ADVERTISEMENT

ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಪೊಲೀಸ್ ಥಳಿತ: ಆರೋಪ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 15:47 IST
Last Updated 28 ಮಾರ್ಚ್ 2020, 15:47 IST

ಹುಬ್ಬಳ್ಳಿ: ಕರ್ತವ್ಯ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಪೆಟ್ರೋಲ್ ಬಂಕ್‌ನ ಇಬ್ಬರು ಕೆಲಸಗಾರರಿಗೆ ಪೊಲೀಸರು ಶನಿವಾರ ಥಳಿಸಿದ್ದಾರೆ ಎಂದು ಧಾರವಾಡ ಜಿಲ್ಲಾ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಆರೋಪಿಸಿದೆ.

‘ಉಣಕಲ್ ಕ್ರಾಸ್‌ನಲ್ಲಿರುವ ದೊಡ್ಡಮನಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಕರ್ತವ್ಯ ಮುಗಿಸಿ, ಕೇಶ್ವಾಪುರದಲ್ಲಿರುವ ತಮ್ಮ ಮನೆಗೆ ಬೈಕ್‌ನಲ್ಲಿ ವಾಪಸಾಗುತ್ತಿದ್ದರು. ಸರ್ವೋದಯ ವೃತ್ತದ ಬಳಿ ಅವರನ್ನು ಅಡ್ಡಗಟ್ಟಿರುವ ಪೊಲೀಸರು, ಏಕಾಏಕಿ ಹಲ್ಲೆ ನಡೆಸಿದ್ದಾರೆ’ ಎಂದು ಸಂಘದ ಅಧ್ಯಕ್ಷ ಶಾಂತರಾಜು ಪೋಳ ದೂರಿದರು.

‘ಹಲ್ಲೆಗೊಳಗಾದ ಇಬ್ಬರೂ ಸಮವಸ್ತ್ರ ಧರಿಸಿದ್ದರು. ಅಲ್ಲದೆ, ತಾವು ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವುದಾಗಿ ಬೇಡಿಕೊಂಡರೂ, ಮನಬಂದಂತೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಘಟನೆ ಕುರಿತು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟಿದ್ದು, ಹಲ್ಲೆ ನಡೆಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇವೆ. ಮತ್ತೆ ಇಂತಹ ಘಟನೆಗಳು ಮರುಕಳಿಸಿದರೆ, ಜಿಲ್ಲೆಯಾದ್ಯಂತ ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಪೊಲೀಸರು ಯಾರ ಮೇಲೂ ವಿನಾ ಕಾರಣ ಹಲ್ಲೆ ನಡೆಸಿಲ್ಲ. ಪೆಟ್ರೋಲ್ ಬಂಕ್ ಸಂಘದವರು ಮಾಡಿರುವ ಆರೋಪ ಸುಳ್ಳಿನಿಂದ ಕೂಡಿದೆ’ ಎಂದು ಕೇಶ್ವಾಪುರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುರೇಶ ಕುಂಬಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.