ADVERTISEMENT

ಧಾರವಾಡ | ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ: ಅಲೋಕ್‌ ಕುಮಾರ್‌

ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ 2ನೇ ತಂಡದ ನಿರ್ಗಮನ ಪಥಸಂಚಲನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:05 IST
Last Updated 17 ಸೆಪ್ಟೆಂಬರ್ 2025, 5:05 IST
ಧಾರವಾಡದಲ್ಲಿ ನಡೆದ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ ಎರಡನೇ ತಂಡದ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಪ್ರಶಿಕ್ಷಣಾರ್ಥಿ ಶ್ರೀಶೈಲ ಚಿನಗುಂಡಿ ಅವರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿದರು
ಧಾರವಾಡದಲ್ಲಿ ನಡೆದ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ ಎರಡನೇ ತಂಡದ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಪ್ರಶಿಕ್ಷಣಾರ್ಥಿ ಶ್ರೀಶೈಲ ಚಿನಗುಂಡಿ ಅವರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿದರು   

ಧಾರವಾಡ: ‘ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಕಾನೂನು ಪಾಲನೆ ಆದ್ಯ ಕರ್ತವ್ಯವಾಗಬೇಕು’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಹೇಳಿದರು.

ಇಲ್ಲಿನ ಗಿರಿನಗರದ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ ಎರಡನೇ ತಂಡದ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪೊಲೀಸರ ಸಾಮರ್ಥ್ಯ, ಕಾರ್ಯಕ್ಷಮತೆಯು ತರಬೇತಿ ಅವಲಂಬಿಸಿರುತ್ತದೆ. ಚೆನ್ನಾಗಿ ತರಬೇತುಗೊಳಿಸಿದರೆ ಬದ್ಧತೆ, ಯಶಸ್ವಿ ಕಾರ್ಯನಿರ್ವಹಣೆ ನಿರೀಕ್ಷಿಸಬಹುದು’ ಎಂದರು.

‘ಅಧಿಕಾರಿ ಹಂತದ ಪೊಲೀಸರಿಗೆ ಇಲಾಖೆಯ ತರಬೇತಿಗಳು ಕೇಂದ್ರಿಕೃತವಾಗಿವೆ. ಕಾನ್‌ಸ್ಟೆಬಲ್‌ಗಳಿಗೆ ಉತ್ತಮವಾದ ತರಬೇತಿ ನೀಡಿದರೆ ಪೊಲೀಸ್ ವ್ಯವಸ್ಥೆ ಬಲವಾಗುತ್ತದೆ. ತರಬೇತಿಯಲ್ಲಿ ಪಠ್ಯಕ್ರಮ, ಪ್ರಾಯೋಗಿಕ ತರಬೇತಿ, ದೈಹಿಕ ತರಬೇತಿ ಅಳವಡಿಸಲಾಗಿದೆ. ತರಬೇತಿಯಲ್ಲಿ ಆಮೂಲಾಗ್ರ ಪರಿವರ್ತನೆ ತರಲಾಗಿದೆ’ ಎಂದು ಹೇಳಿದರು.

ADVERTISEMENT

‘ಸಾರ್ವಜನಿಕ ಆಸ್ತಿಪಾಸ್ತಿ, ಜೀವ ರಕ್ಷಣೆಗಾಗಿ ಪೊಲೀಸರು ಕಾರ್ಯನಿರ್ವಹಿಸಬೇಕು. ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಹೊಂದಾಣಿಕೆ ಇರಬೇಕು. ಸಂದಿಗ್ಧ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಿ ಮಾದರಿಯಾಗಿರಬೇಕು.ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿದಿನ ಕನಿಷ್ಠ 45 ನಿಮಿಷ ವ್ಯಾಯಾಮ, ಯೋಗ ಮಾಡಬೇಕು’ ಎಂದು ಸೂಚನೆ ನೀಡಿದರು.

ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ ಎಂ.ಎಂ.ಯಾದವಾಡ ಅವರು ತರಬೇತಿ ಶಾಲೆಯ ವರದಿ ವಾಚನ ಮಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿಸಿಪಿ ಮಹಾನಿಂಗ ನಂದಗಾಂವಿ ಇದ್ದರು.

ಪೊಲೀಸರು ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗಬಾರದು. ಅಪರಾಧಿಗಳಿಂದ ದೂರವಿದ್ದು ಶಿಷ್ಟರನ್ನು ರಕ್ಷಿಸಬೇಕು. ಉತ್ತಮ ಸೇವೆ ನಿರ್ವಹಿಸಬೇಕು
ಅಲೋಕ್ ಕುಮಾರ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ

ತರಬೇತಿಯಲ್ಲಿ ಪ್ರಶಸ್ತಿ ಪಡೆದವರು:

ಸರ್ವೋತ್ತಮ ಪುರಸ್ಕಾರ: ಶ್ರೀಶೈಲ ಚಿನಗುಂಡಿ.

ಒಳಾಂಗಣ ಕ್ರೀಡೆ: ಶ್ರೀನಿವಾಸ ಪಾಟೀಲ (ಪ್ರಥಮ) ಅಜರ್ ಮೈಮೂದ್ (ದ್ವಿತೀಯ) ಹನುಮಂತರಾಯ (ತೃತೀಯ).

ಹೊರಾಂಗಣ ಕ್ರೀಡೆ: ರಾಜಬಕ್ಷಿ ಪಿಂಜಾರ (ಪ್ರಥಮ) ಸಂತೋಷ ಬಿರಾದಾರ (ದ್ವಿತೀಯ) ನಿತಿನ್ ವೈ (ತೃತೀಯ).

ಫೈರಿಂಗ್: ಉಮೇಶ ಸಿದ್ದಪ್ಪ ಪೂಜೇರಿ (ಪ್ರಥಮ) ನಾಗಲಿಂಗ ಕುರಿ (ದ್ವಿತೀಯ) ಶಶಿಭೂಷಣ ಎಂ.ಬಿ. (ತೃತೀಯ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.