ADVERTISEMENT

ಎಡ್ಯುವರ್ಸ್: ಮಾಹಿತಿ ಕಣಜದಿಂದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 15:44 IST
Last Updated 20 ಏಪ್ರಿಲ್ 2025, 15:44 IST
ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಎಡ್ಯುವರ್ಸ್ ಶೈಕ್ಷಣಿಕ ಮೇಳಕ್ಕೆ ಭಾನುವಾರ ಸಾರ್ವಜನಿಕರು ಭೇಟಿ ನೀಡಿದರು
ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಎಡ್ಯುವರ್ಸ್ ಶೈಕ್ಷಣಿಕ ಮೇಳಕ್ಕೆ ಭಾನುವಾರ ಸಾರ್ವಜನಿಕರು ಭೇಟಿ ನೀಡಿದರು   

ಹುಬ್ಬಳ್ಳಿ: ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಎರಡು ದಿನ ಎಡ್ಯುವರ್ಸ್‌ ಶೈಕ್ಷಣಿಕ ಮೇಳಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳ ಬಗ್ಗೆ ಸಮಗ್ರ ಮಾಹಿತಿ ಪಡೆದರು. ಪಾಲಕರು ಮತ್ತು ಸ್ನೇಹಿತರ ಜೊತೆ ಶಿಕ್ಷಣ ಸಂಸ್ಥೆಗಳ ಮಳಿಗೆಗೆ ಭೇಟಿ ನೀಡಿದ ಅವರು, ಕೋರ್ಸ್‌ಗಳ ಪ್ರಯೋಜನ ಮತ್ತು ಅವಕಾಶ ಬಗ್ಗೆ ವಿವರಣೆ ಪಡೆದರು.

ದೇಶದ ವಿವಿಧ ರಾಜ್ಯಗಳಿಂದ ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ವೈವಿಧ್ಯಮಯ ಕೋರ್ಸ್‌ಗಳ ಬಗ್ಗೆ ಸಮಗ್ರ ಮಾಹಿತಿ ನೀಡುವುದರ ಜೊತೆಗೆ, ಭವಿಷ್ಯದಲ್ಲಿ ಉದ್ಯೋಗಾವಕಾಶ ಮತ್ತು ಆಗುವ ಪ್ರಯೋಜನೆಗಳ ಬಗ್ಗೆ ವಿವರಿಸಿದರು.

ಹಾವೇರಿ, ಬೆಳಗಾವಿ, ಗದಗ, ಕಾರವಾರ ಸೇರಿದಂತೆ ಬೇರೆ ಬೇರೆ ಊರುಗಳಿಂದ ಬಂದಿದ್ದ ವಿದ್ಯಾರ್ಥಿಗಳು, ಮೇಳದಲ್ಲಿ ಆಯೋಜಿಸಲಾಗಿದ್ದ ಮಾದರಿ ನೀಟ್ (NEET) ಪರೀಕ್ಷೆಯಲ್ಲಿ ಪಾಲ್ಗೊಂಡರು. ಮೂರು ಗಂಟೆ ನಡೆದ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ಕೊಡಲಾಯಿತು.

ADVERTISEMENT

ತಂತ್ರಜ್ಞಾನದ ಸದ್ಬಳಕೆ ಮತ್ತು ಭವಿಷ್ಯದ ಕುರಿತು ಐಐಟಿ ಡೀನ್ ಪ್ರೊ. ಎಸ್.ಎಂ.ಶಿವಪ್ರಾದ್ ಅವರು ವಿಶೇಷ ಉಪನ್ಯಾಸ ನೀಡಿದರು. ಕಾಮೆಡ್–ಕೆ ಕುರಿತು ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರೊಫೆಸರ್ ಶ್ರವಣಕುಮಾರ ನಾಯಕ್ ಅವರು ಉಪನ್ಯಾಸ ನೀಡಿದರು. ಶಿಷ್ಯವೇತನದ ಬಗ್ಗೆ ವಿದ್ಯಾಪೋಷಕ್‌ನ ರತ್ನಾ ಹಿಪ್ಪರಗಿ ವಿವರಿಸಿದರು.

‘ಎಡ್ಯುವರ್ಸ್‌ ಮೇಳಕ್ಕೆ ಎರಡೂ ದಿನ ಭೇಟಿ ನೀಡಿದೆ. ಎಲ್ಲಾ ಮಳಿಗೆಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದೆ. ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳನ್ನು ಒಂದೇ ಕಡೆ ಭೇಟಿಯಾಗಲು ಮತ್ತು ಕೆಲವಷ್ಟು ಗೊಂದಲಗಳನ್ನು ನಿವಾರಿಸಿಕೊಳ್ಳಲು ಅನುಕೂಲವಾಯಿತು’ ಎಂದು ಹಾವೇರಿಯ ಸ್ನೇಹಾ ಕಟ್ಟಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೈಕ್ಷಣಿಕ ಮೇಳಗಳು ಆಗಾಗ್ಗೆ ನಡೆದರೆ, ಜಗತ್ತು ಯಾವ ಸ್ವರೂಪದಲ್ಲಿ ಬದಲಾಗುತ್ತಿದೆ ಎಂಬುದು ಅರಿವಿಗೆ ಬರುತ್ತದೆ. ಹೆಚ್ಚು ಖರ್ಚು ಮಾಡದೇ ಮತ್ತು ಊರಿನಿಂದ ಊರಿಗೆ ಅಲೆದಾಡದೇ, ಆಯಾ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳನ್ನು ನೇರವಾಗಿ ಮುಖಾಮುಖಿಯಾಗಲು ಅವಕಾಶ ಸಿಗುತ್ತದೆ’ ಎಂದು ಬ್ಯಾಂಕ್ ಸಿಬ್ಬಂದಿ ಸುರೇಶ ಹಿರೇಮಠ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಎಡ್ಯುವರ್ಸ್ ಶೈಕ್ಷಣಿಕ ಮೇಳದಲ್ಲಿನ ಮಳಿಗೆಗೆ ವಿದ್ಯಾರ್ಥಿನಿಯರು ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.