ADVERTISEMENT

ಅಧಿಕಾರದಲ್ಲಿದ್ದಾಗ ಮೇಕೆ ತಿಂದವರಿಂದ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ: ಸಿಟಿ ರವಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 6:12 IST
Last Updated 30 ಡಿಸೆಂಬರ್ 2021, 6:12 IST
ಸಿ.ಟಿ. ರವಿ
ಸಿ.ಟಿ. ರವಿ   

ಹುಬ್ಬಳ್ಳಿ: ‘ಅಧಿಕಾರದಲ್ಲಿದ್ದಾಗ ಮೇಕೆ ತಿನ್ನುತ್ತ ಕಾಲಹರಣ ಮಾಡಿದ ಕಾಂಗ್ರೆಸ್‌ ನಾಯಕರು ಈಗ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದರು.

ಬುಧವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಮೇಕೆದಾಟು ಯೋಜನೆಗೆ ನಮ್ಮ ಸರ್ಕಾರ ಬದ್ಧತೆ ಹೊಂದಿದೆ. ಡಿಪಿಆರ್‌ ಸಿದ್ಧವಾಗುತ್ತಿದೆ. ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್‌ ಪಾದಯಾತ್ರೆ ಮಾಡುತ್ತಿದೆ’ ಎಂದರು.

‘ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಕಾಂಗ್ರೆಸ್‌ ತಿರುಕನ ಕನಸು ಕಾಣುತ್ತಿದೆ. ಖಾಲಿ ಇಲ್ಲದ ಕುರ್ಚಿಗೆ ಟವಲ್‌ ಹಾಕುತ್ತಿದೆ’ ಎಂದು ಲೇವಡಿ ಮಾಡಿದರು.

ADVERTISEMENT

‘ಮೋದಿ ಹಠಾವೊ’ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ‘ಅವರು ಏನು ಹೇಳುತ್ತಾರೆ; ಎಲ್ಲವೂ ಅದಕ್ಕೆ ವಿರುದ್ಧವಾಗಿಯೇ ನಡೆಯುತ್ತದೆ. ಸಿದ್ದರಾಮಯ್ಯರ ಮಾತನ್ನು ಅವರ ಮನೆಯವರೇ ಕೇಳುವುದಿಲ್ಲ. ಅವರ ಮೊಮ್ಮಕ್ಕಳು ಕೂಡ ಮೋದಿ ಜಪ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ಅಧಿಕಾರಕ್ಕೆ ಬಂದರೆ ‌ಮತಾಂತರ ನಿಷೇಧ ಕಾಯ್ದೆಯನ್ನು ಒಂದು ವಾರದಲ್ಲಿ ರದ್ದುಪಡಿಸುವುದಾಗಿ ಹೇಳಿರುವ ಕಾಂಗ್ರೆಸ್‌ ಹೇಳಿಕೆ ಕುರಿತು ‘ಕಪಾಲಿ ಬೆಟ್ಟದ ಮೇಲೆ ಮೂರ್ತಿ ಸ್ಥಾಪಿಸಲು ಹೋಗಿ ಅಧಿಕಾರ ಗಿಟ್ಟಿಸಿಕೊಂಡವರು ಈಗ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದಾರೆ. ಸರ್ಕಾರದಲ್ಲಿ ಪದವಿ ಗಿಟ್ಟಿಸಿಕೊಳ್ಳಲು ನವ ಪಾದ್ರಿಗಳ ಹಾಗೆ ಮಾತನಾಡಬೇಕಾಗುತ್ತದೆ. ಇದಕ್ಕಾಗಿ ಅವರ ಪಕ್ಷದಲ್ಲಿ ಪೈಪೋಟಿ ನಡೆಯುತ್ತಿದೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.