ADVERTISEMENT

ಸರ್ಕಾರಕ್ಕೆ ನೂರು ದಿನ; ಜನಪರ ನಡೆಯ ದಿಕ್ಸೂಚಿ: ಸಿಎಂ ಬಸವರಾಜ ಬೊಮ್ಮಾಯಿ

ಸರ್ಕಾರಕ್ಕೆ ನೂರು ದಿನ: ವ್ಯವಸ್ಥೆಯಲ್ಲಿ ಸುಧಾರಣೆ, ಜನರ ತಲಾ ಆದಾಯ ಏರಿಕೆಗೆ ಒತ್ತು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 7:00 IST
Last Updated 4 ನವೆಂಬರ್ 2021, 7:00 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಹುಬ್ಬಳ್ಳಿ: ‘ರಾಜ್ಯ ಸರ್ಕಾರ ನೂರು ದಿನ ಪೂರೈಸಿರುವುದು ದೊಡ್ಡ ಮೈಲಿಗಲ್ಲಾಗದಿದ್ದರೂ, ಮುಂದಿನ ದಿನಗಳಲ್ಲಿ ನಮ್ಮ ಜನಪರ ನಡೆ ಹೇಗಿರಲಿದೆ ಎಂಬುದರ ದಿಕ್ಸೂಚಿಯಾಗಿದೆ.ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಆಡಳಿತವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವುದಕ್ಕೆ ಬೇಕಾದ ನಿರ್ಣಯಗಳನ್ನು ಕೈಗೊಂಡಿರುವ ತೃಪ್ತಿ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೂರು ದಿನಗಳಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ಅಮೃತ ಯೋಜನೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಹೆಚ್ಚಳ ಸೇರಿದಂತೆ ಹಲವು ಯೋಜನೆಗಳು ಜಾರಿಯಾಗಿವೆ.ಆರ್ಥಿಕ ವ್ಯವಸ್ಥೆ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಲಾಗುವುದು’ ಎಂದರು.

‘ವ್ಯವಸ್ಥೆಯಲ್ಲಿ ಸುಧಾರಣೆಯಾಗುವ ಜೊತೆಗೆ, ಜನರ ಬಳಿಗೆ ಸರ್ಕಾರ ಹಾಗೂ ಅದರ ಯೋಜನೆಗಳು ಹೋಗಬೇಕಿದೆ. ಆರ್ಥಿಕತೆ ಬೆಳವಣಿಗೆಗೆ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ತಲಾ ಆದಾಯದಲ್ಲಿಕರ್ನಾಟಕ ಐದನೇ ಸ್ಥಾನದಲ್ಲಿದೆ. ಇದರ ಏರಿಕೆಗಾಗಿ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದವರು, ಬಡವರು ಹಾಗೂ ಮಹಿಳೆಯರನ್ನು ಒಳಗೊಳ್ಳಬೇಕಿದೆ. ಅದಕ್ಕಾಗಿ, ಅವರಿಗೆ ಆರ್ಥಿಕ ನೆರವು ನೀಡುವಂತಹ ವಿಶೇಷ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಜ. 26ರಿಂದ ಜನಸೇವಕ ಜಾರಿ:‘2022 ಜ. 26ರಿಂದ ಜನಸೇವಕ ಯೋಜನೆಯನ್ನು ರಾಜ್ಯದಾದ್ಯಂತ ಹಂತಹಂತವಾಗಿ ಜಾರಿಗೆ ತರಲಾಗುವುದು. ಸದ್ಯ ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುವವರಿಗೆ ತರಬೇತಿ ನೀಡಿ ಅಣಿಗೊಳಿಸಲಾಗುತ್ತಿದೆ. ಅಗತ್ಯವಿರುವ ಜನಸೇವಕರ ನೇಮಕಾತಿ ಹಾಗೂ ತರಬೇತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.