ADVERTISEMENT

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಎದುರು ಪೌರ ಕಾರ್ಮಿಕರ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ; 2 ದಿನದೊಳಗೆ ಮುಖಂಡರ ಜತೆ ಸಭೆ ಭರವಸೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 12:53 IST
Last Updated 4 ಜನವರಿ 2020, 12:53 IST
ಮಹಾನಗರ ಪಾಲಿಕೆ ಕಚೇರಿ ಎದುರು ಶನಿವಾರ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ
ಮಹಾನಗರ ಪಾಲಿಕೆ ಕಚೇರಿ ಎದುರು ಶನಿವಾರ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ವಿವಿಧ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಂಘದ ವತಿಯಿಂದ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಯಿತು. ಬೇಡಿಕೆಗಳಿಗೆ ಸಂಬಂಧಿಸಿದ ಫಲಕಗಳನ್ನು ಪ್ರದರ್ಶಿಸಿದ ಪೌರ ಕಾರ್ಮಿಕರು, ಪಾಲಿಕೆ ಆಯುಕ್ತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ನಿಂಗಪ್ಪ ಡಿ. ಮೊರಬದ, ‘ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡುವಲ್ಲಿ ಪೌರ ಕಾರ್ಮಿಕರ ಪಾತ್ರ ದೊಡ್ಡದು. ಆದರೆ, ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡುವಲ್ಲಿ ಮಹಾನಗರ ಪಾಲಿಕೆಯ ಆಯುಕ್ತರು ನಿರ್ಲಕ್ಷ್ಯ ವಹಿಸಿದ್ದಾರೆ. ಆ ಮೂಲಕ, ಪೌರ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ಹೊರ ಹಾಕಿದರು.

‘ನಗರದ ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಐಪಿಡಿ ಸಾಲಪ್ಪ ವರದಿ ಹೇಳಿದೆ. ಅದರಂತೆ, 500 ಮಂದಿಗೆ ಒಬ್ಬರಂತೆ ನೇಮಕಾತಿ ನಡೆಯಬೇಕು. ಆದರೆ, ಅದರ ಪ್ರಕಾರ ನೇಮಕಾತಿ ನಡೆದಿಲ್ಲ. ಖಾಲಿ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳು ಹಾಗೆಯೇ ಉಳಿದುಕೊಂಡಿವೆ’ ಎಂದು ದೂರಿದರು.

ADVERTISEMENT

ಗೌರವ ಅಧ್ಯಕ್ಷ ಬಸಪ್ಪ ಮಾದರ ಮಾತನಾಡಿ, ‘ನ್ಯಾಯಯುತವಾದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಾದ ಸುರೇಶ ಇಟ್ನಾಳ ಅವರಿಗೆ ಮನವಿ ಕೊಟ್ಟರೂ ಕಿವಿಗೊಟ್ಟಿಲ್ಲ. ಅನಿವಾರ್ಯವಾಗಿ ಪೌರ ಕಾರ್ಮಿಕರು ಬೀದಿಗೆ ಬಂದು ಪ್ರತಿಭಟನೆ ನಡೆಸಬೇಕಾದ ಸ್ಥಿತಿಯನ್ನು ಆಯುಕ್ತರೇ ಸೃಷ್ಟಿಸಿದ್ದಾರೆ’ ಎಂದರು.

ಸಭೆ ಭರವಸೆ

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ‘ಪೌರ ಕಾರ್ಮಿಕರ ಬೇಡಿಕೆಗಳಿಗೆ ಸಂಬಂಧಿಸಿದಂತೆ, ಸಂಘದ ಮುಖಂಡರೊಂದಿಗೆ ಎರಡು ದಿನದೊಳಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.‌ ಬಳಿಕ ಪೌರ ಕಾರ್ಮಿಕರು ಪ್ರತಿಭಟನೆ ನಿಲ್ಲಿಸಿದರು.

ಸಂಘದ ಗಂಗಾಧರ ಎಚ್‌. ಟಗರಗುಂಟಿ, ಬಿ.ಬಿ. ಕೆಂಪಣ್ಣವರ, ದುರಗಪ್ಪ ವೀರಾಪುರ, ವೆಂಕಟೇಶ ಟಗರಗುಂಟಿ, ಹೊನ್ನೂರಪ್ಪ ದೇವಗರಿ, ಹಾಲಪ್ಪ ಯರಮಸಾಳ, ರಮೇಶ ರಾಮಯ್ಯನವರ, ಅಶೋಕ ವಂಕರಾಜ, ನಾರಾಯಣ ಕೆ. ತಿಮ್ಮಸಂದ್ರಮ್, ಶಂಕರಪ್ಪ ರಾಸಲೇರ, ಸದಾನಂದ ಕೊನಾಪುರ, ಸಿದ್ಧಪ್ಪ ಶಿರವಾರ, ಶಿವಲಿಂಗಪ್ಪ ಜಾಳಹಳ್ಳಿ, ಮುತ್ತು ಕೇಲೂರ, ಚಂದ್ರು ಕಣೇಕಲ್, ಪೆದ್ದಣ್ಣ ಇದ್ದರು.

ಬೇಡಿಕೆಗಳೇನು?

* ಐಪಿಡಿ ಸಾಲಪ್ಪ ವರದಿ ಪ್ರಕಾರ, 500 ಮಂದಿಗೆ ಒಬ್ಬ ಪೌರ ಕಾರ್ಮಿಕರನ್ನು ನೇಮಕ ಮಾಡಬೇಕು.

* ಪೌರ ಕಾರ್ಮಿಕರ ನೇರ ನೇಮಕಾತಿ ಪ್ರಕ್ರಿಯೆಯನ್ನು ಬೇಗನೆ ಮುಗಿಸಬೇಕು.

* ನವನಗರದಲ್ಲಿ ಪೌರ ಕಾರ್ಮಿಕರ 124 ನಿವೇಶನಗಳ ಖರೀದಿ ಪತ್ರ ನೋಂದಾಯಿಸಿ ಕೊಡಬೇಕು.

* ಪಾಲಿಕೆ ವತಿಯಿಂದ ಪೌರ ಕಾರ್ಮಿಕರಿಗೆ 320 ಮನೆಗಳನ್ನು ತುರ್ತಾಗಿ ಕಟ್ಟಲು ಕಾರ್ಯಪ್ರವೃತ್ತರಾಗಬೇಕು.

* ತುಟ್ಟಿ ಭತ್ಯೆಯ ವ್ಯತ್ಯಾಸದ ಹಣವನ್ನು ನೀಡಬೇಕು.

* ಅನುಕಂಪದ ಆಧಾರದ ಮೇಲೆ ನಡೆಯುವ ನೇಮಕಾತಿ ವಿಳಂಬ ತಪ್ಪಿಸಬೇಕು.

* ನಿವೃತ್ತಿ ಪಿಂಚಣಿ ಮಂಜೂರು ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.