ಮಾರ ಮತ್ತು ತರುಣ್ ಗಡ್ಡನ್ನವರ ಅವರಿಗೆ ಗಾಯಗಳಾಗಿವೆ. ಆರೋಪಿ ಸೇರಿ ಎಲ್ಲರನ್ನೂ ಕಿಮ್ಸ್‌ಗೆ ದಾಖಲಿಸಲಾಗಿದೆ.
ಜುಲೈ 30ರಂದು ತಡರಾತ್ರಿ ಪಶ್ಚಿಮ ಬಂಗಾಳದ ಪ್ರಣಬ್ ದುಲಾಯಿ ಅವರು, ರೈಲ್ವೆ ನಿಲ್ದಾಣಕ್ಕೆ ತೆರಳಲು ಚನ್ನಮ್ಮ ವೃತ್ತದಲ್ಲಿ ಬಾಡಿಗೆ ಆಟೊ ಹತ್ತಿದ್ದರು. ಆಟೊ ಚಾಲಕ ಹಾಗೂ ಮೂವರು ಸೇರಿ ಅವರನ್ನು ಗಬ್ಬೂರ ಬಳಿ ಕರೆದೊಯ್ದು, ನಗದು, ಚಿನ್ನಾಭರಣ, ಮೊಬೈಲ್ ಕಿತ್ತು ಪರಾರಿಯಾಗಿದ್ದರು. ಉಪನಗರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.
'ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನೇಕಾರ ನಗರದಲ್ಲಿ ಗುರುವಾರ ಆರೋಪಿ ಅರುಣನನ್ನು ಬಂಧಿಸಿ, ಶುಕ್ರವಾರ ಬೆಳಿಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಎಂ.ಟಿ. ಮಿಲ್‌ನ ಖಾಲಿ ಜಾಗಕ್ಕೆ ಕರೆದೊಕೊಂಡು ಬಂದಿದ್ದರು. ಆಗ ಅವನು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಇನ್‌ಸ್ಪೆಕ್ಟರ್ ಎಂ.ಎಸ್. ಹೂಗಾರ, ಅವನ ಬಲಗಾಲಿಗೆ ಗುಂಡು ಹೊಡೆದಿದ್ದಾರೆ' ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
'ಬೆಳಗಾವಿ ಸವದತ್ತಿಯಲ್ಲಿ ಬಂಗಾರದ ಅಂಗಡಿಯೊಂದರಲ್ಲಿ ಪಶ್ಚಿಮ ಬಂಗಾಳದ ಪ್ರಣಬ್ ಕೆಲಸ ಮಾಡುತ್ತಿದ್ದು, ಊರಿಗೆ ಹೋಗುವಾಗ ಹುಬ್ಬಳ್ಳಿಯಿಂದ ಹೋಗುತ್ತಿದ್ದರು. ಅಂದು ಚನ್ನಮ್ಮ ವೃತ್ತದ ಬಳಿ ಆಟೊದಲ್ಲಿದ್ದ ನಾಲ್ಕು ಮಂದಿ, ಅವರನ್ನು ವಿಚಾರಿಸಿ ಮಹಿಳೆಯರ ಆಸೆ ತೋರಿಸಿ ಹೋಟೆಲ್'ಗೆ ಕರೆದೊಯ್ದಿದ್ದರು. ಮಹಿಳೆ ಹೆಚ್ಚಿನ ಹಣ ಬೇಡಿಕೆ ಇಟ್ಟಿದ್ದರಿಂದ ಅದೇ ಆಟೊದಲ್ಲಿ ಮರಳಿ ಹೋಗುತ್ತಿದ್ದಾಗ, ನಾಲ್ವರು ಬೆದರಿಸಿ ನಗದು, ಚಿನ್ನಾಭರಣ, ಮೊಬೈಲ್ ಕಿತ್ತುಕೊಂಡಿದ್ದರು' ಎಂದರು.
'ಸದ್ಯ ಆಟೊ ಚಾಲಕ ಅರುಣನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಅವರ ವಿರುದ್ಧ ಕಸಬಾಪೇಟೆ, ಹಳೇ ಹುಬ್ಬಳ್ಳಿ, ಕಮರಿಪೇಟೆ ಠಾಣೆಗಳಲ್ಲಿ 13 ಪ್ರಕರಣಗಳು ದಾಖಲಾಗಿವೆ. ರೌಡಿ ಪಟ್ಟಿಯಲ್ಲೂ ಅವನ ಹೆಸರಿದೆ. ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ, ಹೋಟೆಲ್ ವ್ಯವಸ್ಥಾಪಕರನ್ನು ಹಾಗೂ ಮಹಿಳೆಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ' ಎಂದು ಕಮಿಷನರ್ ವಿವರಿಸಿದರು.
'ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ನಡೆಸಲು ಕೆಲವು ಆಟೊ ಚಾಲಕರು ಗ್ರಾಹಕರನ್ನು ಕರೆದುಕೊಂಡು ಹೋಗುತ್ತಿರುವುದು, ಹೋಟೆಲ್ ವ್ಯವಸ್ಥಾಪಕರ ಜೊತೆ ವ್ಯವಹಾರ ಇಟ್ಟುಕೊಂಡಿರುವ ಮಾಹಿತಿ ಲಭ್ಯವಾಗಿದೆ. ಇಂತಹ ಪ್ರಕರಣದಲ್ಲಿ ಸಾಮಾನ್ಯವಾಗಿ ಯಾರೂ ದೂರು ನೀಡುವುದಿಲ್ಲ. ಕೆಲವು ಆಟೊ ಚಾಲಕರಿಂದ, ಇಡೀ ಆಟೊ ಚಾಲಕರ ಸಂಘಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇಂತವರ ಬಗ್ಗೆ ಆಟೊ ಚಾಲಕರು ಪೊಲೀಸರಿಗೆ ಮಾಹಿತಿ ನೀಡಬೇಕು' ಎಂದು ಕಮಿಷನರ್ ಶಶಿಕುಮಾರ್ ವಿನಂತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.