ADVERTISEMENT

ನೇರ ವೇತನಕ್ಕೆ ಪೌರ ಕಾರ್ಮಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 13:55 IST
Last Updated 1 ಡಿಸೆಂಬರ್ 2020, 13:55 IST
ನೇರ ವೇತನಕ್ಕೆ ಆಗ್ರಹಿಸಿ, ತಮ್ಮ ಮನೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ಗುತ್ತಿಗೆ ಪೌರ ಕಾರ್ಮಿಕರೊಂದಿಗೆ ಶಾಸಕ ಪ್ರಸಾದ ಅಬ್ಬಯ್ಯ ಮತ್ತು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಮಾತನಾಡಿದರು
ನೇರ ವೇತನಕ್ಕೆ ಆಗ್ರಹಿಸಿ, ತಮ್ಮ ಮನೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ಗುತ್ತಿಗೆ ಪೌರ ಕಾರ್ಮಿಕರೊಂದಿಗೆ ಶಾಸಕ ಪ್ರಸಾದ ಅಬ್ಬಯ್ಯ ಮತ್ತು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಮಾತನಾಡಿದರು   

ಹುಬ್ಬಳ್ಳಿ: ಎಲ್ಲಾ ಪೌರ ಕಾರ್ಮಿಕರನ್ನುನೇರ ವೇತನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿ, ನೂರಕ್ಕೂ ಹೆಚ್ಚುಗುತ್ತಿಗೆ ಪೌರ ಕಾರ್ಮಿಕರು ಮಂಗಳವಾರ ಶಾಸಕ ಪ್ರಸಾದ ಅಬ್ಬಯ್ಯ ಅವರ ಮನೆ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪಾಲಿಕೆಯು ಇತ್ತೀಚೆಗೆ 1,001 ಪೌರ ಕಾರ್ಮಿಕರನ್ನು ನೇರ ವೇತನಕ್ಕೆ ಒಳಪಡಿಸಿ, ಉಳಿದ 738ಕ್ಕೂ ಕಾರ್ಮಿಕರು ಇದರಿಂದ ವಂಚಿತರಾಗಿದ್ದಾರೆ. ಅವರ ಕೆಲಸಕ್ಕೆ ಕುತ್ತು ಬರುವ ಆತಂಕ ಎದುರಾಗಿದೆ. ಹಾಗಾಗಿ, ಎಲ್ಲರನ್ನೂ ನೇರ ನೇಮಕಾತಿ ಮಾಡಿಕೊಂಡು ಪಾಲಿಕೆಯೇ ವೇತನ ನೀಡಬೇಕು ಎಂದು ಕಾರ್ಮಿಕರು ಆಗ್ರಹಿಸಿದರು.

ಬೇಡಿಕೆ ಆಲಿಸಿದ ಅಬ್ಬಯ್ಯ, ಸ್ಥಳಕ್ಕೆ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರನ್ನು ಕರೆಯಿಸಿಕೊಂಡು, ‘ಎಲ್ಲಾ ಕಾರ್ಮಿಕರನ್ನು ನೇರ ವೇತನ ಮತ್ತು ನೇಮಕಾತಿ ವ್ಯಾಪ್ತಿಗೆ ಒಳಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ADVERTISEMENT

ಸುರೇಶ ಇಟ್ನಾಳ ಮಾತನಾಡಿ, ‘ಪಾಲಿಕೆಯಲ್ಲಿ ಒಟ್ಟು 1,739 ಪೌರ ಕಾರ್ಮಿಕರಿದ್ದಾರೆ. ಈ ಪೈಕಿ 762 ಹೊರ ಗುತ್ತಿಗೆ ಕಾರ್ಮಿಕರು ಹಾಗೂ 707 ಕಾಯಂ ಇದ್ದಾರೆ.ಕಾಯಂ ಪೈಕಿ 239 ಮಂದಿ ವಯೋನಿವೃತ್ತಿಯಾಗಿದ್ದಾರೆ. ಗುತ್ತಿಗೆ ಕಾರ್ಮಿಕರೊಂದಿಗೆ, ನಿವೃತ್ತರಾದವರ ಜಾಗಕ್ಕೆ 239 ಮಂದಿಯನ್ನೂ ಸೇರಿಸಿಕೊಂಡು ಒಟ್ಟು 1,001 ಕಾರ್ಮಿಕರನ್ನು ನೇರ ವೇತನಕ್ಕೆ ಒಳಪಡಿಸಲಾಗಿದೆ. ಉಳಿದ 738 ಕಾರ್ಮಿಕರನ್ನು ಸೇರಿಸಲು ನಿಯಮದಲ್ಲಿ ಅವಕಾಶವಿದೆಯೇ ಎಂದು ಪರಿಶೀಲಿಸಲಾಗುವುದು. ಈ ಕುರಿತುಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಜತೆಗೂ ಚರ್ಚಿಸಲಾಗುವುದು’ ಎಂದು ಹೇಳಿದರು.

ಇದಕ್ಕೆ ದನಿಗೂಡಿಸಿದ ಅಬ್ಬಯ್ಯ, ‘ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಹಾಗಾಗಿ, ಯಾರೂ ಆತಂಕಕ್ಕೆ ಒಳಗಾಗಬಾರದು. ನಿಮ್ಮ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು’ ಎಂದು ಅಭಯ ನೀಡಿದರು.ಬಳಿಕ ಕಾರ್ಮಿಕರು ಪ್ರತಿಭಟನೆ ನಿಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.