ಹುಬ್ಬಳ್ಳಿ: ದೂರದ ಊರಿನ ಪ್ರೀತಿಯ ಸಹೋದರರಿಗೆ ಸಹೋದರಿಯರು ಪ್ರತಿ ವರ್ಷ ಭಾರತೀಯ ಅಂಚೆ ಇಲಾಖೆ ಮೂಲಕ ಯಾವುದೇ ಸಮಸ್ಯೆಯಿಲ್ಲದೇ ರಾಖಿ ಕಳುಹಿಸುತ್ತಿದ್ದರು. ಆದರೆ, ಈ ವರ್ಷ ಭಾರತೀಯ ಅಂಚೆ ಇಲಾಖೆ ನೂತನವಾಗಿ ಅಳವಡಿಸಿಕೊಂಡಿರುವ ‘ಐ.ಟಿ 2.O’ ತಂತ್ರಜ್ಞಾನ ಮತ್ತು ಸಂಪರ್ಕ ಜಾಲದ ಸರ್ವರ್‌ನಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದ ಅಂಚೆ ಸೇವೆಯಲ್ಲಿ ದಿಢೀರ್ ವ್ಯತ್ಯಯ ಉಂಟಾಗಿದೆ.
ಸ್ಪೀಡ್ ಪೋಸ್ಟ್, ರಿಜಿಸ್ಟರ್ ಪೋಸ್ಟ್, ಪಾರ್ಸಲ್ ಸೇವೆ, ಅಂಚೆ ವಿಮೆ ಹಾಗೂ ಮನಿ ಆರ್ಡರ್ ಸೇವೆಗಳಲ್ಲಿ ಕಳೆದ ಕೆಲ ದಿನಗಳಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.
ರಾಜ್ಯದಲ್ಲಿ ಜೂನ್ 23ರಿಂದ ಪ್ರಾಯೋಗಿಕವಾಗಿ ಈ ತಂತ್ರಜ್ಞಾನ ಅನುಷ್ಠಾನಕ್ಕೆ ಬಂದಿದೆ. ಆಗಸ್ಟ್ 4ರಂದು ದೇಶದ ಹಲವು ರಾಜ್ಯಗಳು ಏಕಕಾಲಕ್ಕೆ ಈ ಸೇವೆಗೆ ತೆರೆದುಕೊಂಡಿದ್ದರಿಂದ ಸರ್ವರ್‌ನಲ್ಲಿ ಸಮಸ್ಯೆ ಕಾಣಿಸಿತು. ರಾಜ್ಯದಲ್ಲಿ ಕಳೆದ ಬುಧವಾರ ಮಧ್ಯಾಹ್ನದ ಬಳಿಕ ಸೇವೆ ಮರಳಿದರೂ ತೀರಾ ನಿಧಾನಗತಿಯಲ್ಲಿದೆ.
ಆಗಸ್ಟ್ 9ರಂದು ರಕ್ಷಾಬಂಧನ ಹಬ್ಬ ಇರುವುದರಿಂದ ಗುರುವಾರ ರಾಖಿ ಹಿಡಿದು ಅಂಚೆ ಕಚೇರಿಗೆ ತೆರಳಿದ ಸಹೋದರಿಯರು, ಮಹಿಳೆಯರು ನಿರಾಸೆಯಿಂದ ಮರಳಿದರು. ಬಹುತೇಕರು ಬೆಳಿಗ್ಗೆಯಿಂದ ಸಂಜೆವರೆಗೂ ಸರತಿಯಲ್ಲೇ ನಿಂತು ಸುಸ್ತಾದರು. ಅಲ್ಲದೇ, ಶ್ರಾವಣ ಮಾಸದಲ್ಲಿ ದೇವಾಲಯಗಳಿಗೆ ಮನಿ ಆರ್ಡರ್ ಮೂಲಕ ಕಾಣಿಕೆ, ದೇಣಿಗೆ ಕಳುಹಿಸಲು ಪ್ರಯತ್ನಿಸಿ ಭಕ್ತರೂ ವಿಫಲರಾದರು.
ಕೋರ್ಟ್ ನೋಟಿಸ್, ಸರ್ಕಾರಿ ಇಲಾಖೆಯ ಪತ್ರಗಳು ಸಾಮಾನ್ಯವಾಗಿ ರಿಜಿಸ್ಟರ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ರವಾನೆಯಾಗುತ್ತವೆ. ನೋಟಿಸ್ ಅಥವಾ ಪತ್ರವೊಂದು ಗಮ್ಯ ತಲುಪುವವರೆಗಿನ ಪ್ರತಿ ಹಂತವು ಅಂಚೆ ಇಲಾಖೆಯಲ್ಲಿ ದಾಖಲೆ ಲಭ್ಯವಾಗುತ್ತದೆ. ನಿಗದಿತ ಸ್ಥಳ ತಲುಪಿದ ಪತ್ರದ ಮಾಹಿತಿಯನ್ನು ಬಟವಾಡೆಗೂ ಮುನ್ನ ಅಂಚೆ ಸಂಪರ್ಕ ಜಾಲದಲ್ಲಿ ನಮೂದಿಸಬೇಕು. ಸರ್ವರ್ ಸಮಸ್ಯೆಯಿಂದ ಬಟವಾಡೆಯಾಗದ ಪತ್ರಗಳು ಅಂಚೆ ಇಲಾಖೆಯಲ್ಲಿಯೇ ಉಳಿಯುವಂತಾಗಿದೆ.
‘ರಾಖಿ ಹಬ್ಬಕ್ಕೂ ಕೆಲ ದಿನಗಳ ಮುಂಚೆ ಹೀಗೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಪಾರ್ಸಲ್ ಸೇವೆ ಬಯಸಿ ಬಂದವರಿಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿ ಹೈರಾಣಾಗಿದ್ದೇವೆ’ ಎಂದು ಹುಬ್ಬಳ್ಳಿಯ ವಿದ್ಯಾನಗರದ ಅಂಚೆ ಕಚೇರಿಯ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.
ರಾತ್ರಿ 9ರವರೆಗೂ ಕಾರ್ಯನಿರ್ವಹಣೆ: ‘ತಾಂತ್ರಿಕ ಸಮಸ್ಯೆಯಿಂದಾಗಿ ಸಿಬ್ಬಂದಿಗಳೆಲ್ಲ ಕಳೆದ ಕೆಲ ದಿನಗಳಿಂದ ರಾತ್ರಿ 9 ಗಂಟೆಯ ವರೆಗೂ ಕಾರ್ಯ ನಿರ್ವಹಿಸುವಂತಾಗಿದೆ. ರಾತ್ರಿ ವೇಳೆ ನೆಟ್‌ವರ್ಕ್ ಚನ್ನಾಗಿ ಬರುವುದರಿಂದ ಅನಿವಾರ್ಯವಾಗಿ ಕೆಲಸ ಮಾಡಲೇಬೇಕಾಗಿದೆ’ ಎಂದು ಮತ್ತೊಬ್ಬ ಸಿಬ್ಬಂದಿ ಹೇಳಿದರು.
ವಿಜಯಪುರ ಬಾಗಲಕೋಟೆ ಬೆಂಗಳೂರಿನಲ್ಲಿರುವ ಸಹೋದರರಿಗೆ ರಾಖಿ ಕಳುಹಿಸಲು ಅಂಚೆ ಕಚೇರಿಗೆ ಬಂದಿದ್ದೆ. ತಾಂತ್ರಿಕ ಸಮಸ್ಯೆಯಿಂದಾಗಿ ಹಬ್ಬದ ದಿನದಂದು ರಾಖಿ ಅವರ ಕೈ ಸೇರುವುದೋ ಇಲ್ಲವೋ ಎನ್ನುವುದೇ ಚಿಂತೆಯಾಗಿದೆಶೃತಿ ಎಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.